ಬೆಂಗಳೂರು [ಜೂ.29] :  ಆ್ಯಪ್‌ ಆಧಾರಿತ ಟ್ಯಾಕ್ಸಿ ಸೇವಾ ಕಂಪನಿಗಳಾದ ಓಲಾ ಮತ್ತು ಉಬರ್‌ ರಾಜಧಾನಿಯಲ್ಲಿ ನಿಯಮಬಾಹಿರವಾಗಿ ಮುಂದುವರಿಸಿರುವ ‘ಓಲಾ ಶೇರಿಂಗ್‌’ ಮತ್ತು ‘ಉಬರ್‌ ಪೂಲಿಂಗ್‌’ ಸೇವೆಯನ್ನು ತಕ್ಷಣದಿಂದ ರದ್ದುಗೊಳಿಸುವಂತೆ ಸಾರಿಗೆ ಇಲಾಖೆ ಆಯುಕ್ತ ವಿ.ಪಿ.ಇಕ್ಕೇರಿ ಆದೇಶಿಸಿದ್ದಾರೆ. ಇಲ್ಲವಾದರೆ ಆ್ಯಪ್‌ ಆಧಾರಿತ ಟ್ಯಾಕ್ಸಿ ಸೇವೆಗೆ ಸಾರಿಗೆ ಇಲಾಖೆಯಿಂದ ಪಡೆದಿರುವ ಅಗ್ರಿಗೇಟರ್‌ ಲೈಸೆನ್ಸ್‌ ರದ್ದುಗೊಳಿಸುವುದಾಗಿ ಕಂಪನಿಗಳಿಗೆ ಖಡಕ್‌ ಎಚ್ಚರಿಕೆ ನೀಡಿದ್ದಾರೆ.

ಶುಕ್ರವಾರ ನಗರದ ಶಾಂತಿನಗರ ಸಾರಿಗೆ ಇಲಾಖೆ ಆಯುಕ್ತರ ಕಚೇರಿಯಲ್ಲಿ ನಡೆದ ಓಲಾ, ಉಬರ್‌ ಸೇರಿದಂತೆ ಟ್ಯಾಕ್ಸಿ ಸೇವಾ ಕಂಪನಿಗಳ ಪ್ರತಿನಿಧಿಗಳು ಹಾಗೂ ಚಾಲಕರ ಸಂಘಟನೆಗಳ ಪದಾಧಿಕಾರಿಗಳ ಸಭೆಯಲ್ಲಿ ಸಾರಿಗೆ ಇಲಾಖೆ ಆಯುಕ್ತರು ಈ ಆದೇಶಿಸಿದರು.

ಓಲಾ ಮತ್ತು ಉಬರ್‌ ಕಂಪನಿಗಳ ಅಕ್ರಮ ಶೇರಿಂಗ್‌ ಮತ್ತು ಪೂಲಿಂಗ್‌ ಸೇವೆ ಕುರಿತು ಟ್ಯಾಕ್ಸಿ ಚಾಲಕ ಮತ್ತು ಮಾಲೀಕರ ಸಂಘಟನೆ ಪದಾಧಿಕಾರಿಗಳು ಸಭೆಯ ಗಮನ ಸೆಳೆದರು. ಈ ವೇಳೆ ಈ ಎರಡೂ ಕಂಪನಿಗಳ ಪ್ರತಿನಿಧಿಗಳಿಗೆ ಸಾರಿಗೆ ಆಯುಕ್ತರು ಈ ಹಿಂದೆ ಅಕ್ರಮ ಬೈಕ್‌ ಟ್ಯಾಕ್ಸಿ ಸೇವೆ ವಿರುದ್ಧ ತೆಗೆದುಕೊಂಡಿದ್ದ ಕಠಿಣ ಕ್ರಮ ನೆನಪಿಸಿ, ಅಗ್ರಿಗೇಟರ್‌ ನಿಯಮ ಉಲ್ಲಂಘಿಸುವುದು ಪುನಾರವರ್ತನೆಯಾದರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದರು.

ಶೇರಿಂಗ್‌-ಪೂಲಿಂಗ್‌ಗಿಲ್ಲ ಅವಕಾಶ

ಆ್ಯಪ್‌ ಆಧಾರಿತ ಟ್ಯಾಕ್ಸಿ ಸೇವೆಗೆ ಸಾರಿಗೆ ಇಲಾಖೆ ನೀಡುವ ಅಗ್ರಿಗೇಟರ್‌ ಲೈಸೆನ್ಸ್‌ನಲ್ಲಿ ಶೇರಿಂಗ್‌ ಅಥವಾ ಪೂಲಿಂಗ್‌ಗೆ ಅವಕಾಶವಿಲ್ಲ. ನಿಯಮದ ಪ್ರಕಾರ ಗ್ರಾಹಕರನ್ನು ಒಂದು ಸ್ಥಳದಿಂದ ಹತ್ತಿಸಿಕೊಂಡು ಮತ್ತೊಂದು ಸ್ಥಳದಲ್ಲಿ ಇಳಿಸಬೇಕು. ಸ್ಟೇಜ್‌ ಕ್ಯಾರಿಯೇಜ್‌ ಮಾದರಿ ಸೇವೆ ನೀಡಲು ಅವಕಾಶವಿಲ್ಲ.