Asianet Suvarna News Asianet Suvarna News

‘ನಿರುದ್ಯೋಗ ಸಮಸ್ಯೆಯಲ್ಲ, ದುರ್ಬಲ ಮನಸ್ಥಿತಿ’

ನಿರುದ್ಯೋಗ ಸಮಸ್ಯೆಯಲ್ಲ ಅದು ದುರ್ಬಲ ಮನಸ್ಥಿತಿ, ಉದ್ಯೋಗ ಪಡೆಯುವ ಸಾಮರ್ಥ್ಯ ಬೆಳೆಸಿಕೊಳ್ಳಬೇಕು. ವಿದ್ಯಾರ್ಥಿಗಳಿಗೆ ಸೂಕ್ತ ಮಾರ್ಗದರ್ಶನ ನೀಡಿ, ಅವರಲ್ಲಿ ಆತ್ಮವಿಶ್ವಾಸ ಮೂಡಿಸುವ ಕೆಲಸ ಆಗಬೇಕು ಎಂದು ಶಾಸಕ ಜಿ.ಬಿ.ಜ್ಯೋತಿಗಣೇಶ್ ಹೇಳಿದರು.

Unemployment is not the problem, weak mentality snr
Author
First Published Sep 25, 2023, 9:12 AM IST

 ತುಮಕೂರು : ನಿರುದ್ಯೋಗ ಸಮಸ್ಯೆಯಲ್ಲ ಅದು ದುರ್ಬಲ ಮನಸ್ಥಿತಿ, ಉದ್ಯೋಗ ಪಡೆಯುವ ಸಾಮರ್ಥ್ಯ ಬೆಳೆಸಿಕೊಳ್ಳಬೇಕು. ವಿದ್ಯಾರ್ಥಿಗಳಿಗೆ ಸೂಕ್ತ ಮಾರ್ಗದರ್ಶನ ನೀಡಿ, ಅವರಲ್ಲಿ ಆತ್ಮವಿಶ್ವಾಸ ಮೂಡಿಸುವ ಕೆಲಸ ಆಗಬೇಕು ಎಂದು ಶಾಸಕ ಜಿ.ಬಿ.ಜ್ಯೋತಿಗಣೇಶ್ ಹೇಳಿದರು.

ನಗರದ ಕನ್ನಡ ಭವನದಲ್ಲಿ ನಡೆದ ಆಟೋ ಚಾಲಕರ ಮಕ್ಕಳು ಹಾಗೂ ಇತರೆ ಅಸಂಘಟಿತ ಕಾರ್ಮಿಕರ ಪ್ರತಿಭಾವಂತ ಮಕ್ಕಳಿಗೆ ಪುರಸ್ಕಾರ ವಿತರಣಾ ಸಮಾರಂಭ ಉದ್ಘಾಟಿಸಿ ಮಾತನಾಡಿದ ಶಾಸಕರು, ಅಂಕಪಟ್ಟಿ ವಿದ್ಯಾರ್ಥಿಯ ಪ್ರತಿಭೆಯ ಮಾನದಂಡವಲ್ಲ, ಪ್ರತಿ ವಿದ್ಯಾರ್ಥಿಯಲ್ಲೂ ವಿಶೇಷ ಜ್ಞಾನ, ಪ್ರತಿಭೆ ಇದ್ದೇ ಇರುತ್ತದೆ. ಅದನ್ನು ಗುರುತಿಸಿ ಪ್ರೋತ್ಸಾಹಿಸುವ ಪ್ರಯತ್ನ ಆಗಬೇಕು ಎಂದರು.

ಆಟೋ ಸಂಘಟನೆ ಅಧ್ಯಕ್ಷ ಕೆ.ಎಂ.ಶಿವಕುಮಾರ್ ತಮ್ಮ ಕಾರ್ಯವ್ಯಾಪ್ತಿಯಲ್ಲಿ ಸದಾ ಸೇವೆಗೆ ಸಿದ್ಧ. ದುರ್ಬಲ ವರ್ಗದವರನ್ನು ಮೇಲೆ ತರಲು ಕೈಲಾದ ಸೇವೆ ಮಾಡಿಕೊಂಡು ಬರುತ್ತಿದ್ದಾರೆ ಎಂದು ಶ್ಲಾಘಿಸಿದ ಶಾಸಕರು, ಆಟೋ ಚಾಲಕರ ಮಕ್ಕಳ ಪ್ರತಿಭೆ ಗುರುತಿಸಿ ಅವರನ್ನು ಪ್ರೋತ್ಸಾಹಿಸುವ ಸಾರ್ಥಕ ಕಾರ್ಯ ಮಾಡುತ್ತಾ ಬಂದಿದ್ದಾರೆ ಎಂದರು.

ವಿದ್ಯೆ ಎಲ್ಲರಿಗೂ ದಕ್ಕಬೇಕು. ವಿದ್ಯೆ ಮೂಲಕ ಆರ್ಥಿಕ ಸ್ವಾವಲಂಬನೆ ಪಡೆದು ಸ್ವಾಭಿಮಾನದ ಬದುಕು ರೂಪಿಸಿಕೊಳ್ಳಬೇಕು. ಅದಕ್ಕಾಗಿ ಪೋಷಕರು, ಶಿಕ್ಷಕರು ಮಕ್ಕಳಿಗೆ ಪ್ರೋತ್ಸಾಹ ನೀಡಬೇಕು. ಶಿಕ್ಷಣ ತಜ್ಞರನ್ನು ಕರೆಸಿ ಮುಂದಿನ ವಿದ್ಯಾಭ್ಯಾಸ, ಕೋರ್ಸ್‌ ಆಯ್ಕೆ ಬಗ್ಗೆ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಲು ಸಂಘ ಸಂಸ್ಥೆಗಳು ಪ್ರಯತ್ನ ಮಾಡಬೇಕು. ಬಡ ಮಕ್ಕಳಿಗೆ ವಿದ್ಯೆ, ಅನ್ನ, ಆಶ್ರಯ ನೀಡಿದ ಸಿದ್ಧಗಂಗಾ ಮಠದ ಸೇವೆ ನಮಗೆಲ್ಲಾ ಪ್ರೇರಣೆಯಾಗಬೇಕು ಎಂದು ಶಾಸಕರು ಹೇಳಿದರು.

ಜಿಲ್ಲಾ ಬಿಜೆಪಿ ಕೋಶಾಧ್ಯಕ್ಷರೂ ಆದ ಸಿದ್ಧಗಂಗಾ ಆಸ್ಪತ್ರೆಯ ವ್ಯವಸ್ಥಾಪಕ ನಿದೇಶಕರಾದ ಡಾ.ಎಸ್.ಪರಮೇಶ್ ಮಾತನಾಡಿ, ಎಸ್‌ಎಸ್‌ಎಲ್‌ಸಿ, ಪಿಯೂಸಿ ನಂತರ ಮುಂದೇನು ಎಂಬ ಬಗ್ಗೆ ಶಿಕ್ಷಣ ತಜ್ಞರು, ಶಿಕ್ಷಕರು, ಪೋಷಕರು ಸರಿಯಾದ ತಿಳುವಳಿಕೆ ನೀಡಿ ಮಕ್ಕಳು ಭವಿಷ್ಯ ರೂಪಿಸಿಕೊಳ್ಳಲು ನೆರವಾಗಬೇಕು. ಇಂದು ವೃತ್ತಿಪರ ಕೋರ್ಸ್‌ಗಳನ್ನು ಅಧ್ಯಯನ ಮಾಡಿದರೆ ಉದ್ಯೋಗಾವಕಾಶ ವಿಫುಲವಾಗಿ ದೊರೆಯುತ್ತವೆ, ಸ್ವಯಂ ಉದ್ಯೋಗ ಮಾಡಲೂ ಅವಕಾಶವಿದೆ ಎಂದರು.

ಬಿಜೆಪಿ ಮುಖಂಡ, ಸ್ಫೂರ್ತಿ ಡೆವಲಪರ್‌ನ ಎಸ್.ಪಿ.ಚಿದಾನಂದ್ ಮಾತನಾಡಿ, ವಿದ್ಯಾರ್ಥಿಗಳ ಭವಿಷ್ಯದ ದಿಕ್ಸೂಚಿಯಾಗುವಂತಹ ಕಾರ್ಯಕ್ರಮಗಳು ಆಗಬೇಕು. ಮಕ್ಕಳಲ್ಲಿ ಶಿಕ್ಷಣದ ಆಸಕ್ತಿ ಬೆಳೆಸಬೇಕು, ಅವರು ತಮ್ಮ ಆಸಕ್ತಿಯ ಕೋರ್ಸ್ ಪಡೆಯಲು ಅವಕಾಶ ಕಲ್ಪಿಸಬೇಕು ಎಂದು ಹೇಳಿದರು.

ನಂತರ ಆಟೋ ಚಾಲಕರು ಹಾಗೂ ಅಸಂಘಟಿತ ಕಾರ್ಮಿಕರ ಪ್ರತಿಭಾವಂತ ಮಕ್ಕಳಿಗೆ ಪುರಸ್ಕಾರ ವಿತರಿಸಿ ಪ್ರೋತ್ಸಾಹಿಸಲಾಯಿತು.

ಆಟೋ ಚಾಲಕರ ಸಂಘದ ಅಧ್ಯಕ್ಷ ಕೆ.ಎಂ.ಶಿವಕುಮಾರ್, ರಾಜ್ಯ ಬಿಜೆಪಿ ವಕ್ತಾರ ಹೆಚ್.ಎನ್.ಚಂದ್ರಶೇಖರ್, ಟೂಡಾ ಮಾಜಿ ಸದಸ್ಯ ಸತ್ಯಮಂಗಲ ಜಗದೀಶ್, ಮುಖಂಡರಾದ ಟಿ.ಆರ್.ಸದಾಶಿವಯ್ಯ, ನಿಸರ್ಗ ರಮೇಶ್, ದೇವರಾಜು, ಪ್ರೇಮಾ ಹೆಗಡೆ, ಮಂಜುಳಾ, ಗುರುಪ್ರಸಾದ್, ತಿಪ್ಪೇರುದ್ರಪ್ಪ ಸಮಾರಂಭದಲ್ಲಿ ಭಾಗವಹಿಸಿದ್ದರು.

Follow Us:
Download App:
  • android
  • ios