ಉಡುಪಿ(ಮೇ 13): ತೀರಾ ಅಸಹಾಯಕ ಸ್ಥಿತಿಯಲ್ಲಿದ್ದ ಮಂಗಳೂರಿನ ಕ್ಯಾನ್ಸರ್‌ ರೋಗಿಯೊಬ್ಬರಿಗೆ ಉಡುಪಿಯ ಕೊರೋನಾ ವಾರಿಯರ್ಸ್‌ ಆಹಾರ, ಔಷಧಿ ಮತ್ತು ಆರ್ಥಿಕ ನೆರವು ನೀಡಿ ಮಾನವೀಯತೆ ಮೆರೆದಿದ್ದಾರೆ.

ಲಾಕ್‌ಡೌನ್‌ ಮಧ್ಯೆ ಅನಾರೋಗ್ಯದಿಂದ ಹಾಸಿಗೆ ಹಿಡಿದಿರುವ ಆಟೋ ಚಾಲಕ ಉಮಾನಾಥ್‌ ಅವರು ದುಡಿಯಲಾಗದೆ, ಕೈಯಲ್ಲಿ ಹಣ ಇಲ್ಲದೆ ಔಷಧಿ ಖರೀದಿಸಲಾಗದೆ ಉಣ್ಣಲಿಕ್ಕೂ ಮನೆಯಲ್ಲಿ ಅಕ್ಕಿ ಇಲ್ಲದೆ ತೀರಾ ತೊಂದರೆಗೊಳಗಾಗಿದ್ದರು. ಅವರು ತಮ್ಮೂರಿನ ಎಲ್ಲ ಜನಪ್ರತಿನಿಧಿಗಳನ್ನೂ ದಿನನಿತ್ಯ ಎಂಬಂತೆ ಕೇಳಿಕೊಂಡಿದ್ದರೂ ಒಬ್ಬರೂ ಅವರಿಗೆ ದಿನಸಿ ಕಿಟ್‌ ಆಗಲಿ, ಔಷಧಿಗಾಗಲಿ ಸಹಾಯ ಮಾಡಿರಲಿಲ್ಲ.

ರಾಜ್ಯದಲ್ಲಿ ನಿನ್ನೆ ದಾಖಲೆಯ 63 ಕೇಸು: ಕೊರೋನಾ ಮುಕ್ತ ಜಿಲ್ಲೆ 5 ಮಾತ್ರ!

ಕೊನೆಗೆ ಉಡುಪಿಯ ಕೊರೋನಾ ವಾರಿಯರ್ಸ್‌ ತಂಡದ ಮಾಹಿತಿ ಪಡೆದು ಈ ಕುಟುಂಬ ನೆರವು ಯಾಚಿಸಿತು. ಅದರಂತೆ ಮೇ 11ರಂದು ಉಡುಪಿಯ ಕಮಲ ಎ. ಬಾಳಿಗಾ ಟಾರಿಟೆಬಲ್‌ ಟ್ರಸ್ವ್‌ನ ನೆರವಿನಿಂದ 5000 ರು.ಗಳ ಔಷಧಿ ಮತ್ತು ದಿನಸಿ ಹಾಗೂ 1000 ರು.ಗಳನ್ನು ಕೊಟ್ಟು ಬಂದಿದ್ದೇವೆ ಎಂದು ಕೊರೋನಾ ವಾರಿಯರ್‌ ದೀಪಕ್‌ ಶೆಣೈ ತಿಳಿಸಿದ್ದಾರೆ.

ಮಂಗಳೂರಿನ ದೇರೆಬೈಲ್‌ ಕೊಂಚಾಡಿ ಗ್ರಾಮದಲ್ಲಿ ಉಮಾನಾಥ್‌, ಆಟೋ ರಿಕ್ಷಾ ಚಾಲಕರಾಗಿದ್ದು, ಪತ್ನಿ ಮತ್ತು ಮಗನೊಂದಿಗೆ ವಾಸಿಸುತ್ತಿದ್ದಾರೆ. ಹಿಂದೊಮ್ಮೆ ಹೊಟ್ಟೆನೋವಿನಿಂದ ಶಸ್ತ್ರಚಿಕಿತ್ಸೆಗೆ ಒಳಗಾಗಿ ಲಕ್ಷಾಂತರ ರು. ಖರ್ಚು ಮಾಡಿದ್ದರು. 2018ರಲ್ಲಿ 18 ಲಕ್ಷ ರು. ಸಾಲ ಮಾಡಿ ಮನೆಯನ್ನು ಕಟ್ಟಿದ್ದಾರೆ. ಅದಾಗಿ ಮೂರೇ ತಿಂಗಳಲ್ಲಿ ತುಟಿಯ ಕ್ಯಾನ್ಸರ್‌ನಿಂದ ಹಾಸಿಗೆ ಹಿಡಿದು ಕೊರಗುತ್ತಿದ್ದಾರೆ. ತಿಂಗಳಿಗೆ 11 ಸಾವಿರ ರು. ಬ್ಯಾಂಕ್‌ ಸಾಲದ ಕಂತು, ಉಮಾನಾಥ್‌ ಅವರ ಚಿಕಿತ್ಸೆಗೆ ಪ್ರತಿ ತಿಂಗಳು 17 ಸಾವಿರ ರು. ತಗಲುತ್ತಿದೆ. ಮನೆಯ ಆರ್ಥಿಕ ದುಸ್ಥಿತಿಯಿಂದ ಮಗ ಕಾಲೇಜು ಶಿಕ್ಷಣ ಅರ್ಧದಲ್ಲಿಯೇ ನಿಲ್ಲಿಸಿದ್ದಾನೆ, ಪತ್ನಿ ಜಯಶ್ರೀ ಅವರು ಇತ್ತೀಚೆಗೆ ಹೊಲಿಗೆ ಕೆಲಸಕ್ಕೆ ಸೇರಿಕೊಂಡಿದ್ದಾರೆ. ಮುಂದೇನು ಎಂಬುದು ತಿಳಿಯದೆ ಈ ಕುಟುಂಬ ಸಮಾಜದ ನೆರವಿನ ನಿರೀಕ್ಷೆಯಲ್ಲಿದೆ.

‘ಹಸಿರಾ’ಗಿದ್ದ 3 ಜಿಲ್ಲೆಗಳಿಗೀಗ ಕೊರೋನಾ ಕೆಸರು!

ನಮ್ಮ ಕೊರೋನಾ ವಾರಿಯರ್ಸ್‌ 21 ಭಾಷೆಗಳಲ್ಲಿ ರಚಿಸಿರುವ ಕೊರೋನಾ ಜಾಗೃತಿ ಆಡಿಯೋ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ಅದನ್ನು ಕೇಳಿದ ಉಮಾನಾಥ್‌ ಅವರ ಮಗ ನಮಗೆ ಕರೆ ಮಾಡಿ ಸಹಾಯ ಯಾಚಿಸಿದರು. ಅದರಂತೆ ತಕ್ಷಣ ಸ್ಪಂದಿಸಿ ಅವರ ನಿಜಸ್ಥಿತಿಯನ್ನು ಪತ್ತೆ ಮಾಡಿದಾಗ ಅವರು ತೀರಾ ದಯಾನೀಯ ಸ್ಥಿತಿಯಲ್ಲಿದ್ದರು. ಅವರು ಮಂಗಳೂರಿನವಾರದರೂ ಮಾನವೀಯತೆಯ ನೆಲೆಯಲ್ಲಿ ಔಷಧಿ - ಆಹಾರ ನೀಡಿ ಬಂದಿದ್ದೇವೆ ಎಂದು ದೀಪಕ್‌ ಶೆಣೈ ತಿಳಿಸಿದ್ದಾರೆ.