ಅಸ್ತಮಾನದ ಜೊತೆ ಗ್ರಹಣ, ಸೂರ್ಯನನ್ನು ಬೀಳ್ಕೊಟ್ಟ ಕಡಲತೀರದ ಖಗೋಳಾಸಕ್ತರು

ದೇವಾಲಯಗಳ ನಗರಿ‌ ಉಡುಪಿಯಲ್ಲಿ ವೈಜ್ಞಾನಿಕ ಮನೋಭಾವನೆಯೊಂದಿಗೆ, ಗ್ರಹಣವನ್ನು ಸಂಭ್ರಮಿಸಲಾಯ್ತು. ಸಾವಿರಾರು ಜನರು ಸೇರುವ ಮಲ್ಪೆ ಸಮುದ್ರ ತೀರದಲ್ಲಿ, ಸೂರ್ಯಾಸ್ತದೊಂದಿಗೆ, ಗ್ರಹಣ ಸೂರ್ಯನನ್ನು ಬೀಳ್ಕೊಡಲಾಯ್ತು.

Eclipse with sunset coastal astronomers bid farewell to the sun gow

ವರದಿ: ಶಶಿಧರ ಮಾಸ್ತಿಬೈಲು, ಏಷ್ಯಾನೆಟ್ ಸುವರ್ಣ ನ್ಯೂಸ್

ಉಡುಪಿ (ಅ.25): ದೇವಾಲಯಗಳ ನಗರಿ‌ ಉಡುಪಿಯಲ್ಲಿ ವೈಜ್ಞಾನಿಕ ಮನೋಭಾವನೆಯೊಂದಿಗೆ, ಗ್ರಹಣವನ್ನು ಸಂಭ್ರಮಿಸಲಾಯ್ತು. ಸಾವಿರಾರು ಜನರು ಸೇರುವ ಮಲ್ಪೆ ಸಮುದ್ರ ತೀರದಲ್ಲಿ, ಸೂರ್ಯಾಸ್ತದೊಂದಿಗೆ, ಗ್ರಹಣ ಸೂರ್ಯನನ್ನು ಬೀಳ್ಕೊಡಲಾಯ್ತು. ನಗರದ ಮಲ್ಪೆ ಕಡಲ ತೀರದಲ್ಲಿ ಉಡುಪಿ ಪೂರ್ಣಪ್ರಜ್ಞಾ ಕಾಲೇಜಿನ ಹವ್ಯಾಸಿ ಖಗೋಳ ವೀಕ್ಷಕರ ಸಂಘ, ಹಳೆ ವಿದ್ಯಾರ್ಥಿಗಳ ಸಂಘ ಹಾಗು ಮಲ್ಪೆ ಅಭಿವೃದ್ಧಿ ಸಮಿತಿಯ ಆಶ್ರಯದಲ್ಲಿ ಗ್ರಹಣ ಕಾಲದಲ್ಲಿ  ಸೂರ್ಯಗ್ರಹಣ ವೀಕ್ಷಣೆ ಕಾರ್ಯಕ್ರಮ ನಡೆಯಿತು. ಇಳಿಹೊತ್ತು 5.08 ಕ್ಕೆ ಸೂರ್ಯಗ್ರಹಣ ಆರಂಭವಾಗಿದ್ದು,  ಟೆಲಿಸ್ಕೋಪ್ ನಲ್ಲಿ ಎಲ್.ಐ.ಡಿ ನೇರಪ್ರಸಾರ ಮತ್ತು ಯೂಟ್ಯೂಬ್ ಲೈವ್ ಕಾರ್ಯಕ್ರಮ ನಡೆಯಿತು. ಸ್ಥಳದಲ್ಲಿ 3 ಟೆಲಿಸ್ಕೋಪ್, ಪಿನ್ ಹೋಲ್ ಪ್ರೊಜೆಕ್ಟರ್, ಪಿನ್ ಹೋಲ್ ಬಾಕ್ಸ್, 500 ಕನ್ನಡಕದಲ್ಲಿ ಸಾವಿರಾರು ಜನರು ಗ್ರಹಣವನ್ನು ವೀಕ್ಷಿಸಿದರು.  ಕಾರ್ಯಕ್ರಮದಲ್ಲಿ ಭಾಗವಹಿಸಿದ ಜಿಲ್ಲಾಧಿಕಾರಿ ಕೂರ್ಮಾ ರಾವ್ ಮಾತನಾಡಿ ಮೊದಲ ಬಾರಿಗೆ ಸೂರ್ಯಗ್ರಹಣವನ್ನು ನೇರವಾಗಿ ವೀಕ್ಷಿಸುತ್ತಿದ್ದೇನೆ. ಪೂರ್ಣಪ್ರಜ್ಞಾ ಕಾಲೇಜಿನ ಖಗೋಳ ವೀಕ್ಷಕರ ಸಂಘದ ಚಟುವಟಿಕೆಗಳು ಇನ್ನಷ್ಟು ಕಾಲೇಜುಗಳಿಗೆ ವಿಸ್ತರಿಸಲಿ ಎಂದು ಶುಭ ಹಾರೈಸಿದರು.

ಉಡುಪಿಯಲ್ಲಿ ವಿಶೇಷವಾಗಿ ಕಡಲ ತೀರದಲ್ಲಿ ಈ ಕಾರ್ಯಕ್ರಮ ಅಯೋಜಿಸಿದ್ದರಿಂದ ಸೂರ್ಯಸ್ತಮಾನದ ವೇಳೆ ಗ್ರಹಣ ಸಂಭವಿಸಿದ್ದರಿಂದ ಜನಜಂಗುಳಿ ಹೆಚ್ಚಾಗಿತ್ತು.  ರಜೆಯ ದಿನವಾದ ಕಾರಣ ಕಡಲ ತೀರದಲ್ಲಿ ಕ್ಕಿಕ್ಕಿರಿದು ತುಂಬಿದ ಜನರು ಕೊನೆಯ ನಾಲ್ಕು ನಿಮಿಷಗಳ ಕಾಲ ಬರಿಯ ಕಣ್ಣಿನಲ್ಲಿ ಗ್ರಹಣ ಕಂಡು ಆನಂದಿಸಿದರು. ಜಿಲ್ಲೆಯಲ್ಲಿ ಶೇ.10 ರಷ್ಟು ಗ್ರಹಣ ಗೋಚರಿಸಿದ್ದು, ಮುಳುಗುವ ಕೆಂಪು ಸೂರ್ಯ ಅತ್ಯಾಕರ್ಷಕವಾಗಿ ಕಂಡು ಬಂದು ಖಗೋಳಾಸಕ್ತರು ಮಾತ್ರವಲ್ಲ, ಸಾಮಾನ್ಯ ಜನರಿಗೂ ಖುಷಿಯುಂಟುಮಾಡಿತು.

ಬೆಂಗಳೂರಿನಲ್ಲಿ ಸೂರ್ಯಗ್ರಹಣ ವೀಕ್ಷಿಸಿ ಸಂಭ್ರಮಿಸಿದ ಜನ, ರಸ್ತೆಗಳು ಖಾಲಿ ಖಾಲಿ!

ಈ ಸಂದರ್ಭದಲ್ಲಿ ಬಿಜೆಪಿ ರಾಷ್ಟ್ರೀಯ ಪ್ರ.ಕಾರ್ಯದರ್ಶಿ ಯಶ್ಪಾಲ್ ಸುವರ್ಣ, ಶಾಸಕ ರಘುಪತಿ ಭಟ್, ಪಿಪಿಸಿ ಕಾಲೇಜಿನ ಪ್ರಾಂಶುಪಾಲ ಡಾ| ರಾಘವೇಂದ್ರ, ಪಿಪಿಸಿ ಕಾಲೇಜಿನ ಅಮೆಚೂರ್ ಆಸ್ಟ್ರೋಮೋಮರ್ಸ್ ಕ್ಲಬ್ ನ ಸ್ಥಾಪಕ ಅಧ್ಯಕ್ಷ ಡಾ| ಎ.ಪಿ.ಭಟ್, ಸಂಯೋಜಕ ಅತುಲ್ ಭಟ್, ಭೌತಶಾಸ್ತ್ರ ವಿಭಾಗದ ಮುಖ್ಯಸ್ಥೆ ಪ್ರತಿಭಾ ಆಚಾರ್ಯ, ಶ್ರೀನಿವಾಸ್ ವಿಶ್ವವಿದ್ಯಾನಿಲಯದ ಉಪ ಕುಲಪತಿ ಡಾ| ಪಿ. ಶ್ರೀರಮಣ ಐತಾಳ್, ಉಡುಪಿ ಕ್ಷೇತ್ರ ಶಿಕ್ಷಣಾಧಿಕಾರಿ ಅಶೋಕ್ ಕಾಮತ್, ಕಾಮರ್ಸ್ ವಿಭಾಗದ ಪ್ರಾಧ್ಯಾಪಕಿಯರಾದ ಅಪೂರ್ವ, ದೀಕ್ಷಾ, ಕನ್ನಡ ವಿಭಾಗದ ಪ್ರಾಧ್ಯಾಪಕ ನಾಗರಾಜ್, ಐಕ್ಯೂಎಸಿಯ ಸಂಯೋಜಕ ವಿನಯ್, ಮಲ್ಪೆ ಅಭಿವೃದ್ಧಿ ಸಮಿತಿಯ ಸುದೇಶ್ ಶೆಟ್ಟಿ ಉಪಸ್ಥಿತರಿದ್ದರು.

ಸೂರ್ಯಗ್ರಹಣದ ವೇಳೆ ಆಹಾರ ಸೇವಿಸಿ ಮೌಡ್ಯಕ್ಕೆ ಸೆಡ್ಡು ಹೊಡೆದ ರಾಜ್ಯದ ಜನತೆ

ಪೂರ್ಣ ಪ್ರಜ್ಞಾ ಕಾಲೇಜಿನ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳು ಹಾಗು ಎನ್.ಎಸ್.ಎಸ್ ವಿದ್ಯಾರ್ಥಿಗಳು ಪ್ರವಾಸಿಗರಿಗೆ ಸೂರ್ಯಗ್ರಹಣ ವೀಕ್ಷಿಸಲು ಸಹಕರಿಸಿದರು. ಹಳೆ ವಿದ್ಯಾರ್ಥಿಗಳಾದ ದಿನೇಶ್ ಹೆಬ್ಬಾರ್ ಮತ್ತು ಶುಭಶ್ರೀ ಶೆಣೈ ಸೂರ್ಯಗ್ರಣದ ಪ್ರಾತ್ಯಕ್ಷಿಕೆ ನಡೆಸಿದರು.

Latest Videos
Follow Us:
Download App:
  • android
  • ios