ವೇಷಹಾಕಿ ಸಂಗ್ರಹಿಸಿದ 7 ಲಕ್ಷ ರು. 8 ಮಕ್ಕಳಿಗೆ ದಾನ ಮಾಡಿದ ರವಿ
- ಪ್ರತಿವರ್ಷದಂತೆ ಈ ಬಾರಿಯೂ ಸಮಾಜಸೇವಕ ರವಿ ಕಟಪಾಡಿ ಅವರು ಅನಾರೋಗ್ಯಪೀಡಿತ ಬಡ ಮಕ್ಕಳಿಗಾಗಿ ಕೃಷ್ಣ ವಿಭಿನ್ನ ವೇಷ
- ವೇಷ ಧರಿಸಿ 7,17,350 ರು.ಗಳನ್ನು ಸಂಗ್ರಹಿಸಿದ್ದು, ಅದನ್ನು ಗುರುವಾರ 8 ಮಂದಿ ಮಕ್ಕಳಿಗೆ ಹಸ್ತಾಂತರ
ಉಡುಪಿ (ಸೆ.16): ಪ್ರತಿವರ್ಷದಂತೆ ಈ ಬಾರಿಯೂ ಸಮಾಜಸೇವಕ ರವಿ ಕಟಪಾಡಿ ಅವರು ಅನಾರೋಗ್ಯಪೀಡಿತ ಬಡ ಮಕ್ಕಳಿಗಾಗಿ ಕೃಷ್ಣ ಜನ್ಮಾಷ್ಟಮಿ ಸಂದರ್ಭದಲ್ಲಿ ವಿಭಿನ್ನ ವೇಷ ಧರಿಸಿ 7,17,350 ರು.ಗಳನ್ನು ಸಂಗ್ರಹಿಸಿದ್ದು, ಅದನ್ನು ಗುರುವಾರ 8 ಮಂದಿ ಮಕ್ಕಳಿಗೆ ಹಸ್ತಾಂತರಿಸಲಿದ್ದಾರೆ.
ಈವರೆಗೆ 6 ವರ್ಷಗಳಲ್ಲಿ ರವಿ ಅವರು ಹಾಲಿವುಡ್ ಸಿನೆಮಾಗಳಲ್ಲಿ ಬರುವ ಫ್ಯಾಂಟಸಿ ಪಾತ್ರಗಳ ವೇಷ ಧರಿಸಿ ಸುಮಾರು 72 ಲಕ್ಷ ರು.ಗೂ ಅಧಿಕ ಮೊತ್ತ ಸಂಗ್ರಹಿಸಿದ್ದು, 33 ಬಡ ಕುಟುಂಬಗಳ ಅನಾರೋಗ್ಯ ಪೀಡಿತ ಮಕ್ಕಳ ಚಿಕಿತ್ಸೆಗೆ ದಾನ ಮಾಡಿದ್ದಾರೆ. ಈ ಬಾರಿ 8 ಮಕ್ಕಳೂ ಸೇರಿ ಒಟ್ಟು 41 ಮಕ್ಕಳಿಗೆ ಅವರು ಸುಮಾರು 79 ಲಕ್ಷ ರು. ವಿತರಿಸಿದಂತಾಗಿದೆ. ಮುಂದೆಯೂ ಇದೇ ರೀತಿ ವೇಷ ಧರಿಸಿ ಒಟ್ಟು 1 ಕೋಟಿ ರು.ಗಳಷ್ಟುಸಹಾಯ ಮಾಡುವ ಗುರಿ ಹಾಕಿಕೊಂಡಿದ್ದಾರೆ. ಕೊರೋನಾ ಕಾರಣದಿಂದ 3- 4 ಲಕ್ಷ ಸಂಗ್ರಹವಾಗಬಹುದು ಎಂಬ ನಿರೀಕ್ಷೆ ಇತ್ತು ಎಂದು ರವಿ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.
ಕಳೆದ 6 ವರ್ಷದಲ್ಲಿ 72 ಲಕ್ಷ ರೂಪಾಯಿ ದಾನ ಮಾಡಿರುವ ಸಹೃದಯಿ ರವಿ ಕಟಪಾಡಿ
ಗುರುವಾರ ಸಂಜೆ ಕಟಪಾಡಿಯ ಪೇಟೆಬೆಟ್ಟು ಬಬ್ಬುಸ್ವಾಮಿ ದೈವಸ್ಥಾನದಲ್ಲಿ ಕೇಮಾರು ಸಾಂದೀಪನಿ ಆಶ್ರಮದ ಶ್ರೀ ಈಶವಿಠಲದಾಸ ಸ್ವಾಮೀಜಿ, ಉಡುಪಿ ಡಿಸಿ ಕೂರ್ಮಾ ರಾವ್, ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ದಯಾನಂದ ಕತ್ತಲಸಾರ್ ಅವರು ರಕ್ತದ ಕ್ಯಾನ್ಸರ್, ಯಕೃತ್ತು, ಕಿಡ್ನಿ ಕಾಯಿಲೆ, ಅಪಘಾತ ಚಿಕಿತ್ಸೆ ಇತ್ಯಾದಿಗಳಿಗೆ ಲಕ್ಷಾಂತರ ರು. ಅಗತ್ಯ ಇರುವ ಉಡುಪಿ, ಬ್ರಹ್ಮಾವರ, ಮಂಗಳೂರು, ಹಳೆಯಂಗಡಿ ಮುಂತಾದ ಕಡೆಯ ಮಕ್ಕಳಿಗೆ ಹಣ ಹಸ್ತಾಂತರಿಸಲಿದ್ದಾರೆ ಎಂದವರು ಹೇಳಿದ್ದಾರೆ.