ಮಂಗಳೂರು(ಸೆ.07): ಬೆಳ್ತಂಗಡಿ ತಾಲೂಕಿನಾದ್ಯಂತ ಕಳೆದ ಒಂದು ವಾರದಿಂದ ನಿರಂತರವಾಗಿ ಮಳೆ ಸುರಿಯುತ್ತಿದ್ದು, ಪಶ್ವಿಮ ಘಟ್ಟದ ತಪ್ಪಲಿನಲ್ಲಿ ಧಾರಾಕಾರ ವರ್ಷಧಾರೆಯಾಗುತ್ತಿದೆ. ಬೆಳ್ಳಂಬೆಳಗೆಯೇ ಕಪ್ಪು ಮೋಡ ಆವರಿಸಿ, ಮಳೆಯಾಗುತ್ತಿದ್ದರೆ ಜನರಲ್ಲಂತೂ ಪ್ರವಾಹದ ದಿನಗಳ ನೆನಪೇ ಹುಟ್ಟಿಸುವಂತಿದೆ.

ಮಲವಂತಿಗೆ, ಮಿತ್ತಬಾಗಿಲು, ಕಡಿರುದ್ಯಾವರ, ಚಾರ್ಮಾಡಿ, ನೆರಿಯ ಗ್ರಾಮಗಳ ಪ್ರದೇಶದಲ್ಲಿ ಮಳೆಯ ಪ್ರಮಾಣ ಅಧಿಕವಾಗಿದೆ. ನೇತ್ರಾವತಿ ನದಿ, ಅಣಿಯೂರು ಹಳ್ಳ, ಮೃತ್ಯುಂಜಯ ಹೊಳೆಯಲ್ಲಿ ನೀರಿನ ಮಟ್ಟಏರುತ್ತಿದೆ. ಕೆಲವೊಮ್ಮೆ ತಗ್ಗುತ್ತಿದೆ. ಆದರೆ ಯಾವುದೇ ಭೀತಿ ಹುಟ್ಟಿಸುವಂತಹ ರೀತಿಯಲ್ಲಿಇಲ್ಲಎಂದು ಈ ಭಾಗದ ಸ್ಥಳೀಯರು ಹೇಳುತ್ತಾರೆ.

ಭದ್ರಾವತಿ ಹೊಸಸೇತುವೆ ಮುಳುಗಡೆಗೆ ಕೆಲವೇ ಅಡಿ ಬಾಕಿ

ಭೂಕುಸಿತ ಭೀತಿ ತಗ್ಗಿಲ್ಲ:

ಮಿತ್ತಬಾಗಿಲು ಗ್ರಾಮದ ಏಳೂವರೆ ಹಳ್ಳ ಹಾಗೂ ಕೂಡಬೆಟ್ಟು ಹಳ್ಳದಲ್ಲಿ ಆಗಾಗ ನೀರಿನ ಪ್ರಮಾಣ ಏರುತ್ತಿರುತ್ತದೆ. ದುರ್ಗದ ಬೆಟ್ಟದಲ್ಲಿ ಭೂ ಕುಸಿತಗಳು ಉಂಟಾಗಿ ಮಲವಂತಿಗೆ ನಂದಿಕಾಡು, ಪರ್ಲ, ಮಕ್ಕಿ, ಸಿಂಗನಾರು, ದೈಪಿತ್ತಿಲು,ಇಲ್ಯರಕಂಡ,ಮಿತ್ತಬಾಗಿಲಿನ ಕುಕ್ಕಾವು, ಕಕ್ಕೆನಾಜೆ, ಚಾರ್ಮಾಡಿಯ ಹೊಸಮಠ, ಅಂತರ, ಕೊಳಂಬೆ, ಅನಾರು ಕಡೆಗಳಲ್ಲಿ ಪ್ರವಾಹ ಉಂಟಾಗಿತ್ತು. ಬೃಹತ್‌ ಗಾತ್ರದ ಮರಗಳು, ಕಲ್ಲುಗಳು ನೀರಿನೊಂದಿಗೆ ಕೊಚ್ಚಿಕೊಂಡು ಬಂದಿತ್ತು. ಹೊಸ ನೀರಿನ ಹಳ್ಳಗಳು ಸೃಷ್ಟಿಯಾಗಿತ್ತು. ಇದೀಗ ನಿರಂತರ ಮಳೆಯಿಂದ ಭೂಕುಸಿತದ ಭೀತಿ ಇನ್ನು ಜನರಿಂದ ಹೋಗಿಲ್ಲ.

ಸಂಪರ್ಕ ಕಡಿತ:

ಚಾರ್ಮಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಂತರ-ಅರಣೆಪಾದೆ ಪ್ರದೇಶದಲ್ಲಿ ಮೂರನೇ ಬಾರಿ ಸಂಪರ್ಕ ಕಡಿದು ಹೋಗಿದ್ದು ನದಿಯಲ್ಲಿ ಮರಳು, ಮಣ್ಣು ತುಂಬಿ ನೀರು ಉಕ್ಕಿ ಹರಿಯುತ್ತಿದೆ. ಅಂತರಬೈಲು ಸಮೀಪ ಜೆಸಿಬಿ ನಿರಂತರ ಕಾಮಗಾರಿ ನಡೆಸುತ್ತಿದ್ದು, ಮಳೆ ನೀರು ಹೆಚ್ಚಳದಿಂದ ನಿರಂತರ ಸಂಪರ್ಕ ಕಡಿಗೊಳ್ಳುತ್ತಿದೆ.

ಸಸಿಕಾಂತ್‌ ಸೆಂಥಿಲ್‌ಗೆ ಸಿಎಂ ಕಚೇರಿಯಿಂದ ಫೋನ್‌

ಕೊಳಂಬೆ, ಫರ್ಲಾಣಿ ಮತ್ತಿತರ ಪ್ರದೇಶದಲ್ಲಿ ನದಿ ಪದೇ ಪದೇ ಉಕ್ಕಿ ಹರಿಯುತ್ತಿದ್ದು ಮಳೆಗಾಲ ಕಳೆಯುವವರೆಗೆ ಆತಂಕದಲ್ಲಿ ಕಾಲ ಕಳೆಯುವಂತಾಗಿದೆ. ಫರ್ಲಾಣಿ, ಅಂತರಲ್ಲಿ ನೀರು ಹೆಚ್ಚಾಗಿದೆ. ಮಿತ್ತಬಾಗಿಲು ಗ್ರಾಮದ ದೈಪಿತ್ತಿಲ, ಇಲ್ಯರಕಂಡ ಮುಂತಾದ ಪ್ರದೇಶಗಳಲ್ಲಿ ಮಳೆ ಹೆಚ್ಚಾದಂತೆ ಮಣ್ಣು ಮಿಶ್ರಿತ ನೀರು ಬೆಟ್ಟದಿಂದ ಹರಿದು ಬರುತ್ತಿರುವುದಾಗಿ ಸ್ಥಳೀಯರು ತಿಳಿಸಿದ್ದಾರೆ.

ಸೇತುವೆ ಮೇಲೆ ಪ್ರವಾಹ:

ಶುಕ್ರವಾರ ಬೆಳಗ್ಗೆ ಅಂತರಬೈಲು ಅರಣೆಪಾದೆ ಸೇತುವೆ ಮೇಲೆ ನೀರು ಹರಿದಿದೆ. ಈಗಾಗಲೇ ಗದ್ದೆಗಳು ನೀರುತುಂಬಿ ಬತ್ತದ ಬೆಳೆಗಳು ನಾಶವಾಗಿದೆ. ಈಗ ಹೆಚ್ಚುತ್ತಿರುವ ಮಳೆಯಿಂದ ಮತ್ತಷ್ಟುಆತಂಕ ಮನೆಮಾಡಿದೆ. ಅಂತರಬೈಲು, ಕೊಳಂಬೆ ಮುಂತಾದೆಡೆ ನೀರು ತುಂಬಿ ಹರಿದಿದೆ. ಯಾವುದೇ ಹಾನಿ ಸಂಭವಿಸಿಲ್ಲ. ಕುಕ್ಕಾವು ಸೇತುವೆ ಬಳಿ ನದಿಯ ಇಕ್ಕಡೆಗಳಲ್ಲಿ ನೀರಿನ ಪ್ರವಾಹಕ್ಕೆ ಮಣ್ಣು ಬಿರುಕು ಬಿಡುತ್ತಿದೆ.

ಸಂಜೆ 3.30ಕ್ಕೆ ಅರಣೆಪಾದೆಅಂತರಬೈಲು ಪ್ರದೇಶದಲ್ಲಿ ಒಮ್ಮಿಂದೊಮ್ಮೆ ನೀರು ಏರಿದ್ದು ಅರಣಪಾದೆ-ಚೌಟಾಜೆ ಸಂಪರ್ಕ ರಸ್ತೆ ಕಡಿತಗೊಂಡಿದೆ.