ಉಡುಪಿ[ನ. 21]  ಎಲೆಯಾಕಾರದ, ನ್ಯೂಸ್ ಪೇಪರ್ ರೂಪದ, ವಾಟ್ಸಪ್ ಚಿಹ್ಹೆಯ, ರೋಲ್ ಮಾದರಿಯ, ಛಾಪಾ ಕಾಗದ ರೂಪದ ಭಿನ್ನ-ವಿಭಿನ್ನ ಮದುವೆ ಆಮಂತ್ರಣ ಪತ್ರಿಕೆಯನ್ನು ನಾವೆಲ್ಲ ನೋಡಿದ್ದೇವೆ. ಆದರೆ ಈ ಆಮಂತ್ರಣ ಪತ್ರಿಕೆ ಅದೆಲ್ಲದಕ್ಕಿಂತ ಮುಂದೆ ನಿಂತು ಮಾದರಿಯಾಗಿ ಕಾಣಿಸಿಕೊಳ್ಳುತ್ತಿದೆ.

ಮನಸ್ಸಿದ್ದರೆ ಮಾರ್ಗವಿದೆ, ಪರಿಸರವನ್ನು ಉಳಿಸುವ ಮನಸ್ಸಿದ್ದರೆ ಇಲ್ಲೊಂದು ಮಾರ್ಗವಿದೆ. ಮೂಲತಃ ಉಡುಪಿ ಜಿಲ್ಲೆ ಕೋಟದವರಾದ ಪ್ರಸ್ತುತ ಬೆಂಗಳೂರಿನಲ್ಲಿರುವ ಎಂಜಿನಿಯರ್ ವಿಜಯ್ ಪ್ರಕಾಶ್ ಹಂದೆ ಅವರು ಈ ಮಾರ್ಗವನ್ನು ಕಂಡು ಹಿಡಿದವರು. 

ನ.24ರಂದು ಉಡುಪಿಯಲ್ಲಿ ವಿಜಯ್ ಹಂದೆ ಮತ್ತು ನಿವೇದಿತಾ ಅವರ ಮದುವೆ ನಡೆಯಲಿದೆ. ಇತ್ತೀಚಿನ ಟ್ರೆಂಡ್‌ನಂತೆ ತಮ್ಮ ಮದುವೆಯ ಆಮಂತ್ರಣ ಪತ್ರಿಕೆ ಸ್ವಲ್ಪ ಡಿಫರೆಂಟ್ ಆಗಿರಬೇಕು ಎಂದು ಯೋಚಿಸಿದ ವಿಜಯ್ ತನ್ನ ತಮ್ಮ ವಿವೇಕ್ ಅವರ ಸಲಹೆಯಂತೆ ಇಕೋ ಫ್ರೆಂಡ್ಲಿ (ಪರಿಸರ ಸಹ್ಯ) ಆಮಂತ್ರಣ ಪತ್ರಿಕೆಗಳನ್ನು ಅಚ್ಚು ಹಾಕಿಸಿದ್ದಾರೆ. 

ಈ ಆಮಂತ್ರಣ ಪತ್ರವನ್ನು ಓದಿ ಎಲ್ಲೆಲ್ಲೋ ಎಸೆದು ಪರಿಸರವನ್ನು ಹಾಳು ಮಾಡುವುದಕ್ಕೆ ಬದಲಾಗಿದೆ ಅದನ್ನು ಅಂಗಳದಲ್ಲಿಯೋ ಕುಂಡದಲ್ಲಿಯೋ ಇಟ್ಟು ಮೇಲೊಂದಿಷ್ಟು ಮಣ್ಣು ಹಾಕಿ, ತಂಬಿಗೆಯಷ್ಟು ನೀರು ಎರೆದರೆ ಪತ್ರಿಕೆ ಸಂಪೂರ್ಣ ಮಣ್ಣಲ್ಲಿ ಕರಗುತ್ತದೆ, ಜೊತೆಗೆ ಅಲ್ಲಿ ಮೂರ್ನಾಲ್ಕು ದಿನಗಳಲ್ಲಿ ತುಳಸಿ ಗಿಡಗಳು ಬೆಳೆಯುತ್ತವೆ. 

ಈ ಆಮಂತ್ರಣ ಪತ್ರಿಕೆಗಳನ್ನು ವಿಶೇಷವಾಗಿ ಗುಜರಾತ್‌ನಿಂದ ತರಿಸಲಾಗಿದೆ. ಈ ಪತ್ರಿಕೆಗಳು ಕೈಯಿಂದ ತಯಾರಿಸಿದ (ಹ್ಯಾಂಡ್ ಮೇಡ್) ಕಾಗದದಿಂದ ಮಾಡಲಾಗಿದೆ. ಕಾಗವನ್ನು ತಯಾರಿಸುವಾಗ ಅದರಲ್ಲಿ ಹತ್ತಾರು ತುಳಸಿ ಬೀಜಗಳನ್ನು ಹಾಕಿರುತ್ತಾರೆ. ಕೇವಲ ತುಳಸಿ ಬೀಜ ಮಾತ್ರವಲ್ಲ, ಗೊಂಡೆ (ಮೇರಿ ಗೋಲ್ಡ್), ಜೀನಿಯಾ ಇತ್ಯಾದಿ ಹೂವಿನ ಬೀಜಗಳಿರುವ ಕಾಗದವೂ ಸಿಗುತ್ತವೆ. ಮೆಣಸು ಮತ್ತು ಕೆಲವು ತರಕಾರಿ, ಹಣ್ಣಿನ ಬೀಜಗಳಿರುವ ಕಾಗದಗಳೂ ಲಭ್ಯ ಇವೆ. ಯಾವುದು ಬೇಕು ಅದನ್ನು ಆಯ್ಕೆ ಮಾಡಿಕೊಳ್ಳಬಹುದು.

ಮದುವೆ ಮತ್ತು ಚುನಾವಣಾ ಫಲಿತಾಂಶ ಒಂದೇ ದಿನ 

ಮಕ್ಕಳ ಪರಿಸರ ಕಾಳಜಿಯೇ ಕಾರಣ 
ನಾವು ಮೊದಲು ಒಂದು ಕಾಗದವನ್ನು ತರಿಸಿ ಮಣ್ಣಲ್ಲಿ ನೆಟ್ಟು ನೋಡಿದೆವು. ಅದರಲ್ಲಿ ಚೆಂದವಾಗಿ ಗಿಡಗಳು ಬೆಳದವು. ನಮಗೆ ತುಳಸಿ ಗಿಡ ಶ್ರೇಷ್ಠ ಹಾಗೂ ಪೂಜನೀಯವಾಗಿರುವುದರಿಂದ ನಾವು ಅದನ್ನೇ ಆಯ್ಕೆ ಮಾಡಿದ್ದೀವಿ. ಸುಮಾರು 1300 ಪತ್ರಿಕೆಗಳನ್ನು ಮುದ್ರಿಸಿದ್ದೇವೆ. ಅದರಲ್ಲಿ ಮದುವೆ ಮತ್ತು ಆರತಕ್ಷತೆಯ ಆಮಂತ್ರಣಗಳಿವೆ. ಎರಡರಲ್ಲೂ ತುಳಸಿ ಬೀಜಗಳಿವೆ. ನಮ್ಮ ಮಕ್ಕಳ ಪರಿಸರ ಕಾಳಜಿಯೇ ಇದಕ್ಕೆ ಪ್ರೇರಣೆ ಎನ್ನುತ್ತಾರೆ ವಿಜಯ ಹಂದೆ ಅವರ ತಾಯಿ ಅಂಬಿಕಾ ಪ್ರಕಾಶ್.

ಪೆನ್ನಿನಲ್ಲಿಯೂ ತುಳಸಿ ಬೀಜಗಳಿವೆ 
ಮದುಮಗ ವಿಜಯ್ ಹಂದೆ ಇನ್ನೊಂದು ಪ್ರಯೋಗವನ್ನೂ ಮಾಡಿದ್ದಾರೆ. ತಮ್ಮ ಗೆಳೆಯರು, ಆಪ್ತರಿಗೆ ನೀಡುವುದಕ್ಕೆ ಪೆನ್ ರೂಪದ ಆಹ್ವಾನ ಪತ್ರಿಕೆಗಳನ್ನು ಸಿದ್ಧಪಡಿಸಿದ್ದಾರೆ. ಚೆನ್ನೈಯಿಂದ ತರಿಸಲಾಗಿರುವ ಸುಮಾರು 500 ಪೆನ್‌ಗಳ ಮೇಲೆ ಮದುವೆ ಆಮಂತ್ರಣವನ್ನು ಮುದ್ರಿಸಲಾಗಿದೆ. ಇಡೀಯಾಗಿ ಮಣ್ಣಲ್ಲಿ ಕರಗುವ ಈ ಪೆನ್‌ನ ಬುಡದಲ್ಲಿಯೂ ತುಳಸಿ ಬೀಜಗಳಿವೆ. ಪೆನ್ ಬಳಸಿದ ಮೇಲೆ ಮಣ್ಣಿನಲ್ಲಿ ನೆಟ್ಟರೆ ಕೆಲವೇ ದಿನಗಳಲ್ಲಿ ತುಳಸಿ ಗಿಡಗಳು ಹುಟ್ಟುತ್ತವೆ.