ಹುಬ್ಬಳ್ಳಿ(ಜ.16): ಸಚಿವ ಸ್ಥಾನ ಹಂಚಿಕೆ ವಿಚಾರ ಮುಖ್ಯಮಂತ್ರಿಗಳ ವಿವೇಚನೆಗೆ ಬಿಟ್ಟದ್ದು. ಎಲ್ಲರಿಗೂ ಮಂತ್ರಿ ಸ್ಥಾನ ಬೇಡಿಕೆ ಇಡುವ ಅಧಿಕಾರವಿದೆ. ಆದರೆ ಇಂಥವರಿಗೆ ಮಂತ್ರಿ ಸ್ಥಾನ ಕೊಡಿ ಎಂದು ಸಮಾಜದವರು ಒತ್ತಡ ಹೇರುವುದು ಸರಿಯಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದ್ದಾರೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿ ನೀಡಿರುವ ಹೇಳಿಕೆಗೆ ಪರೋಕ್ಷವಾಗಿ ತಿರುಗೇಟು ನೀಡಿದರು. ಎಲ್ಲರಿಗೂ ಬೇಡಿಕೆ ಸಲ್ಲಿಸುವ ಅಧಿಕಾರವಿದೆ. ಹಾಗಂತ ಈ ವಿಚಾರದಲ್ಲಿ ಯಾವುದೇ ಸಮಾಜದವರು ಒತ್ತಡ ಹಾಕಬಾರದು. ಯಾವುದೇ ನಿರ್ಧಾರ ತೆಗೆದುಕೊಳ್ಳುವ ವಿವೇಚನೆ ಮುಖ್ಯಮಂತ್ರಿಗಳಿಗೆ ಇರುತ್ತದೆ. ಅದರ ಬಗ್ಗೆ ಅವರ ನಿರ್ಧಾರ ಬಿಡಬೇಕು ಎಂದರು.

ಕಾಂಗ್ರೆಸ್‌ಗೆ ತಿರುಗೇಟು:

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ, ಕೇಂದ್ರ ಗೃಹ ಸಚಿವ ಅಮಿತ್‌ ಶಾ ಆಗಮನಕ್ಕೆ ವಿರೋಧಿಸಿ ಕಾಂಗ್ರೆಸ್‌ ಗೋ ಬ್ಯಾಕ್‌ ಪ್ರತಿಭಟನೆ ನಡೆಸುತ್ತಿರುವುದಕ್ಕೆ ತೀವ್ರ ಆಕ್ಷೇಪಿಸಿದ ಅವರು, ಕಾಂಗ್ರೆಸ್‌ನವರನ್ನು ಜನರೇ ಗೋಬ್ಯಾಕ್‌ ಮಾಡಿದ್ದಾರೆ. ಅವರಿಗೆ ಪ್ರತಿಭಟನೆ ಮಾಡುವ ಯಾವುದೇ ಯೋಗ್ಯತೆ ಇಲ್ಲ. ಕಾಂಗ್ರೆಸ್‌ನವರು ಹುಟ್ಟಿರುವುದೇ ಆಡಳಿತ ಮಾಡುವುದಕ್ಕೆ ಎಂದು ತಿಳಿದುಕೊಂಡಿದ್ದಾರೆ. ಆದರೆ ಜನರೇ ನಿಮ್ಮನ್ನು ಗೋಬ್ಯಾಕ್‌ ಮಾಡಿದ್ದಾರೆ. ನೀವು ನಮಗೇನು ಗೋಬ್ಯಾಕ್‌ ಅನ್ನುವುದು ಎಂದು ತಿರುಗೇಟು ನೀಡಿದ್ದಾರೆ.