ಉಡುಪಿಯ ಕನ್ನರ್ಪಾಡಿಯಲ್ಲಿ ಭಾನುವಾರದ ಪೂಜೆಯ ಬಳಿಕ 60 ಮಂದಿ ಕ್ರೈಸ್ತ ಧರ್ಮಗುರುಗಳು ಮತ್ತು ಡಿಕನ್‌ರು ಕ್ರಿಕೆಟ್ ಆಡುವ ಮೂಲಕ ಗಮನ ಸೆಳೆದರು. ವಿಯಾನ್ನಿ ಕ್ರಿಕೆಟ್ ಪಂದ್ಯಾವಳಿಯಲ್ಲಿ ವಿಯಾನ್ನಿ ಸೂಪರ್ ಕಿಂಗ್ಸ್ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿತು.

ಉಡುಪಿ: ಪ್ರತಿದಿನ ಪವಿತ್ರ ಬಲಿಪೀಠದ ಬಳಿ ಧಾರ್ಮಿಕ ಸೇವೆಯಲ್ಲಿ ತೊಡಗಿಕೊಳ್ಳುವ ಕ್ರೈಸ್ತ ಧರ್ಮಗುರುಗಳು ಭಾನುವಾರದ ಪವಿತ್ರ ಬಲಿಪೂಜೆಯ ಬಳಿಕ ಬಾಲ್ ಬ್ಯಾಟ್ ಹಿಡಿದ ಮೈದಾನಕ್ಕಿಳಿದು ಕ್ರಿಕೆಟ್ ಆಡಿದ ಅಪರೂಪದ ವಿದ್ಯಮಾನ ಇಲ್ಲಿನ ಕನ್ನರ್ಪಾಡಿ ಸಂತ ಮೇರಿ ಆಂಗ್ಲ ಮಾಧ್ಯಮ ಶಾಲೆಯ ಮೈದಾನದಲ್ಲಿ ಜರುಗಿತು.

ಕ್ರಿಕೆಟ್ ಪಂದ್ಯಾವಳಿಯಲ್ಲಿ 60 ಮಂದಿ ಧರ್ಮಗುರುಗಳು

ಉಡುಪಿ ಕಥೊಲಿಕ್ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ವಂ.ಡಾ.ಲೆಸ್ಲಿ ಕ್ಲಿಫರ್ಡ್ ಡಿಸೋಜಾ ಪ್ರೋತ್ಸಾಹದೊಂದಿಗೆ ನಡೆದ ಈ ವಿಯಾನ್ನಿ ಕ್ರಿಕೆಟ್ ಪಂದ್ಯಾವಳಿಯಲ್ಲಿ 60 ಮಂದಿ ಧರ್ಮಗುರುಗಳು ಮತ್ತು ಡಿಕನ್‌ರು ಕ್ರೀಡಾಸ್ಫೂರ್ತಿಯಿಂದ ಆಟವಾಡಿದರು.

ನಾಲ್ಕು ಓವರ್‌ಗಳ ಕ್ರಿಕೆಟ್ ಪಂದ್ಯಾವಳಿಯಲ್ಲಿ ವಿಯಾನ್ನಿ ಸೂಪರ್ ಕಿಂಗ್ಸ್ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿದ್ದು, ವಿಯಾನ್ನಿ ಕ್ಯಾಪಿಟಲ್ಸ್ ತಂಡ ರನ್ನರ್‌ ಅಪ್ ಸ್ಥಾನ ಪಡೆಯಿತು.

ಫಾ. ಜೋಜೋ ಅವರು ಪಂದ್ಯಾವಳಿಯ ಶ್ರೇಷ್ಠ ಆಟಗಾರ ಪ್ರಶಸ್ತಿ

ಪಾಂಬೂರು ಚರ್ಚಿನ ಡೀಕನ್ ಸ್ಟೀಫನ್ ಡಿಸೋಜಾ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರೆ, ಕಟಪಾಡಿಯ ಹೋಲಿ ಕ್ರಾಸ್ ಸೆಮಿನರಿಯ ಫಾ. ಜೋಜೋ ಅವರು ಪಂದ್ಯಾವಳಿಯ ಶ್ರೇಷ್ಠ ಆಟಗಾರ ಪ್ರಶಸ್ತಿ ಪಡೆದುಕೊಂಡರು.

ಉಡುಪಿ ಧರ್ಮಪ್ರಾಂತ್ಯದ ಧರ್ಮಗುರುಗಳೊಂದಿಗೆ ವಿವಿಧ ಧಾರ್ಮಿಕ ಸಭೆಗಳಾದ ಹೋಲಿ ಕ್ರಾಸ್, ಕಾರ್ಮೆಲೈಟ್ಸ್ ಪ್ರಿಸ್ಟ್, ಸಾಲೇಶಿಯನ್ ಡಾನ್ ಬಾಸ್ಕೊ, ಕಾಪುಚಿನ್ ಸಭೆಯ ಧರ್ಮಗುರುಗಳು ಸಹ ಸೇರಿದ್ದರು.

ಕ್ರಿಕೆಟ್ ಪಂದ್ಯಾಟಕ್ಕೆ ಧರ್ಮಪ್ರಾಂತ್ಯದ ಶ್ರೇಷ್ಠ ಧರ್ಮಗುರು ಮೊನ್ಸಿಂಜ್ಞೊರ್ ಫ್ರಾನ್ಸಿಸ್ ಎಫ್ ಲೂವಿಸ್ ಚಾಲನೆ ನೀಡಿ ಶುಭ ಹಾರೈಸಿದರು. ಧರ್ಮಪ್ರಾಂತ್ಯದ ಕುಲಪತಿ ವಂ ಸ್ಟೀಫನ್ ಡಿಸೋಜಾ, ನಿವೃತ್ತ ಧರ್ಮಗುರು ವಂ.ಆಲ್ಫೋನ್ಸ್ ಡಿಲೀಮಾ, ಸಾರ್ವಜನಿಕ ಸಂಪರ್ಕಾಧಿಕಾರಿ ವಂ ಡೆನಿಸ್ ಡೆಸಾ, ಶಿರ್ವ ವಲಯ ಪ್ರಧಾನ ಧರ್ಮಗುರು ವಂ.ಚಾರ್ಲ್ಸ್ ಮಿನೇಜಸ್ ಸೇರಿದಂತೆ ಧರ್ಮಪ್ರಾಂತ್ಯದ ವಿವಿಧ ಚರ್ಚುಗಳ ಧರ್ಮಗುರುಗಳು ಇದ್ದರು.