ಒಂದು ಕೋಟಿ ರೂಪಾಯಿ ದಾನ ಮಾಡಿದ ಕೂಲಿ ಕಾರ್ಮಿಕ, ಇದು ಹೃದಯ ಶ್ರೀಮಂತನ ಕಥೆ

ಉಡುಪಿಯ ಕೂಲಿ ಕಾರ್ಮಿಕ ರವಿ ಕಟಪಾಡಿ ಎಲ್ಲರಿಗೂ ಚಿರಪರಿಚಿತ.  ಭಯಾನಕ ವೇಷ ಧರಿಸಿ ಹಣ ಸಂಗ್ರಹಿಸಿ ಅದನ್ನು ದಾನ ಮಾಡುವ ಪ್ರವೃತ್ತಿಯನ್ನು ಕಳೆದ 8 ವರ್ಷಗಳಿಂದ ಮಾಡುತ್ತಿದ್ದಾರೆ . ಈವರೆಗೆ ಅವರು ಒಂದು ಕೋಟಿ ರೂಪಾಯಿ ಸಂಗ್ರಹಿದ್ದಾರೆ.

udupi ravi katpadi donated one crore rupees health issues children treatment gow

ವರದಿ: ಶಶಿಧರ ಮಾಸ್ತಿಬೈಲು , ಏಷ್ಯಾನೆಟ್ ಸುವರ್ಣ ನ್ಯೂಸ್

ಉಡುಪಿ (ಸೆ.3): ಬಡವನೊಬ್ಬ ಹೃದಯ ಶ್ರೀಮಂತನಾಗಿ ಬೆಳೆದ ಅಪರೂಪದ ಕಥೆ ಇದು. ಕೂಲಿ ಕೆಲಸ ಮಾಡುವ ಉಡುಪಿಯ ರವಿಕಟಪಾಡಿ ಬರೋಬ್ಬರಿ ಒಂದು ಕೋಟಿ ರೂಪಾಯಿಯನ್ನು ಬಡ ಮಕ್ಕಳ ಚಿಕಿತ್ಸೆಗೆ ದಾನ ಮಾಡಿದ್ದಾರೆ. ಈ ಮೂಲಕ ಎಂಟು ವರ್ಷಗಳಿಂದ ನಡೆಸುತ್ತಿರುವ ತನ್ನ ದಾನ ಪರಂಪರೆಯನ್ನು ಮುಂದುವರೆಸಿದ್ದಾರೆ. ಭಯಾನಕ ವೇಷವನ್ನೊಮ್ಮೆ ನೋಡಿ, ಬೆಚ್ಚಿ ಬೀಳುವಷ್ಟು ಭೀಕರವಾದ ಮುಖ, ಆದರೆ ಇಂತಹ ಕ್ರೂರ ಮುಖದ ಹಿಂದೆ ಬೆಣ್ಣೆಯಂತೆ ಕರಗುವ ಹೃದಯ ಹೊಂದಿದೆ. ಆ ಮಾನವೀಯ ಹೃದಯವೇ ರವಿಕಟಪಾಡಿ! ಉಡುಪಿಯ ರವಿಕಟಪಾಡಿ ಎಲ್ಲರಿಗೂ ಗೊತ್ತು. ಪ್ರತಿ ವರ್ಷ ಶ್ರೀ ಕೃಷ್ಣ ಜನ್ಮಾಷ್ಟಮಿಯ ಎರಡು ದಿನಗಳ ಕಾಲ ಈ ರೀತಿ ಭಯಂಕರ ವೇಷ ಧರಿಸಿ ಊರೆಲ್ಲ ಅಡ್ಡಾಡಿ ಹಣ ಸಂಗ್ರಹಿಸುತ್ತಾರೆ. ಹೀಗೆ ಸಂಗ್ರಹವಾದ ಹಣವನ್ನು ನಯಾ ಪೈಸೆ ಉಳಿಸಿಕೊಳ್ಳದೆ ಬಡ ಮಕ್ಕಳ ಚಿಕಿತ್ಸೆಗೆ ದಾನ ನೀಡುತ್ತಾ ಬಂದಿದ್ದಾರೆ.  ಕಳೆದ ಎಂಟು ವರ್ಷದ ಇವರ ಈ ಕಾಯಕದಲ್ಲಿ ಒಟ್ಟು ಸಂಗ್ರಹವಾದ ಹಣದ ಮೊತ್ತ ಒಂದು ಕೋಟಿ ರೂಪಾಯಿ ಮಿಕ್ಕಿದೆ. ಈ ಬಾರಿ ಕೃಷ್ಣ ಜನ್ಮಾಷ್ಟಮಿಯ ದಿನ ಬರೋಬ್ಬರಿ 14 ಲಕ್ಷ ರುಪಾಯಿ ಸಂಗ್ರಹಿಸಿದ್ದರು. ತನ್ಮೂಲಕ 8 ವರ್ಷಗಳಲ್ಲಿ ಒಂದು ಕೋಟಿ ರೂಪಾಯಿ ಸಂಗ್ರಹಿಸಿದಂತಾಗಿದೆ. ಈ ಬಾರಿ ಸಂಗ್ರಹವಾದ ಮೊತ್ತವನ್ನು 10 ಮಂದಿ ಬಡ ಮಕ್ಕಳ ಗಂಭೀರ ಕಾಯಿಲೆಯ ಚಿಕಿತ್ಸೆಗೆ ದಾನವಾಗಿ ನೀಡಿದ್ದಾರೆ. ತಾನೊಬ್ಬ ಹೃದಯ ಶ್ರೀಮಂತ ಅನ್ನೋದನ್ನು ಮತ್ತೊಮ್ಮೆ ಸಾಬೀತು ಮಾಡಿದ್ದಾರೆ.

ಹೇಳಿ ಕೇಳಿ ರವಿಕಟಪಾಡಿ ವೃತ್ತಿಯಲ್ಲಿ ಕೂಲಿ ಕಾರ್ಮಿಕ. ಸ್ವಂತ ವಾಸಕ್ಕೊಂದು ಗಟ್ಟಿ ಮನೆ ಇಲ್ಲ. ಕೂಲಿ ಕೆಲಸ ಬಿಟ್ಟರೆ ಬೇರೆ ಯಾವುದೇ ಆರ್ಥಿಕ ಮೂಲವಿಲ್ಲ. ಹಾಗಂತ ಈ ಮನುಷ್ಯನಿಗೆ ಸ್ವಲ್ಪವೂ ಆಸೆ ಇಲ್ಲ. ತನ್ನ ದಾನ ಧರ್ಮಗಳಿಗೆ ಅಡ್ಡಿಯಾಗಬಾರದು ಅನ್ನೋ ಕಾರಣಕ್ಕೆ ಮದುವೇನೂ ಆಗಿಲ್ಲ. ಅಷ್ಟಮಿ ಬಂದರೆ ಸಾಕು ವಿಭಿನ್ನವೇಷಗಳನ್ನು ಧರಿಸಿ ಬೀದಿಬೀದಿ ಅಲೆದಾಡಿ ಹಣ ಸಂಗ್ರಹಿಸಲು ಇವರು ಮುಂದಾಗುತ್ತಾರೆ. 

ವೇಷಹಾಕಿ ಸಂಗ್ರಹಿಸಿದ 7 ಲಕ್ಷ ರು. 8 ಮಕ್ಕಳಿಗೆ ದಾನ ಮಾಡಿದ ರವಿ

ರವಿ ಕಟಪಾಡಿಗೆ ಬೆಂಬಲವಾಗಿ ಆಸುಪಾಸಿನ ಸುಮಾರು ನೂರು ತರುಣರು ಜೊತೆಯಾಗಿದ್ದಾರೆ. ಈ ಬಾರಿಯೂ ಎಂದಿನಂತೆ ಸಂಗ್ರಹವಾದ ಹಣವನ್ನು ಜಿಲ್ಲಾಧಿಕಾರಿ ಹಾಗೂ ಪೊಲೀಸ್ ವರಿಷ್ಠಾಧಿಕಾರಿಗಳ ಮೂಲಕ 10 ಬಡ ಮಕ್ಕಳ ಗಂಭೀರ ಖಾಯಿಲೆಗಳ  ಚಿಕಿತ್ಸೆಗೆ ದಾನವಾಗಿ ಹಸ್ತಾಂತರಿಸಿದ್ದಾರೆ. ಕೋಟಿ ರೂಪಾಯಿ ದಾನ ಮಾಡಿ ನಿಜಾರ್ಥದಲ್ಲಿ ಕೋಟಿಗೊಬ್ಬ ಎನಿಸಿದ್ದಾರೆ!

Udupi; ಕಾರ್ಮಿಕನೊಬ್ಬ ಲಕ್ಷಾಂತರ ರೂಪಾಯಿ ದಾನ ಮಾಡುವ ಕಥೆ ಕೇಳಿದ್ದೀರಾ?

ಮುಂದೆಯೂ ತನ್ನ ಈ ಕಾಯಕವನ್ನು ಮುಂದುವರಿಸುವುದಾಗಿ ರವಿ ಕಟಪಾಡಿ ಹೇಳುತ್ತಾರೆ. ತನ್ನ ಕಣ್ಣೆದುರು ಲಕ್ಷ ಲಕ್ಷ ರೂಪಾಯಿಗಳಿದ್ದರು ಅದರಿಂದ ನಯಾಪೈಸೆ ಪಡೆಯದೆ ಎಲ್ಲವನ್ನು ದಾನ ಮಾಡುವ ಈ ಹೃದಯ ಶ್ರೀಮಂತನನ್ನು ಸಮಾಜ ಹಾಡಿ ಹೊಗಳುತ್ತಿದೆ.

Latest Videos
Follow Us:
Download App:
  • android
  • ios