ಹುಬ್ಬಳ್ಳಿ(ಮೇ.17): ಅಮ್ಮನ ದಿನಕರ್ಮ ದಿನವೇ ಅಪ್ಪನ ಸಾವು ಘಟಿಸಿದ್ದು, ದಿಕ್ಕುತೋಚದೇ ಪರಿತಪಿಸಿದ ಅವರ ಇಬ್ಬರು ಹೆಣ್ಣು ಮಕ್ಕಳು ಅಕ್ಷರಶಃ ಅನಾಥರಾಗಿದ್ದಾರೆ! ಅವರ ಅಕ್ರಂದನ ಕಲ್ಲು ಕರಗುವಂತಿದೆ. ಕೊರೋನಾ ಅಬ್ಬರದಲ್ಲಿ ಇತರೇ ರೋಗಿಗಳು ಲೆಕ್ಕಕ್ಕಿಲ್ಲದಂತಾಗಿದೆ. ಆಕ್ಸಿಜನ್‌, ವೆಂಟಿಲೇಟರ್‌ ಸಿಗದೇ ಜನಸಾಮಾನ್ಯರು ಸಾಲು ಸಾಲಾಗಿ ಅಸುನೀಗುತ್ತಿದ್ದು, ಈ ಸಾವುಗಳಿಗೂ ಲೆಕ್ಕವಿಲ್ಲದಂತಾಗಿದೆ!

ನಿಮೋನಿಯಾದಿಂದ ಬಳಲುತ್ತಿದ್ದ ಇಲ್ಲಿನ ರೈಲ್ವೆ ಉದ್ಯೋಗಿ, ಧಾರವಾಡ ಕೊಪ್ಪದಕೆರೆ ನಿವಾಸಿ ಫಜುಲ್ಲಾಖಾನ್‌ ಮಸರಗುಪ್ಪಿ (58) ಸರಿಯಾದ ಸಮಯಕ್ಕೆ ಆಕ್ಸಿಜನ್‌, ವೆಂಟಿಲೇಟರ್‌ ಸಿಗದೇ ದಾರುಣವಾಗಿ ಅಸುನೀಗುವ ಮೂಲಕ ಇಂಥದೊಂದು ಪ್ರಶ್ನೆ ಹುಟ್ಟುಹಾಕಿದ್ದಾರೆ.

ಕಳೆದ ವಾರ ಮಸರಗುಪ್ಪಿ ಅವರ ಪತ್ನಿ ಬೀಬಿಜಾನ್‌ (50) ನಿಮೋನಿಯಾ ಸಮಸ್ಯೆಯಿಂದಾಗಿ ಧಾರವಾಡದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ನಾಲ್ಕು ದಿನಗಳ ಕಾಲ ಚಿಕಿತ್ಸೆ ನೀಡಿದ ವೈದ್ಯರು ತಮ್ಮಿಂದ ಹೆಚ್ಚಿನ ಚಿಕಿತ್ಸೆ ಅಸಾಧ್ಯ, ಹುಬ್ಬಳ್ಳಿ ಕಿಮ್ಸ್‌ಗೆ ಒಯ್ಯುವಂತೆ ಸಲಹೆ ನೀಡಿದ್ದರು. ವೈದ್ಯರ ಸಲಹೆಯಂತೆ ಕಿಮ್ಸ್‌ಗೆ ತರುವ ಮಾರ್ಗ ಮಧ್ಯದಲ್ಲೇ ಬೀಬಿಜಾನ್‌ ಕೊನೆಯುಸಿರೆಳೆದರು.

ಕೊರೋನಾ ಕಾಟ: ಎಲ್ಲ ಪ್ರಾಥ​ಮಿಕ ಆರೋಗ್ಯ ಕೇಂದ್ರ​ದಲ್ಲಿ RAT ಟೆಸ್ಟ್‌

ಪತ್ನಿ ನಿರ್ಗಮನದ ದಿನದಿಂದ ಪತಿ ಫೈಜುಲ್ಲಾಖಾಲನ್‌ಗೂ ಕೊರೋನಾ ಇರದಿದ್ದರೂ ನಿಮೋನಿಯಾ ಸಮಸ್ಯೆ. ಧಾರವಾಡ ಖಾಸಗಿ ಆಸ್ಪತ್ತೆಗೆ ದಾಖಲಾಗಿದ್ದ ಅವರು ಉಸಿರಾಟದ ಸಮಸ್ಯೆ ಎದುರಾದಾಗ ಕಿಮ್ಸ್‌ 201 ವಾರ್ಡ್‌ಗೆ ದಾಖಲಾಗಿದ್ದರು. ಎರಡು ದಿನಗಳ ಬಳಿಕ ಆಕ್ಸಿಜನ್‌ ಲೇವಲ್‌ 80ಕ್ಕೆ ಇಳಿದಾಗಲಿಂದಲೂ ವೆಂಟಿಲೇಟರ್‌ಗಾಗಿ ಹೋರಾಟ. ಭಾನುವಾರ ಬೆಳಗ್ಗೆ ಆಕ್ಸಿಜನ್‌ ಲೇವಲ್‌ 35ಕ್ಕೆ ಇಳಿದಾಗ ಸ್ವತಃ ಕಿಮ್ಸ್‌ ನಿರ್ದೇಶಕ ಡಾ. ರಾಮಲಿಂಗಪ್ಪ ಅಂಟರತಾನಿ ಅವರು ಮುತುವರ್ಜಿ ವಹಿಸಿ ಒಂದು ವೆಂಟಿಲೇಟರ್‌ ಬೆಡ್‌ಗೆ ಇವರನ್ನು ಸ್ಥಳಾಂತರಿಸಿದರು.

ಆರಂಭದಿಂದಲೂ ಅಪ್ಪನ ಆರೈಕೆಯಲ್ಲಿದ್ದ ಹಿರಿಯ ಪುತ್ರಿ ಹವಾ ಮಸರಗುಪ್ಪಿ ಇನ್ನೇನು ವೆಂಟಿಲೇಟರ್‌ ಸಿಕ್ಕಿತು ಅಪ್ಪ ಸೇಫ್‌ ಎಂದು ಭಾವಿಸಿ ಮನೆಗೆ ಬಂದು ಅಮ್ಮನ ದಿನಕರ್ಮ ಕಾರ್ಯದಲ್ಲಿ ಮಗ್ನರಾಗಿದ್ದರು. ಇನ್ನೇನು ಪೂಜೆ ನೆರವೇರಿಸಿ ಊಟ ಮಾಡಬೇಕು ಎನ್ನುವ ಹೊತ್ತಿನಲ್ಲಿ ಕಿಮ್ಸ್‌ನಿಂದ ಬಂದ ದೂರವಾಣಿ ಕರೆÜ ‘ಫಜುಲ್ಲಾಖಾನ್‌ ಇನ್ನಿಲ್ಲ’ ಎನ್ನುವ ನಿಧನ ವಾರ್ತೆ ತಿಳಿಸಿತು!

ಅಮ್ಮನ ದಿನಕರ್ಮದ ದಿನವೇ ಅಪ್ಪನ ಅಗಲಿಕೆ! ಮಕ್ಕಳಾದ ಹವಾ, ಮಾಸರಿನ್‌ ಅವರಿಗೆ ಆಕಾಶವೇ ತಲೆಯಮೇಲೆ ಕಳಚಿಬಿದ್ದ ಅನುಭವ. ದಿಕ್ಕುತೋಚದಂತಾಗಿ ಮನುಷ್ಯರಷ್ಟೇ ಅಲ್ಲ ಕಲ್ಲು ಕರಗುವಂತೆ ರೋಧಿಸಿದರು.

ಕೊನೆಗೆ ಧೈರ್ಯ ತಂದುಕೊಂಡು ಚಿಕ್ಕಪ್ಪ ರೋಷನ್‌ ಗುಡದೂರ ಮತ್ತಿತರರೊಂದಿಗೆ ಕಿಮ್ಸಗೆ ಬಂದು ಅಪ್ಪನ ಶವ ಪಡೆದು ಧಾರವಾಡದಲ್ಲಿ ಅಂತ್ಯಕ್ರಿಯೆ ನೆರವೇರಿಸಿದರು. ಅನಾಥರಾಗಿರುವ ಹವಾ ಮತ್ತು ಮಸರಿನ್‌ ಅವರನ್ನು ಸಂತೈಸಲು ಬಂಧು-ಬಾಂಧವರಿಂದ ಸಾಧ್ಯವಾಗುತ್ತಿಲ್ಲ. ಮುಗಿಲು ಮುಟ್ಟಿದೆ ಈ ಸಹೋದರಿಯರ ಆಕ್ರಂದನ. ದೇವರು ನಿಜಕ್ಕೂ ನಿರ್ಧಯಿ!