ಹುಬ್ಬಳ್ಳಿ(ಡಿ.26): ಮದ್ಯ ಸೇವಿಸುವುದನ್ನು ವಿರೋಧಿಸಿ ಪತ್ನಿ ಬೈದಿದ್ದನ್ನೇ ಮನಸಿಗೆ ಹಚ್ಚಿಕೊಂಡು ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಇಲ್ಲಿನ ಸಂತೋಷನಗರದಲ್ಲಿ ಶುಕ್ರವಾರ ನಡೆದಿದೆ. ಪತ್ನಿ ಎದುರಲ್ಲೇ ಈತ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಸಂತೋಷ ನಗರದ ಸಿದ್ಧಾರೂಢ ಕಾಲನಿಯ ರೋಹಿತಗೌಡ ಹನಮಂತಗೌಡ ಪಾಟೀಲ(36) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಈತ ಸಂತೋಷ ನಗರದಲ್ಲಿ ಸಣ್ಣ ಹೋಟೆಲ್‌ ನಡೆಸುತ್ತಿದ್ದ. ಶುಕ್ರವಾರ ಬೆಳಗ್ಗೆ ರೋಹಿತಗೌಡ ಪತ್ನಿ ಕುಡಿಯಬೇಡ ಅದು ಸರಿಯಲ್ಲ. ನಿನ್ನ ಆರೋಗ್ಯವೂ ಹಾಳಾಗುತ್ತದೆ ಎಂದು ಬೈದಿದ್ದಾರೆ. ಇದನ್ನೇ ಮನಸ್ಸಿಗೆ ಹಚ್ಚಿಕೊಂಡು ಏಕಾಏಕಿ ಹೊರಗೆ ಹೊರಟಿದ್ದಾನೆ. ಈತನ ಪತ್ನಿ ಏನಾದರೂ ಮಾಡಿಕೊಳ್ಳಬಾರದೆಂದು ಈತನ ಹಿಂದೆಯೇ ಓಡಿ ಹೋಗಿದ್ದಾಳೆ. ಆದರೆ ನೋಡು ನೋಡುತ್ತಿದ್ದಂತೆ ಕೆರೆ ಬಳಿ ತೆರಳಿ ಕೆರೆಗೆ ಹಾರಿಯೇ ಬಿಟ್ಟಿದ್ದಾನೆ. ಇದನ್ನು ನೋಡಿದ್ದೇ ತಡ ಪತ್ನಿ ಸ್ಥಳೀಯರಿಗೆ ವಿಷಯ ತಿಳಿಸಿದ್ದಾಳೆ. 

ಇಬ್ಬರು ಮಕ್ಕಳೊಂದಿಗೆ ಕೆರೆಗೆ ಹಾರಿ ತಾಯಿ ಆತ್ಮಹತ್ಯೆ

ಸ್ಥಳೀಯರು ಕೆರೆಯಲ್ಲಿ ಹುಡುಕಾಟ ನಡೆಸಿದ್ದಾರೆ. ಆದರೆ, ಎಷ್ಟೊತ್ತಾದರೂ ಈತ ಮಾತ್ರ ಪತ್ತೆಯಾಗಲಿಲ್ಲ. ಕೊನೆಗೆ ಅಶೋಕನಗರ ಠಾಣೆ ಪೊಲೀಸರು ಹಾಗೂ ಅಗ್ನಿ ಶಾಮಕ ದಳದ ಸಿಬ್ಬಂದಿ ಬಂದು ಒಂದೂವರೆ ಗಂಟೆ ಕಾರ್ಯಾಚರಣೆ ನಡೆಸಿ ಈತನ ಮೃತದೇಹವನ್ನು ಹೊರತೆಗೆದರು. ಈ ಕುರಿತು ಅಶೋಕನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.