ಮಂಗಳೂರು(ಜು.11): ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೋನಾ ಮಹಾಮಾರಿಯ ಆರ್ಭಟಕ್ಕೆ ಜಿಲ್ಲೆಯ ಜನತೆ ಬೆಚ್ಚಿಬಿದ್ದಿದ್ದಾರೆ. ಜಿಲ್ಲೆಯಲ್ಲಿ ಶುಕ್ರವಾರ ಒಂದೇ ದಿನ ಸೋಂಕು ಸಾವಿನ ಸಂಖ್ಯೆ ಸ್ಫೋಟಗೊಂಡಿದ್ದು, ಬರೋಬ್ಬರಿ 8 ಸಾವಿನ ಪ್ರಕರಣಗಳು ದಾಖಲಾಗಿವೆ. ಮೃತಪಟ್ಟವರಲ್ಲಿ ಸಿಐಎಸ್‌ಎಫ್‌ನ ಅಧಿಕಾರಿ ಸೇರಿದ್ದಾರೆ. ಇದರೊಂದಿಗೆ ಜಿಲ್ಲೆಯಲ್ಲಿ ಇದುವರೆಗೆ ಕೊರೋನಾಕ್ಕೆ ಬಲಿಯಾದವರ ಸಂಖ್ಯೆ 38ಕ್ಕೆ ಏರಿಕೆಯಾಗಿದೆ.

ಸೋಂಕಿತರ ಸಂಖ್ಯೆಯಲ್ಲೂ ಭಾರೀ ಏರಿಕೆಯಾಗಿದ್ದು, ಒಂದೇ ದಿನ 139 ಮಂದಿಗೆ ಶುಕ್ರವಾರ ಪಾಸಿಟಿವ್‌ ವರದಿ ಬಂದಿದೆ. ಬಹುತೇಕ ಪ್ರಕರಣಗಳಲ್ಲಿ ಸೋಂಕಿನ ಮೂಲವೇ ಪತ್ತೆಯಾಗದಿರುವುದು ಜಿಲ್ಲೆಯನ್ನು ಇನ್ನಷ್ಟುಸಂಕಷ್ಟಕ್ಕೆ ದೂಡಿದೆ. ಇನ್ನು ಆಶಾದಾಯಕ ಬೆಳವಣಿಗೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದ 51 ಮಂದಿ ಸೋಂಕು ಮುಕ್ತರಾಗಿ ಮನೆಗೆ ಮರಳಿದ್ದಾರೆ.

ಕುದ್ರೋಳಿ ತಂಡದ ಜಾದೂಗಾರ ಯತೀಶ್‌ ಕೊರೋನಾಗೆ ಬಲಿ!

ಮೃತಪಟ್ಟವರಲ್ಲಿ 50 ವರ್ಷ ವಯಸ್ಸಿನೊಳಗಿನ ಇಬ್ಬರು ಇದ್ದರೆ, ಉಳಿದ ಆರು ಮಂದಿ 50 ವರ್ಷದ ಮೇಲ್ಪಟ್ಟವರು. ಎಲ್ಲರೂ ವಿವಿಧ ಕಾಯಿಲೆಗಳಿಂದ ಬಳಲುತ್ತಿದ್ದರು ಎಂದು ತಿಳಿದುಬಂದಿದೆ. ಮಧುಮೇಹ ಯಕೃತ್‌, ಸಿರೋಸಿಸ್‌ನಿಂದ ಬಳಲುತ್ತಿದ್ದ 68 ವರ್ಷದ ವೃದ್ಧ ಜು.8ರಂದು ಮೃತಪಟ್ಟಿದ್ದರು. ಸ್ಥೂಲಕಾಯದಿಂದ ಬಳಲುತ್ತಿದ್ದ 35 ವರ್ಷದ ಯುವಕ, ಇನ್ನು ಕಿಡ್ನಿ ವೈಫಲ್ಯ, ಹೃದಯ ಸಂಬಂಧಿ ಕಾಯಿಲೆ, ಮಧುಮೇಹ, ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದ 67 ವರ್ಷದ ವೃದ್ಧ, ಮಧುಮೇಹ, ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದ 57 ವರ್ಷದ ಪುರುಷ, ಸೆಪ್ಟಿಸೆಮಿಯಾ ಸಹಿತ ಬಹುಅಂಗಾಂಗ ವೈಫಲ್ಯತೆಯಿಂದ ಬಳಲುತ್ತಿದ್ದ 55 ವರ್ಷದ ಪುರುಷ ಜು.9ರಂದು ಮೃತಪಟ್ಟಿದ್ದರು.

ಮಧುಮೇಹ ಹಾಗೂ ರಕ್ತದೊತ್ತಡದಿಂದ ಬಳಲುತ್ತಿದ್ದ 65 ವರ್ಷದ ವೃದ್ಧ, ಮಧುಮೇಹ, ಕಿಡ್ನಿ ವೈಫಲ್ಯ, ಹೃದಯಸಂಬಂಧಿ ಕಾಯಿಲೆ, ತೀವ್ರ ಪ್ರತಿರೋಧಕ ಶ್ವಾಸಕೋಶ ಸಮಸ್ಯೆಯಿಂದ ಬಳಲುತ್ತಿದ್ದ 48 ವರ್ಷದ ಪುರುಷ, ಮಧುಮೇಹದಿಂದ ಬಳಲುತ್ತಿದ್ದ 58 ವರ್ಷದ ಮಹಿಳೆಯು ಶುಕ್ರವಾರ ಮೃತಪಟ್ಟಿದ್ದಾರೆ. ಸಾವಿನ ಕಾರಣ ನಿರ್ಧರಿಸಲು ಜಿಲ್ಲಾ ತಜ್ಞರ ಸಮಿತಿಯಿಂದ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಸಿಂಧು ರೂಪೇಶ್‌ ತಿಳಿಸಿದ್ದಾರೆ.

ಬಿಲ್‌ ನೋಡಿ ಬೆಚ್ಚಿ ಆಸ್ಪತ್ರೆಯಿಂದಲೇ ಎದ್ದು ಹೋದ ಕೊರೋನಾ ಸೋಂಕಿತರು..!

ಶುಕ್ರವಾರ ಒಂದೇ ದಿನ ಪಾಸಿಟಿವ್‌ ದೃಢಪಟ್ಟ139 ಮಂದಿಯಲ್ಲಿ ಬಹುತೇಕರಿಗೆ ಸೋಂಕಿನ ಮೂಲ ಪತ್ತೆಯಾಗಿಲ್ಲ. 15 ಪ್ರಕರಣಗಳಲ್ಲಿ ಸೋಂಕು ಮೂಲ ಇನ್ನೂ ಪ್ರಗತಿಯಲ್ಲಿದ್ದರೆ, ಉಳಿದವು ಹೆಚ್ಚಿನರು ತೀವ್ರ ಉಸಿರಾಟ ಸಮಸ್ಯೆಯಿಂದ ಬಳಲುವವರಾಗಿದ್ದಾರೆ. ಸೋಂಕು ಮೂಲ ಪತ್ತೆಯಾಗದ ಪ್ರಕರಣಗಳು ಜಿಲ್ಲೆಯಲ್ಲಿ ಹೆಚ್ಚುತ್ತಲೇ ಇರುವುದರಿಂದ ಮುಂದಿನ ದಿನಗಳಲ್ಲಿ ತೀವ್ರ ಇಕ್ಕಟ್ಟಿನ ಪರಿಸ್ಥಿತಿ ಎದುರಾಗುವ ಅಪಾಯವಿದೆ.

ಒಟ್ಟು ಸೋಂಕಿತರು- 1848

ಗುಣಮುಖರು- 753

ಮೃತರು- 38

ಚಿಕಿತ್ಸೆ ಪಡೆಯುತ್ತಿರುವವರು- 1057