*  ಕಲಾಕ್ಷೇತ್ರದಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿದ ಕಾಪುವಿನ ಯುವ ಕಲಾವಿದ*  ಯಾವುದೇ ಬಣ್ಣ ಅಥವಾ ಬ್ರಷ್ ಉಪಯೋಗಿಸದೆ ಬಿಡಿಸಿರುವ ಕಲಾಕೃತಿ*  ಶಶಾಂಕ್‌ಗೆ ದಾಖಲೆ ಪ್ರಮಾಣ ಪತ್ರ ನೀಡಿದ ಇಂಡಿಯಾ ಬುಕ್ ಆಫ್ ರೆಕಾರ್ಡ್ ಸಂಸ್ಥೆ 

ಉಡುಪಿ(ಜೂ.24): ಹೊಸತನದ ಮೂಲಕ ದಾಖಲೆ ಮಾಡುವುದು ಕಲಾವಿದರಿಗೆ ತುಂಬಾ ಖುಷಿ ಕೊಡುವ ವಿಚಾರ. ಕಲಾತ್ಮಕ ಸಾಧನೆಯ ಮೂಲಕ ಉಡುಪಿ ಕಾಪುವಿನ ಯುವ ಕಲಾವಿದರೊಬ್ಬರು ಕಲಾಕ್ಷೇತ್ರದಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿದ್ದಾರೆ. ಮೊಳೆಗಳನ್ನು ಬಳಸಿ ಆನೆಯ ಕಲಾಕೃತಿಯನ್ನು ರಚಿಸುವ ಮೂಲಕ ಕಾಪುವಿನ ಪ್ರತಿಭಾನ್ವಿತ ಕಲಾವಿದ ಶಶಾಂಕ್ ಎಸ್. ಸಾಲಿಯಾನ್ ಇಂಡಿಯಾ ಬುಕ್ ಆಫ್ ರೆಕಾರ್ಡ್‌ಗೆ ಸೇರ್ಪಡೆಗೊಂಡಿದ್ದಾರೆ.

ಯಾವುದೇ ಬಣ್ಣ ಅಥವಾ ಬ್ರಷ್ ಅನ್ನು ಉಪಯೋಗಿಸದೆ ಬಿಡಿಸಿರುವ ಕಲಾಕೃತಿಯ ಚಿತ್ರೀಕರಣ ದಾಖಲೆಯನ್ನು ಇಂಡಿಯಾ ಬುಕ್ ಆಫ್ ರೆಕಾರ್ಡ್‌ಗೆ ಸಲ್ಲಿಸಲಾಗಿತ್ತು. ಇದೀಗ ಇವರ ಅಪರೂಪದ ಸಾಧನೆ ದೃಢೀಕರಣಗೊಂಡಿದ್ದು ದಾಖಲಾಗಲಿದೆ.

Udupi ಶೈವ ಪಂಥದ ಕಂಚಿನ ಕಂಬದಲ್ಲಿ ಶಾಸನ ಪತ್ತೆ

ಈ ವೇಳೆ ಕಲಾವಿದ ಶಶಾಂಕ್ ಎಸ್. ಸಾಲಿಯಾನ್ ಮಾತನಾಡಿ, ನನ್ನ ಈ ಸಾಧನೆಗೆ ತಂದೆ-ತಾಯಿಯ ಪ್ರೋತ್ಸಾಹವೇ ಮುಖ್ಯ ಕಾರಣವಾಗಿದೆ. ಸ್ನೇಹಿತರಾದ ಧೀರಜ್, ಸೌರಭ್, ಗೌರವ್, ಮನೀಶ್, ಶಶ್ಮಿತಾ ಮತ್ತು ಜೋಸ್ವಿನ್ ಚಿತ್ರ ಬಿಡಿಸಲು ಸಹಕಾರ ನೀಡಿದ್ದು, ಸುಶಾಂತ್ ಶೆಟ್ಟಿ, ಶಶ್ಮಿತಾ ಸಾಲಿಯಾನ್, ಐಶ್ವರ್ಯ ಮತ್ತು ಶ್ರೀಶ ಶೆಟ್ಟಿ ಪ್ರಾಯೋಜಕತ್ವ ವಹಿಸಿದ್ದಾರೆ ಎಂದರು.

ಶಶಾಂಕ್ ಸಾಲಿಯಾನ್ ಅವರು ಕೇವಲ ಮೊಳೆಗಳನ್ನು ಬಳಸಿಕೊಂಡು ಆನೆಯ ಚಿತ್ರ ಬಿಡಿದ್ದು ಇದಕ್ಕಾಗಿ 11940 ಮೊಳೆಗಳನ್ನು ಬಳಸಿದ್ದಾರೆ. ಆಳೆತ್ತರದ ಫೋಮ್ ಶೀಟ್‌ನಲ್ಲಿ ಮೊಳೆಗಳನ್ನು ಬಳಸಿಕೊಂಡು ರಚಿಸಲಾದ ಆನೆಯ ಚಿತ್ರವನ್ನು ಕಂಡು ಎಲ್ಲರೂ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ. ಬಿಡಿಸಿರುವ ಕಲಾಕೃತಿಯ ಚಿತ್ರೀಕರಣದ ದಾಖಲೆಗಳನ್ನು ಆನ್ ಲೈನ್ ಮೂಲಕವಾಗಿ ಕಳುಹಿಸಿದ್ದು, ಅದನ್ನು ಪರೀಕ್ಷಿಸಿದ ಇಂಡಿಯಾ ಬುಕ್ ಆಫ್ ರೆಕಾರ್ಡ್ ಸಂಸ್ಥೆಯು ದಾಖಲೆ ಪ್ರಮಾಣ ಪತ್ರ ರವಾನಿಸಿದೆ.

Udupi; ಈ ಒಂಟಿ ವೃದ್ದೆಯನ್ನು ಮರಳಿ ಗೂಡಿಗೆ ಸೇರಿಸುವವರಾರು?

ಪ್ರಾರಂಭದಲ್ಲಿ 2000 ಮಳೆಗಳನ್ನು ಬಳಸಿ ಸಣ್ಣ ಗಾತ್ರದ ಕಲಾಕೃತಿಯನ್ನು ರಚಿಸುವ ಯೋಚನೆ ಇತ್ತು. ಆದರೆ ಕ್ರಮೇಣ ಈ ಕಲಾಕೃತಿಯ ವಿಸ್ತಾರ ಹೆಚ್ಚಿಸುತ್ತಾ ಹೋಗಿ ದಾಖಲೆ ಪ್ರಮಾಣದ ಆಕೃತಿಯೊಂದಿಗೆ ಈ ಸಾಧನೆ ಬರೆಯಲಾಗಿದೆ. ಅರ್ಧ ಇಂಚಿನ ಮೊಳೆ ಗಳನ್ನು ಬಳಸಿಕೊಂಡು 5*6 ಗಾತ್ರದ ಫೋಮ್ ಶೀಟ್ ನಲ್ಲಿ ಸುಮಾರು ಒಂಬತ್ತು ಗಂಟೆಯ ಅವಧಿಯಲ್ಲಿ 4*3.8 ಗಾತ್ರದ ಆನೆಯ ಕಲಾಕೃತಿಯನ್ನು ರಚಿಸಲಾಗಿದೆ.

ಕಾಪು ತಾಲೂಕಿನ ಉಳಿಯಾರಗೋಳಿ ನಿವಾಸಿ ಶಿಕ್ಷಣ ಸಂಯೋಜಕ ಶಂಕರ್ ಸುವರ್ಣ ಮತ್ತು ಪುಷ್ಪಾ ಸಾಲಿಯಾನ್ ದಂಪತಿಗಳ ಪುತ್ರನಾಗಿರುವ ಶಶಾಂಕ್ ಎಸ್. ಸಾಲಿಯಾನ್ ಅವರು ಬಿಕಾಂ ಪದವೀಧರನಾಗಿದ್ದು ಖಾಸಗಿ ಕಾರ್ಪೋರೆಟ್ ಕಂಪೆನಿಯೊಂದರಲ್ಲಿ ನೌಕರಿಯಲ್ಲಿದ್ದಾರೆ. ಶಾಲಾ ದಿನಗಳಲ್ಲಿಯೇ ಈ ಹವ್ಯಾಸವನ್ನು ಬೆಳೆಸಿಕೊಂಡಿದ್ದರು ಮಣ್ಣಿನ ಕಲಾಕೃತಿ ಪ್ರದರ್ಶನ ಕಲಾ ಪ್ರಕಾರಗಳಲ್ಲಿ ಪರಿಣತಿ ಹೊಂದಿದ್ದಾರೆ.