ಹುಬ್ಬಳ್ಳಿ(ಡಿ.26): ಎಪಿಎಂಸಿ ತಿದ್ದುಪಡಿ ಕಾಯ್ದೆ ಸೇರಿದಂತೆ ಕೃಷಿ ಕಾಯ್ದೆಗಳಿಂದ ರೈತರಿಗೆ ಯಾವುದೇ ಬಗೆಯ ನಷ್ಟ ಉಂಟಾಗುವುದಿಲ್ಲ. ಆದರೆ, ದಲ್ಲಾಳಿಗಳ ಪರವಾಗಿ ಕಾಂಗ್ರೆಸ್‌ ಪಕ್ಷ ರೈತರ ಹಾದಿ ತಪ್ಪಿಸುವ ಕೆಲಸ ಮಾಡುತ್ತಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಟೀಕಿಸಿದ್ದಾರೆ. 

ಮಾಜಿ ಪ್ರಧಾನಿ ದಿ. ಅಟಲ್‌ ಬಿಹಾರಿ ವಾಜಪೇಯಿ ಜನ್ಮದಿನ, ಕಿಸಾನ್‌ ಸಮ್ಮಾನ್‌ ದಿನದ ಅಂಗವಾಗಿ ಇಲ್ಲಿಯ ಅಮರಗೋಳದಲ್ಲಿ 137 ಆಶ್ರಯ ಮನೆಗಳ ನಿರ್ಮಾಣಕ್ಕೆ ಶುಕ್ರವಾರ ಭೂಮಿಪೂಜೆ, ಆ ಬಡಾವಣೆಗೆ ಅಟಲ್‌ನಗರ ಎಂದು ನಾಮಕರಣ ಕಾರ್ಯಕ್ರಮದಲ್ಲಿ ಮಾತನಾಡಿದರು.

2027ರ ವೇಳೆಗೆ ರೈತರ ಆದಾಯ ದ್ವಿಗುಣಗೊಳಿಸುವ ನಿಟ್ಟಿನಲ್ಲಿ ಮೋದಿ ನೇತೃತ್ವದ ಕೇಂದ್ರ ಸರ್ಕಾರದಿಂದ ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ರೈತರ ಕಲ್ಯಾಣಕ್ಕಾಗಿ ಎಪಿಎಂಸಿ ಕಾಯ್ದೆಯನ್ನು ಬದಲಾವಣೆಗೊಳಿಸಲಾಗಿದೆ. ಕಾಂಗ್ರೆಸ್‌ನ ಚುನಾವಣಾ ಪ್ರಣಾಳಿಕೆಯಲ್ಲೂ ಈ ತಿದ್ದುಪಡಿಯ ಬಗ್ಗೆ ಪ್ರಸ್ತಾಪಿಸಿದೆ. ಆದರೀಗ ಅದನ್ನು ವಿರೋಧಿಸುವ ಮೂಲಕ ರೈತರನ್ನು ದಾರಿ ತಪ್ಪಿಸುತ್ತಿದ್ದು, ರೈತರು ಇದಕ್ಕೆ ಕಿವಿಗೊಡಬಾರದು ಎಂದು ನುಡಿದರು.

ಕುಡಿಬೇಡ ಎಂದಿದ್ದಕ್ಕೆ ಪತ್ನಿ ಎದುರೇ ಕೆರೆಗೆ ಹಾರಿ ಪ್ರಾಣಬಿಟ್ಟ ಕುಡುಕ ಗಂಡ

ಎಪಿಎಂಸಿ, ಬೆಂಬಲ ಬೆಲೆ ಬಂದ್‌ ಆಗುವುದಿಲ್ಲ. ರೈತರ ಅನುಕೂಲಕ್ಕೆ ಪೂರಕವಾಗಿ ಅವುಗಳನ್ನು ಬದಲಾವಣೆಗೊಳಿಸಲಾಗುತ್ತಿದೆ. ಬ್ರಿಟಿಷರು ತಮ್ಮ ಅನುಕೂಲಕ್ಕಾಗಿ ರಚಿಸಿದ್ದ ಎಪಿಎಂಸಿ ಕಾಯ್ದೆಯಲ್ಲಿನ ನಿಯಮಾವಳಿಗಳು ಹಾಗೆ ಉಳಿದಿವೆ. ಸ್ವಾತಂತ್ರ್ಯ ನಂತರವೂ ಆಡಳಿತ ನಡೆಸಿದ ಕಾಂಗ್ರೆಸ್‌ ಅವುಗಳನ್ನು ಬದಲಾಯಿಸುವ ಗೋಜಿಗೆ ಹೋಗಿರಲಿಲ್ಲ. ಹೀಗಾಗಿ ಎಪಿಎಂಸಿ ಕಾಯ್ದೆ ಬದಲಾಯಿಸಿ ರೈತರ ಮನೆ ಮನೆಗೆ ಹೋಗಿ ಖರೀದಿಸುವ ವ್ಯವಸ್ಥೆ ರೂಪಿಸಲಾಗುತ್ತಿದೆ. ಈ ಕಾಯ್ದೆಯಲ್ಲಿ ರೈತರಿಂದ ಖರೀದಿಸಿದ 3 ದಿನದೊಳಗಾಗಿ ರೈತರ ಹಣ ಪಾವತಿಸುವ ಬಗ್ಗೆ ಕಟ್ಟುನಿಟ್ಟಿನ ಕ್ರಮ ಸಹ ಕೈಗೊಳ್ಳಲಾಗಿದೆ. ವರ್ಷದಿಂದ ವರ್ಷಕ್ಕೆ ಬೆಂಬಲ ಬೆಲೆ ಸಹ ಏರಿಕೆ ಮಾಡಲಾಗುತ್ತಿದ್ದು, ರೈತರು ಲಾಭ ಪಡೆದು ಆರ್ಥಿಕವಾಗಿ ಸಬಲರಾಗಬೇಕು ಎಂದರು.

ಕಿಸಾನ್‌ ಸಮ್ಮಾನ ಯೋಜನೆಯಡಿ ಜಿಲ್ಲೆಯ 1.31 ಲಕ್ಷ ರೈತರಿಗೆ 26.21 ಕೋಟಿ ಜಮೆಯಾಗಿದೆ. ಯೋಜನೆ ಜಾರಿಯಾದ ಒಂದೂವರೆ ವರ್ಷ ಜಿಲ್ಲೆಯ ರೈತರು ಒಟ್ಟು 131 ಕೋಟಿ ಪಡೆದಿದ್ದಾರೆ. 2019ರಲ್ಲಿ ಫಸಲ್‌ ಭೀಮಾ ಯೋಜನೆಗೆ ರೈತರು 1900 ಕೋಟಿ ಪ್ರಿಮಿಯಂ ಕಟ್ಟಿದರು. ಅದರಂತೆ ರಾಜ್ಯಕ್ಕೆ  16 ಸಾವಿರ ಕೋಟಿ ಪರಿಹಾರ ಬಂದಿದೆ. ಪ್ರಧಾನ ಮಂತ್ರಿ ಆವಾಸ್‌ ಯೋಜನೆಯಲ್ಲಿ ಕಳೆದ 4 ವರ್ಷದಲ್ಲಿ ಜಿಲ್ಲೆಯಲ್ಲಿ 5468 ಮನೆಗಳನ್ನು ನಿರ್ಮಾಣ ಮಾಡಲಾಗಿದೆ ಎಂದು ಹೇಳಿ​ದ​ರು.

ಶಾಸಕ ಅರವಿಂದ ಬೆಲ್ಲದ ಮಾತನಾಡಿ, ಕ್ಷೇತ್ರ ವ್ಯಾಪ್ತಿ ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಸಾಕಷ್ಟು ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ. ಅದರಂತೆ ಕೈಗಾರಿಕಾ ಪ್ರದೇಶಗಳಿಗೆ ಅಗತ್ಯ ಮೂಲ ಸೌಕರ್ಯ ಕಲ್ಪಿಸಿ ಕೈಗಾರಿಕಾಭಿವೃದ್ಧಿಗೆ ಒತ್ತು ನೀಡಲಾಗಿದೆ ಎಂದು ತಿಳಿಸಿದರು.

ಇದಕ್ಕೂ ಮುನ್ನ ಪ್ರಧಾನಿ ನರೇಂದ್ರ ಮೋದಿ ಭಾಷಣದ ನೇರ ಪ್ರಸಾರವನ್ನು ಎಲ್‌ಇಡಿ ಪರದೆಯಲ್ಲಿ ವೀಕ್ಷಣೆ ಮಾಡಿದರು. ಬಳಿಕ ಗೋ ಪೂಜೆ ನೆರವೇರಿಸಿದರು. ಕಾರ್ಯಕ್ರಮದಲ್ಲಿ ಪಾಲಿಕೆ ಮಾಜಿ ಸದಸ್ಯ ಮಲ್ಲಿಕಾರ್ಜುನ ಹೊರಕೇರಿ, ವಿಜಯಾನಂದ ಶೆಟ್ಟಿ, ಅಜ್ಜಪ್ಪ ಹೊರಕೇರಿ, ಶಾಂತಪ್ಪ ದೇವಕ್ಕಿ ಸೇರಿದಂತೆ ಹಲವರು ಇದ್ದರು.