ಬೆಂಗಳೂರಿನ ದುಬಾರಿ ಮನೆ ಬಾಡಿಗೆಯಿಂದ ಕಂಗೆಟ್ಟಿರುವ ಟೆಕ್ಕಿಯೊಬ್ಬರು ಪುಣೆಯ ಫ್ಲಾಟ್ ಬಾಡಿಗೆ ನೋಡಿ ದಂಗಾಗಿದ್ದಾರೆ. ಪುಣೆಯಲ್ಲಿ ಸಕಲ ಸೌಲಭ್ಯಗಳಿರುವ 3BHK ಫ್ಲಾಟ್‌ನ ರೂಮ್ ಕೇವಲ 15,500 ರೂಪಾಯಿಗೆ ಸಿಗುತ್ತಿರುವುದನ್ನು ನೋಡಿ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಈ ಕುರಿತು ಅವರು ಮಾಡಿರುವ ಪೋಸ್ಟ್ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ.

ಬೆಂಗಳೂರು ಬದುಕು ಅಷ್ಟು ಸುಲಭವಾಗಿಲ್ಲ. ದುಬಾರಿ ದುನಿಯಾದ ಜಂಜಾಟದಲ್ಲಿ ಸ್ವಂತ ಮನೆ ಇದ್ದವರು ಬಚಾವ್. ಬಾಡಿಗೆ ಪಡೆದು ಬದುಕುತ್ತಿರೋರ ಪಾಡು ಅಬ್ಬೆಪಾರಿ ಜೀವನ. ದುಡಿದ ಹಣವೆಲ್ಲ ಉಳಿದಕೊಂಡ ಮನೆ ಬಾಡಿಗೆ ಕಟ್ಟಿಯೇ ಸಾಕಾಗಿ ಹೋಗಿರುತ್ತದೆ..

ಇನ್ನು ಹೊಸದಾಗಿ ಮನೆ ಹುಡುಕುತ್ತಿರೋರ ಸಂಕಷ್ಟ ಇನ್ನೊಂದು ವಿಚಿತ್ರ. ಚಿಕ್ಕದಾದ ಒಂದು ರೂಮ್ ಬೇಕು ಅಂದರೂ ಲಕ್ಷ ರೂಪಾಯಿ ಅಡ್ವಾನ್ಸ್, ಹತ್ತಾರು ಸಾವಿರ ಬಾಡಿಗೆ ಕೇಳ್ತಾರೆ. ಯಾಕೆ ಇಷ್ಟೆಲ್ಲ ಮಾತು ಅಂದರೆ ಸೋಶಿಯಲ್ ಮೀಡಿಯಾದಲ್ಲಿ ಸದ್ಯ ಪೋಸ್ಟ್ ಒಂದು ವೈರಲ್ ಆಗ್ತಿದೆ. ಮಹಾರಾಷ್ಟ್ರದ ಪುಣೆಯಲ್ಲಿ ಫ್ಲಾಟ್ ಒಂದರ ನೋಡಿ ಬೆಂಗಳೂರಿನ ಸಾಫ್ಟ್‌ವೇರ್ ಇಂಜಿನಿಯರ್ ಒಬ್ಬರು ದಂಗಾಗಿದ್ದಾರೆ. ಅಲ್ಲದೇ ಅವರು ಮಾಡಿರುವ ಕಾಮೆಂಟ್ ಭಾರೀ ವೈರಲ್ ಆಗಿದೆ..

ಮ್ಯಾಟರ್ ಏನು?

ಪುಣೆಯಲ್ಲಿರುವ ವ್ಯಕ್ತಿಯೊಬ್ಬರು ತಮ್ಮ 3BHK ಫ್ಲಾಟ್‌ನಲ್ಲಿ ರೂಮ್ ಹಂಚಿಕೊಳ್ಳಲು ಫ್ಲಾಟ್‌ಮೇಟ್ ಬೇಕಾಗಿದ್ದರು. ಈ ಸಂಬಂಧ ಅವರು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿದ್ದರು. ಆ ಪೋಸ್ಟ್‌ನಲ್ಲಿ ಸುಂದರವಾದ, ವಿಶಾಲವಾದ ದೊಡ್ಡ ಬೆಡ್‌ರೂಮ್. ಎರಡು ದೊಡ್ಡ ಕಿಟಕಿಗಳು ಮತ್ತು ಪ್ರಕೃತಿಯನ್ನು ನೋಡಬಹುದಾದ ಬಾಲ್ಕನಿ ಇತ್ತು. ಜೊತೆಗೆ ಅದರಲ್ಲಿ ರೂಮಿನ ಬಾಡಿಗೆ ತಿಂಗಳಿಗೆ 9,000 ರೂಪಾಯಿ. ಮನೆ ಕೆಲಸದವರು, ಅಡುಗೆಯವರು, ವಾಷಿಂಗ್ ಮೆಷಿನ್, ಫ್ರಿಡ್ಜ್ ಎಲ್ಲಾ ಖರ್ಚು ಸೇರಿದರೆ ತಿಂಗಳಿಗೆ ಕೇವಲ ₹15,500 ಆಗುತ್ತದೆ ಎಂದು ಬರೆಯಲಾಗಿತ್ತು. ಈ ಪೋಸ್ಟ್ ಬೆಂಗಳೂರಿನ ಟೆಕ್ಕಿಯೊಬ್ಬರ ಕಣ್ಣಿಗೆ ಬಿದ್ದಿದೆ.

3BHK ಫ್ಲಾಟ್‌ ಬಾಡಿಗೆ ನೋಡಿ ದಂಗಾದ ಅವರು.. ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಪುಣೆಯ ಬಾಡಿಗೆಯನ್ನು ಬೆಂಗಳೂರಿನ ಬಾಡಿಗೆಗೆ ಹೋಲಿಸಿ ಟ್ವೀಟ್ ಮಾಡಿದ್ದಾರೆ. ಏನೆಂದರೆ.. ಪುಣೆಯ ಈ ಬಾಡಿಗೆ ರೇಟ್ ನೋಡಿದ ಮೇಲೆ ನನ್ನ ಬೆಂಗಳೂರು ಮೆದುಳು ಒಂದು ಕ್ಷಣ ಹ್ಯಾಂಗ್ ಆಗಿ, ಕ್ರ್ಯಾಶ್ ಆಗಿ ಮತ್ತೆ ರೀಸ್ಟಾರ್ಟ್ ಆಯ್ತು! ಎಂದು ಬರೆದಿದ್ದಾರೆ. ಇಷ್ಟೆಲ್ಲ ಸೌಲಭ್ಯ ಇರುವ ರೂಮ್‌ಗಳಿಗೆ ಬೆಂಗಳೂರಲ್ಲಿ ಹಗಲು ದರೋಡೆ ನಡೆಯಲಿದೆ ಅನ್ನೋದು ಅವರ ಮಾತಿನ ಅರ್ಥವಾಗಿದೆ.

ಪೋಸ್ಟ್ ನೋಡಿ ನೆಟ್ಟಿಗರು ಏನಂದ್ರು?

ಬೆಂಗಳೂರು ಟೆಕ್ಕಿ ಮಾಡಿರುವ ಪೋಸ್ಟ್ ಸೋಶಿಲ್ ಮೀಡಿಯಾದಲ್ಲಿ ಶರವೇಗದಂತೆ ವೈರಲ್ ಆಗಿದೆ. ಪೋಸ್ಟ್ ಮಾಡಿದ ಕೇಲವೇ ಗಂಟೆಯಲ್ಲಿ ಮೂರು ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ. ಜೊತೆಗೆ ಬಗೆಬಗೆಯಾಗಿ ಕಾಮೆಂಟ್ ಮಾಡಿದ್ದಾರೆ. ಬೆಂಗಳೂರಿಗಿಂತ ಪುಣೆ ವಾಸಿ ಎಂದಿರುವ ಬಹುತೇಕರು ಅಲ್ಲಿಗೂ ಇಲ್ಲಿಗೂ ಬಾಡಿಗೆಗೆ ಇರುವ ವ್ಯತ್ಯಾಸದ ಬಗ್ಗೆ ಮಾತನ್ನಾಡಿಕೊಂಡಿದ್ದಾರೆ. ಬೆಂಗಳೂರಿನಲ್ಲಿ ಇಂತಹ ಒಂದು ರೂಮಿಗೆ ಕನಿಷ್ಠ ಅಂದರೂ ಸುಮಾರು 25,000 ದಿಂದ 30,000 ರೂಪಾಯಿ ಕೇಳಿಕೇಳ್ತಾರೆ. ಆದರೆ ಪುಣೆಯಲ್ಲಿ ಕೇವಲ 15 ಸಾವಿರ ಅಂದರೆ ತುಂಬಾ ಕಡಿಮೆ ಎಂದಿದ್ದಾರೆ.

ಮೂರು ಬಿಹೆಚ್‌ಕೆ ಫ್ಲ್ಯಾಟ್‌ಗೆ 15,500 ರೂಪಾಯಿ ಅಂದರೆ.. ತುಂಬಾ ಕಡಿಮೆ ಎಂದು ಅನೇಕರು ಹೇಳಿದ್ದಾರೆ. ಫೋಟೋದಲ್ಲಿ ವೈರಲ್ ಆಗಿರುವ ಫ್ಲ್ಯಾಟ್‌ ಪುಣೆಯ ಬ್ಲೂ ರಿಡ್ಜ್ ಟೌನ್‌ಶಿಪ್ ಇರಬಹುದು. ಅಲ್ಲಿರುವ ಬಹುತೇಕ ಮನೆ ಮಾಲೀಕರು ವಿದೇಶದಲ್ಲಿ ಇದ್ದಾರೆ. ಬ್ರೋಕರ್‌ಗಳ ಮೂಲಕ ಕಡಿಮೆ ಬಾಡಿಗೆಗೆ ಕೊಟ್ಟಿರುತ್ತಾರೆ ಎಂದು ಒಬ್ಬರು ತಿಳಿಸಿದ್ದಾರೆ.