ಮಂಗಳೂರು(ಸೆ.08): ಜನಸಾಮಾನ್ಯರಿಗೆ ನೀಡಲಾಗುತ್ತಿದ್ದ ತೊಗರಿ ಬೇಳೆಯನ್ನು ರಾಜ್ಯ ಸರ್ಕಾರ ರದ್ದುಗೊಳಿಸಿದೆ. ಇದರೊಂದಿಗೆ ಬಡವರ ಪರವಾಗಿದ್ದ ಇನ್ನಷ್ಟುಕಾರ್ಯಕ್ರಮಗಳನ್ನು ಕಡಿತಗೊಳಿಸಲು ಮುಂದಾಗಿದೆ. ಇದು ಜನವಿರೋಧಿ, ಕರುಣೆ ಇಲ್ಲದ ಸರ್ಕಾರ ಎಂದು ಮಾಜಿ ಸಚಿವ, ಶಾಸಕ ಯು.ಟಿ. ಖಾದರ್‌ ಟೀಕಿಸಿದ್ದಾರೆ.

ಜನರಿಗೆ ಏನು ಸೌಲಭ್ಯ ನೀಡ್ತೇವೆ ಅನ್ನೋದನ್ನು ಸರ್ಕಾರ ಚಿಂತಿಸ್ತಿಲ್ಲ:

ರಾಜ್ಯ ಸರ್ಕಾರ ಇಂದಿರಾ ಕ್ಯಾಂಟೀನ್‌ ಬಂದ್‌ ಮಾಡ್ತೇವೆ, ಪಡಿತರ ಅಕ್ಕಿ ಕಡಿಮೆ ಮಾಡ್ತೇವೆ, ರೇಶನ್‌ ಕಾರ್ಡ್‌ ದುರ್ಬಳಕೆ ಇತ್ಯಾದಿಗಳ ಕುರಿತೇ ಮಾತನಾಡುತ್ತಿದೆಯೇ ಹೊರತು ಜನರಿಗೆ ಏನು ಹೆಚ್ಚು ಸೌಲಭ್ಯ ನೀಡುತ್ತೇವೆ ಎನ್ನುವ ಆಲೋಚನೆಯನ್ನೇ ಮಾಡುತ್ತಿಲ್ಲ. ಇದು ಜನವಿರೋಧಿ ನೀತಿಗಳಲ್ಲವೇ ಎಂದು ಮಂಗಳೂರಿನಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಅವರು ಪ್ರಶ್ನಿಸಿದರು.

ತೊಗರಿಬೇಳೆಯನ್ನೂ ಕೊಡ್ತಿಲ್ಲ:

ಕಾಂಗ್ರೆಸ್‌ ಸರ್ಕಾರವಿದ್ದಾಗ ಬಡವರ ಕಾರ್ಬೊಹೈಡ್ರೇಟ್ಸ್‌ ಕೊರತೆ ನೀಗಿಸಲು ಅನ್ನಭಾಗ್ಯ ಆರಂಭಿಸಿತ್ತು. ನಂತರ ಸಮತೋಲಿತ ಆಹಾರ ನೀಡಬೇಕು ಎನ್ನುವ ಉದ್ದೇಶದಿಂದ ತೊಗರಿಬೇಳೆ ನೀಡುವ ಕಾರ್ಯಕ್ರಮ ಆರಂಭವಾಗಿತ್ತು. ಈಗಿನ ಬಿಜೆಪಿ ಸರ್ಕಾರ ತೊಗರಿ ಬೇಳೆ ರದ್ದು ಮಾಡಿದ್ದಲ್ಲದೆ, ಪಡಿತರ ಸಕ್ಕರೆಯನ್ನೂ ರದ್ದು ಮಾಡಲು ಹೊರಟಿದೆ. ಕೂಡಲೆ ಈ ನಿರ್ಧಾರವನ್ನು ಹಿಂಪಡೆಯಬೇಕು. ಬಡವರ ಮಕ್ಕಳಿಗೆ ಪ್ರೊಟೀನ್‌ಯುಕ್ತ ಆಹಾರ ಬೇಡವೇ ಎಂದರು.

ಸಸಿಕಾಂತ್‌ ಸೆಂಥಿಲ್‌ಗೆ ಸಿಎಂ ಕಚೇರಿಯಿಂದ ಫೋನ್‌

250 ಕೋಟಿ ರು. ಖರ್ಚು ದೊಡ್ಡದೇ?:

ತೊಗರಿಬೇಳೆ ರದ್ದು ಮಾಡಿದ್ದಕ್ಕೆ ಹಣದ ಕೊರತೆಯ ಕಾರಣವನ್ನು ರಾಜ್ಯ ಸರ್ಕಾರ ನೀಡಿದೆ. ಆದರೆ ಇದಕ್ಕೆ ವಾರ್ಷಿಕವಾಗಿ ಕೇವಲ 200-250 ಕೋಟಿ ರು. ಮಾತ್ರ ಖರ್ಚಾಗುವುದು. ಅದನ್ನೂ ನೀಡಲಾಗದ ಸ್ಥಿತಿಯಲ್ಲಿ ರಾಜ್ಯ ಸರ್ಕಾರ ಇದೆಯೇ? ಜನರಿಗೆ ಊಟ ನೀಡಲು ಸರ್ಕಾರಕ್ಕೆ ಅಷ್ಟೂಕಷ್ಟಆಗಿದೆಯೇ? ಇದನ್ನು ಮರು ಪರಿಶೀಲಿಸಿ ರದ್ದು ವಾಪಸ್‌ ತೆಗೆದುಕೊಳ್ಳದಿದ್ದರೆ ಕಾಂಗ್ರೆಸ್‌ ವತಿಯಿಂದ ರಾಜ್ಯಾದ್ಯಂತ ಹೋರಾಟ ನಡೆಸಲಾಗುವುದು ಎಂದು ಯು.ಟಿ. ಖಾದರ್‌ ಎಚ್ಚರಿಸಿದರು.

ಫಿಫ್ಟೀ ಪರ್ಸೆಂಟ್‌ ಸರ್ಕಾರ:

ರಾಜ್ಯ ಸರ್ಕಾರ ಜನರಿಗಾಗಿ ಕೆಲಸ ಮಾಡಲು ಇನ್ನೂ ಮನಸ್ಸು ಮಾಡಿಲ್ಲ. ಬಹುತೇಕ ಎಲ್ಲ ಮಂತ್ರಿಗಿರಿಗಳನ್ನು ಮುಖ್ಯಮಂತ್ರಿ ಯಡಿಯೂರಪ್ಪ ತನ್ನ ಬಳಿಯೇ ಇರಿಸಿಕೊಂಡಿದ್ದಾರೆ. ಹೀಗಾದರೆ ಕೆಲಸ ಮಾಡೋದು ಯಾರು? ನಮ್ಮ ಜಿಲ್ಲೆಯ ಉಸ್ತುವಾರಿ ಸಚಿವರಾರು ಎಂಬುದನ್ನಾದರೂ ಹೇಳಲಿ. ಇವರ ರಾಜಕೀಯಕ್ಕೆ ಜನರಿಗೆ ಏಕೆ ತೊಂದರೆ ನೀಡಬೇಕು. ಇದು ಕೇವಲ ಫಿಫ್ಟೀ ಪರ್ಸೆಂಟ್‌ ಸರ್ಕಾರ ಎಂದು ಯು.ಟಿ. ಖಾದರ್‌ ಲೇವಡಿ ಮಾಡಿದರು.

ರಾಜಿನಾಮೆ ಹಿಂಪಡೆಯಲಿ:

ಐಎಎಸ್‌ ಸೇವೆಗೆ ರಾಜೀನಾಮೆ ನೀಡಿರುವ ಸಸಿಕಾಂತ್‌ ಸೆಂಥಿಲ್‌ ತಮ್ಮ ನಿರ್ಧಾರವನ್ನು ಬದಲಿಸಿ ರಾಜೀನಾಮೆಯನ್ನು ಹಿಂಪಡೆದುಕೊಳ್ಳಬೇಕು ಎಂದು ಶಾಸಕ ಖಾದರ್‌ ಮನವಿ ಮಾಡಿದ್ದಾರೆ. ಸೆಂಥಿಲ್‌ ಅವರಿಗೆ ಗೊಂದಲ ಇದ್ದರೆ ಒಂದೆರಡು ವರ್ಷ ರಜೆ ತೆಗೆದುಕೊಳ್ಳಲಿ. ನಂತರ ಮನಸ್ಸು ಬದಲಿಸಿ ಸೇವೆಗೆ ಸೇರಲು ಅವಕಾಶವಿದೆ. ಈ ನಿಟ್ಟಿನಲ್ಲಿ ಅವರು ಯೋಚನೆ ಮಾಡಬೇಕು ಎಂದರು.
ಚಾರ್ಮಾಡಿ ತಪ್ಪಲಲ್ಲಿ ನಿರಂತರ ಮಳೆ: ತಪ್ಪಿಲ್ಲ ಪ್ರವಾಹ ಭೀತಿ