ಖ್ಯಾತ ಸಂಗೀತ ವಿದುಷಿ ಸಂಗೀತ ಬಾಲಚಂದ್ರ ಅವರು ಉಡುಪಿಯ ಶ್ರೀಕೃಷ್ಣನ ಸನ್ನಿಧಿಯಲ್ಲಿ ಸತತ 25 ಗಂಟೆಗಳ ಕಾಲ ದಾಸರ ಕೀರ್ತನೆಗಳನ್ನು ಹಾಡಿ ವಿಶ್ವದಾಖಲೆ ನಿರ್ಮಿಸಿದ್ದಾರೆ. ಈ ಮಹಾಸಾಧನೆಗಾಗಿ ಅವರ ಹೆಸರು ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್‌ನಲ್ಲಿ ದಾಖಲಾಗಿದೆ.

ಉಡುಪಿ (ಆ.25): ಖ್ಯಾತ ಸಂಗೀತ ವಿದುಷಿ ಸಂಗೀತ ಬಾಲಚಂದ್ರ ಅವರು ಉಡುಪಿಯ ಶ್ರೀಕೃಷ್ಣನ ಸನ್ನಿಧಿಯಲ್ಲಿ ಸತತ 25 ಗಂಟೆಗಳ ಕಾಲ ನಿರಂತರವಾಗಿ ದಾಸರ ಕೀರ್ತನೆಗಳನ್ನು ಹಾಡುವ ಮೂಲಕ ವಿಶ್ವದಾಖಲೆ ನಿರ್ಮಿಸಿದ್ದಾರೆ. ಈ ಸಾಧನೆಗಾಗಿ ಅವರ ಹೆಸರು ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್‌ನಲ್ಲಿ ದಾಖಲಾಗಿದೆ.

ಸತತ 25 ಗಂಟೆಗಳ ಕಾಲ ಹಾಡಿ ವಿಶ್ವದಾಖಲೆ!

ಭಾನುವಾರ ಬೆಳಗ್ಗೆ 6.30ಕ್ಕೆ ಪುತ್ತಿಗೆ ಮಠದ ಗೀತಾಮಂದಿರದ ಶ್ರೀ ನೃಸಿಂಹ ಸಭಾಭವನದಲ್ಲಿ ಆರಂಭಗೊಂಡ ಸಂಗೀತ ಬಾಲಚಂದ್ರ ಅವರ ನಿರಂತರ ಗಾಯನ ಸೋಮವಾರ ಬೆಳಗ್ಗೆ 7.40ಕ್ಕೆ ಮಂಗಳವಾಯಿತು. ಕೇವಲ ದಾಸರ ಪದ ಮತ್ತು ಕೀರ್ತನೆಗಳನ್ನೇ ಸತತ 25 ಗಂಟೆಗಳ ಕಾಲ ಹಾಡಿದ ಅವರ ಈ ಐತಿಹಾಸಿಕ ಸಾಧನೆಯನ್ನು ಅಧಿಕೃತವಾಗಿ ದೃಢೀಕರಿಸಲು ಆಗಮಿಸಿದ್ದ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್‌ನ ಏಷ್ಯಾ ಹೆಡ್ ಡಾ.ಮನೀಷ್ ವಿಶ್ನೋಯಿ ಅವರು ವಿಶ್ವದಾಖಲೆ ಘೋಷಿಸಿದರು. ಬಳಿಕ, ಅದಮಾರು ಮಠದ ವಿಶ್ವಪ್ರಿಯ ತೀರ್ಥ ಶ್ರೀಪಾದರು ವಿಶ್ವದಾಖಲೆಯ ಪ್ರಮಾಣಪತ್ರವನ್ನು ವಿದುಷಿ ಸಂಗೀತ ಅವರಿಗೆ ಹಸ್ತಾಂತರಿಸಿದರು.

ಜೊತೆಗೆ, ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರ ಆಶಯದಂತೆ ‘ಗೀತಾ ಗಂಗೋತ್ರಿ’ ಎಂಬ ಬಿರುದನ್ನು ಪ್ರದಾನ ಮಾಡಿ ಆಶೀರ್ವದಿಸಿದರು.