ಇಂದು ಕೇಂದ್ರ ಸಚಿವ ಜೋಶಿ ಪುತ್ರಿ ರಿಸೆಪ್ಷನ್: ಹುಬ್ಬಳ್ಳಿಗೆ ಗಣ್ಯರ ದಂಡು
* ಅಮಿತ್ ಶಾ, ನಿರ್ಮಲಾ ಸೀತಾರಾಮನ್, ರಾಜ್‌ನಾಥ್ ಸಿಂಗ್ ಇಂದು ಹುಬ್ಬಳ್ಳಿ
* ಅದ್ಧೂರಿಯಾಗಿ ನಡೆದ ಜೋಶಿ ಪುತ್ರಿ ವಿವಾಹ
* ವಿವಾಹ ಮಹೋತ್ಸವದ ಆರತಕ್ಷತೆ
ಹುಬ್ಬಳ್ಳಿ(ಸೆ.02): ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರ ಜೇಷ್ಠ ಸುಪುತ್ರಿ ಅರ್ಪಿತಾ ಹಾಗೂ ಹೃಷಿಕೇಶ್ ಅವರ ವಿವಾಹ ಮಹೋತ್ಸವದ ಆರತಕ್ಷತೆ ಇಲ್ಲಿನ ಡೆನಿಸನ್‌ಸ್ ಹೋಟೆಲ್‌ನಲ್ಲಿ ಸೆ.2ರಂದು ನಡೆಯಲಿದೆ. ಸಂಜೆ 6.30ಕ್ಕೆ ನಡೆಯಲಿರುವ ಅದ್ಧೂರಿ ಆರತಕ್ಷತೆ ಕಾರ್ಯಕ್ರಮಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಸೇರಿ ರಾಜ್ಯ, ರಾಷ್ಟ್ರಮಟ್ಟದ ಗಣ್ಯಾತಿಗಣ್ಯರ ದಂಡೇ ಆಗಮಿಸಲಿದೆ.
ಅಮಿತ್ ಶಾ, ಕೇಂದ್ರ ಸಚಿವರಾದ ನಿರ್ಮಲಾ ಸೀತಾರಾಮನ್, ರಾಜನಾಥ ಸಿಂಗ್, ನಿತಿನ್ ಗಡ್ಕರಿ, ಪಿಯೂಷ್ ಗೋಯಲ್, ರಾವ್‌ಸಾಹೇಬ ಪಾಟೀಲ ದನ್ವೆ, ಧರ್ಮೇಂದ್ರ ಪ್ರಧಾನ್, ಲೋಕಸಭಾ ಸಭಾಧ್ಯಕ್ಷ ಓಂ ಬಿರ್ಲಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ, ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್‌ಸಿಂಗ್ ಮತ್ತಿತರರು, ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು, ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿಗಳಾದ ಯಡಿಯೂರಪ್ಪ, ಜಗದೀಶ ಶೆಟ್ಟರ್, ವಿಧಾಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ್ ಕಟೀಲು, sಸಚಿವರು ಸೇರಿ ಹಲವು ಗಣ್ಯರು ಪಾಲ್ಗೊಳ್ಳಲಿದ್ದಾರೆ.
ಹುಬ್ಬಳ್ಳಿ: ಸಚಿವರ ಪುತ್ರಿ ಮದುವೆ, ರಸ್ತೆಗಳಿಗೆ ಡಾಂಬರ್ ಭಾಗ್ಯ..!
ಮಠಾಧೀಶರ ದಂಡು:
ಮೂರುಸಾವಿರ ಮಠದ ಜ. ಗುರುಸಿದ್ಧರಾಜಯೋಗೀಂದ್ರ ಸ್ವಾಮೀಜಿ, ಎರಡೆತ್ತಿನ ಮಠದ ಸ್ವಾಮೀಜಿ, ಮುರುಘಾಮಠದ ಸ್ವಾಮೀಜಿ, ಕಾಗಿನೆಲೆಯ ನಿರಂಜನಾನಂದ ಪುರಿ ಶ್ರೀಗಳು, ತುಮ ಕೂರು ಸಿದ್ಧಗಂಗಾ ಮಠದ ಸಿದ್ದಲಿಂಗ ಮಹಾಸ್ವಾಮೀಜಿ ಸೇರಿದಂತೆ ಹಲವು ಮಠಾಧೀಶರು ವಧು-ವರರಿಗೆ ಆಶೀರ್ವದಿಸಲಿದ್ದಾರೆ. ಗಣ್ಯರ ದಂಡೇ ಆಗಮಿಸುವ ಹಿನ್ನೆಲೆಯಲ್ಲಿ ಹೋಟೆಲ್ ಸುತ್ತಮುತ್ತ ಖಾಕಿ ಸರ್ಪ ಗಾವಲು ಹಾಕಲಾಗಿದೆ. ಗಣ್ಯರನ್ನು ಸ್ವಾಗ ತಿಸಲು ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ.
ಅದ್ಧೂರಿಯಾಗಿ ನಡೆದ ಜೋಶಿ ಪುತ್ರಿ ವಿವಾಹ:
ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರ ಪುತ್ರಿ ಅರ್ಪಿತಾ ಹಾಗೂ ಕೆ.ಎಸ್. ಹೃಷಿಕೇಶ್ ವಿವಾಹ ಇಲ್ಲಿನ ಡೆನ್ನಿಸನ್‌ಸ್ ಹೊಟೆಲ್ ನಲ್ಲಿ ಸಂಜೆ ಗೋಧೂಳಿ ಮುಹೂರ್ತದಲ್ಲಿ ಅದ್ಧೂರಿಯಾಗಿ ನೆರವೇರಿತು. ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಕುಟುಂಬಸ್ಥರು, ಕೇಂದ್ರ ಸಚಿವ ಅರ್ಜುನರಾಮ್ ಮೇಘವಾಲ, ಸಚಿವರಾದ ಆರ್. ಅಶೋಕ, ಹಾಲಪ್ಪ ಆಚಾರ, ಶಂಕರ ಪಾಟೀಲ್ ಮುನೇನಕೊಪ್ಪ, ಸಿ.ಸಿ. ಪಾಟೀಲ್, ಮಾಜಿ ಸಿಎಂ ಜಗದೀಶ ಶೆಟ್ಟರ್, ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಪ್ರಭಾಕರ ಕೋರೆ ಸೇರಿದಂತೆ ಸ್ಥಳೀಯ ನಾಯಕರು ಪಾಲ್ಗೊಂಡಿದ್ದರು.