ಮಧ್ಯಾಹ್ನದಿಂದ ಸಂಜೆವರೆಗೆ ಮಾರುಕಟ್ಟೆಗಳತ್ತ ಮುಖ ಮಾಡದ ಜನ, ಬೆರಳೆಣಿಕೆ ಮಳಿಗೆಗಳಲ್ಲಿ ಮಾತ್ರ ವ್ಯಾಪಾರ, ಅಕ್ಷರಶಃ ಬಿಕೋ ನಗರದ ಹಲವು ರಸ್ತೆಗಳು
ಬೆಂಗಳೂರು(ಅ.26): ಗ್ರಹಣದ ಹಿನ್ನೆಲೆಯಲ್ಲಿ ನಗರದ ಪ್ರಮುಖ ಮಾರುಕಟ್ಟೆಗಳ ಅಂಗಡಿ, ಮುಂಗಟ್ಟುಗಳು ಬಂದ್ ಆಗಿತ್ತು. ಜನರು ಸಹ ಮಾರುಕಟ್ಟೆಯತ್ತ ಸುಳಿಯದ ಕಾರಣ ಮಾರುಕಟ್ಟೆ ಪ್ರದೇಶಗಳಲ್ಲಿ ಜನರ ಸಂಖ್ಯೆ ತೀರಾ ಕಡಿಮೆ ಇತ್ತು. ದೀಪಾವಳಿ ಹಿನ್ನೆಲೆಯಲ್ಲಿ ಕಳೆದ ಮೂರ್ನಾಲ್ಕು ದಿನಗಳಿಂದ ಜನರಿಂದ ಕಿಕ್ಕಿರಿದು ತುಂಬಿದ್ದ ಮಾರುಕಟ್ಟೆಗಳಲ್ಲಿ ಗ್ರಹಣ ಕಾರಣದಿಂದ ಮಂಗಳವಾರ ವಾತಾವರಣ ಭಿನ್ನವಾಗಿತ್ತು. ನಿನ್ನೆ(ಮಂಗಳವಾರ) ನಸುಕಿನಲ್ಲೇ ಬಲಿಪಾಡ್ಯಮಿಗಾಗಿ ಹಬ್ಬದ ಪರಿಕರಗಳನ್ನು ಖರೀದಿ ಮಾಡಿದ್ದರು. ಮಧ್ಯಾಹ್ನದಿಂದ ಸಂಜೆವರೆಗೆ ಮಾರುಕಟ್ಟೆಗಳತ್ತ ಜನರು ಮುಖ ಮಾಡಲಿಲ್ಲ.
ಚಿಕ್ಕಪೇಟೆ, ಕೆ.ಆರ್.ಮಾರ್ಕೆಟ್, ಯಶವಂತಪುರ, ಅವೆನ್ಯೂ ರಸ್ತೆ, ಮಲ್ಲೇಶ್ವರ, ಗಾಂಧಿನಗರ, ಸಿಲ್ವರ್ ಜ್ಯೂಬಿಲಿ ಪಾರ್ಕ್, ಜಯನಗರ ಸೇರಿ ಪ್ರಮುಖ ಮಾರುಕಟ್ಟೆಗಳಲ್ಲಿ ಜನಸಂಚಾರ ವಿರಳವಾಗಿತ್ತು. ಗ್ರಾಹಕರಿಂದ ತುಂಬಿರುತ್ತಿದ್ದ ನವರಂಗದ ಬಳಿಯ ಮೈದಾನ ಸೇರಿದಂತೆ ಬಹುತೇಕ ಪಟಾಕಿ ಮಳಿಗೆಗಳ ಗ್ರಾಹಕರಿಲ್ಲದೆ ಭಣಗುಟ್ಟುತ್ತಿದ್ದವು. ಕೆಲವು ಕಡೆ ವ್ಯಾಪಾರವಿಲ್ಲದ ಕಾರಣ ಹಳ್ಳಿಗಳಿಂದ ತಂದಿದ್ದ ಬಾಳೆ ಸಸಿ, ಮಾವಿನ ಎಲೆ ಮತ್ತಿತರಗಳನ್ನು ರೈತರು, ವ್ಯಾಪಾರಿಗಳು ಹಾಗೆಯೇ ಬಿಟ್ಟು ಹೋಗಿದ್ದರು.
ಅಸ್ತಮಾನದ ಜೊತೆ ಗ್ರಹಣ, ಸೂರ್ಯನನ್ನು ಬೀಳ್ಕೊಟ್ಟ ಕಡಲತೀರದ ಖಗೋಳಾಸಕ್ತರು
ಮಲ್ಲೇಶ್ವರದ ಜವಳಿ, ಚಿನ್ನಾಭರಣ, ಎಲೆಕ್ಟ್ರಾನಿಕ್ ದಿನಸಿ ಸೇರಿ ಇತರೆ ಮಳಿಗೆಗಳಲ್ಲಿ ಗ್ರಾಹಕರು ಇರಲಿಲ್ಲ. ಸಣ್ಣಪುಟ್ಟಅಂಗಡಿ ಮುಂಗಟ್ಟುಗಳು ಕೂಡ ಮುಚ್ಚಿದ್ದವು. ಬೆರಳೆಣಿಕೆ ಮಳಿಗೆಗಳಲ್ಲಿ ಮಾತ್ರ ವ್ಯಾಪಾರ ನಡೆಯುತ್ತಿದ್ದುದು ಕಂಡುಬಂತು. ತಳ್ಳುಗಾಡಿಗಳಿಂದ ಹಿಡಿದು ನಗರದ ಪ್ರಮುಖ ಶಾಪಿಂಗ್ ಮಾಲ್‌ಗಳಲ್ಲೂ ಕೂಡ ಗ್ರಾಹಕರ ಸುಳಿವಿರಲಿಲ್ಲ. ನಗರದ ಹೋಟೆಲ್‌ಗಳಲ್ಲಿಯೂ ಸಹ ಮಧ್ಯಾಹ್ನದ ಊಟ, ತಿಂಡಿಗಳಿಗೆ ಹೆಚ್ಚಿನ ಗ್ರಾಹಕರು ಇರಲಿಲ್ಲ.
ಔಷಧ ಅಂಗಡಿ, ಫಾರ್ಮಸಿಗಳು, ಬೇಕರಿ, ಕೆಲವು ಹೊಟೆಲ್‌ಗಳು, ಬಸ್ ನಿಲ್ದಾಣದ ಮಳಿಗೆಗಳು ತೆರೆದುಕೊಂಡಿದ್ದವು. ಅದನ್ನು ಹೊರತುಪಡಿಸಿದರೆ ನಗರದ ಶೇ. 85ರಷ್ಟು ಮಳಿಗೆಗಳು ಗ್ರಹಣದ ವೇಳೆ ಮುಚ್ಚಲ್ಪಟ್ಟಿದ್ದವು. ನಗರದ ಹಲವು ರಸ್ತೆಗಳು ಅಕ್ಷರಶಃ ಬಿಕೋ ಎನ್ನುತ್ತಿದ್ದವು. ಉದ್ಯಾನ, ಕ್ರೀಡಾಂಗಣಗಳಲ್ಲಿ ಹೆಚ್ಚಿನ ಜನತೆ ಕಂಡುಬರಲಿಲ್ಲ. ಮನೆ, ಕಚೇರಿಯಲ್ಲಿ ಕುಳಿತು ಸೂರ್ಯಗ್ರಹಣ ವೀಕ್ಷಣೆ ಮಾಡಿದರು. ಸಂಜೆ ಗ್ರಹಣದ ಬಳಿಕವೆ ಜನತೆ ಮಾರುಕಟ್ಟೆ, ದೇವಸ್ಥಾನಗಳತ್ತ ಹೆಜ್ಜೆ ಹಾಕಿದರು. ಆದರೆ, ಮೂರ್ನಾಲ್ಕು ದಿನಗಳಂತೆ ಹೆಚ್ಚಿನ ಗ್ರಾಹಕರು ಇರಲಿಲ್ಲ.
