ಕಳೆದೆರಡು ವಾರಗಳಿಂದ ಸೆಮಿ ಲಾಕ್‌ ಡೌನ್‌ ಜಾರಿ ಲಾಕ್‌ಡೌನ್‌ ಇನ್ನಷ್ಟುಬಿಗಿಗೊಳಿಸುವ ಬಗ್ಗೆ ಜಿಲ್ಲಾಧಿಕಾರಿ ಜಿ.ಜಗದೀಶ್‌ ಸೂಚನೆ ಹೊರಗೆ ತಿರುಗಾಡಿದರೆ  ವಾಹನಗ  ಸೀಝ್‌  -ಉಡುಪಿ ಡೀಸಿ

ಉಡುಪಿ (ಮೇ.20): ಜಿಲ್ಲೆಯಲ್ಲಿ ಕಳೆದೆರಡು ವಾರಗಳಿಂದ ಸೆಮಿ ಲಾಕ್‌ ಡೌನ್‌ ಜಾರಿಯಲ್ಲಿದ್ದರೂ, ಜನರು ಹೊರಗೆ ತಿರುಗಾಡುವುದು ಕಡಿಮೆಯಾಗಿಲ್ಲ. ಈ ಹಿನ್ನೆಲೆಯಲ್ಲಿ ಲಾಕ್‌ಡೌನ್‌ ಇನ್ನಷ್ಟುಬಿಗಿಗೊಳಿಸುವ ಬಗ್ಗೆ ಜಿಲ್ಲಾಧಿಕಾರಿ ಜಿ.ಜಗದೀಶ್‌ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ

ದಿನಸಿ, ಹಣ್ಣು, ತರಕಾರಿ, ಮೀನು ಇತ್ಯಾದಿಗಳನ್ನು ಮನೆ ಹತ್ತಿರದ ಅಂಗಡಿಗಳಿಗೆ ನಡೆದುಕೊಂಡು ಹೋಗಿ ಕೊಂಡುಕೊಳ್ಳಿ, ಅದೇ ನೆಪದಲ್ಲಿ ಹೊರಗೆ ತಿರುಗಾಡಿದರೆ ಅವರ ವಾಹನಗಳನ್ನು ಸೀಝ್‌ ಮಾಡುತ್ತೇವೆ ಎಂದು ಜಿಲ್ಲಾಧಿಕಾರಿ ಎಚ್ಚರಿಕೆ ನೀಡಿದ್ದಾರೆ.

ಪ್ರತಿದಿನ ಪೊಲೀಸರು, ಸರಿಯಾದ ಕಾರಣವಿಲ್ಲದೇ ಹೊರಗೆ ಸಂಚರಿಸುವ ವಾಹನಗಳನ್ನು ಮುಟ್ಟುಗೋಲು ಹಾಕಿಕೊಳ್ಳುತಿದ್ದಾರೆ. ಅದು ಮಾಧ್ಯಮಗಳಲ್ಲಿ ವರದಿಯಾಗುತ್ತಿದೆ, ಆದರೂ ಕೆಲವು ಕಿಡಿಗೇಡಿಗಳು ವಾಹನಗಳಲ್ಲಿ ಓಡಾಡುತಿದ್ದಾರೆ.

'ಉಡುಪಿಯಲ್ಲಿ ಯಾವುದೇ ಕೊರತೆ ಇಲ್ಲ : ಆದ್ರೆ ಗಂಭೀರವಾಗಿ ಬಂದ್ರೆ ಚಿಕಿತ್ಸೆ ಕೊಡಲ್ಲ'

ಬುಧವಾರ ಸ್ವತಃ ಜಿಲ್ಲಾಧಿಕಾರಿ ಜಿ.ಜಗದೀಶ್‌, ತಹಸೀಲ್ದಾರ್‌ ಪ್ರದೀಪ್‌ ಕುರ್ಡೇಕರ್‌ ಮಲ್ಪೆ ಭಾಗದಲ್ಲಿ ರಸ್ತೆಗಿಳಿದು ಕಾರ್ಯಾಚರಣೆ ನಡೆಸಿದರು. ಕಾರಣವಿಲ್ಲದೇ ಸಂಚರಿಸುತಿದ್ದ ಹತ್ತಾರು ವಾಹನಗಳನ್ನು ಸ್ಥಳದಲ್ಲಿಯೇ ಜಪ್ತಿ ಮಾಡಿದರು.

ಉಡುಪಿ ನಗರದ ಕೋರ್ಟ್‌ ರಸ್ತೆಯಲ್ಲಿ ಬೆಳಗ್ಗೆ 10 ಗಂಟೆಯ ನಂತರವೂ ತೆರೆದಿದ್ದ, ಬೇಕರಿ, ಜ್ಯೂಸ್‌ ಸೆಂಟರ್‌ ಇತ್ಯಾದಿಗಳ ಮೇಲೆ ಪ್ರಕರಣ ದಾಖಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಮುಖ್ಯಮಂತ್ರಿ ಮಂಗಳವಾರ ನಡೆದ ವಿಡಿಯೋ ಕಾನ್ಫರೆನ್ಸ್‌ ಸಭೆಯಲ್ಲಿ, ಜಿಲ್ಲಾಧಿಕಾರಿಗಳಿಗೆ ಅಗತ್ಯ ಇದ್ದಲ್ಲಿ ಸಂಪೂರ್ಣ ಲಾಕ್‌ ಡೌನ್‌ ಮಾಡುವ ಹೆಚ್ಚಿನ ಅಧಿಕಾರವನ್ನು ನೀಡಿದ್ದಾರೆ. ಆದರೆ ಉಡುಪಿಯಲ್ಲಿ ಈಗಿರುವ ಸೆಮಿ ಲಾಕ್‌ ಡೌನ್‌ ಮುಂದುವರಿಸುವಂತೆ ಉಸ್ತುವಾರಿ ಸಚಿವರು ಹೇಳಿದ್ದು, ಅದರಂತೆ ಮೇ 24ರವರೆಗೆ ನಡೆಯಲಿದೆ. ಆದರೆ ಈಗಿರುವ ಮಿನಿ ಲಾಕ್‌ ಡೌನ್‌ನ್ನು ಇನ್ನಷ್ಟುಬಿಗಿ ಮಾಡಲಾಗುತ್ತದೆ ಎಂದು ಡಿಸಿ ಹೇಳಿದ್ದಾರೆ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona