ಪೊಲೀಸ್‌ ಭದ್ರತೆಯಲ್ಲಿ ಆಪರೇಷನ್‌ ರಾಜಕಾಲುವೆ, ಬೃಹತ್‌ ವಸತಿ ಕಟ್ಟಡಗಳ ತೆರವು, ಮನೆಯವರ ವಿರೋಧ, ಅಧಿಕಾರಿಗಳ ಬಳಿ ಗೋಳಾಟ

ಬೆಂಗಳೂರು(ಸೆ.23): ಮಹದೇವಪುರ ವಲಯದಲ್ಲಿ ರಾಜಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆ ಮುಂದುವರೆದಿದ್ದು, ಗುರುವಾರ ಎರಡು ಬೃಹತ್‌ ವಸತಿ ಕಟ್ಟಡಗಳನ್ನು ತೆರವುಗೊಳಿಸಲಾಗಿದೆ. ಮುನ್ನೇಕೊಳಾಲ ಗ್ರಾಮದ ಶಾಂತಿ ಲೇಔಟ್‌ನಲ್ಲಿ ಒಂದು ಅಂತಸ್ತಿನ ಕಟ್ಟಡ ಹಾಗೂ ಪಾಪಯ್ಯ ರೆಡ್ಡಿ ಬಡಾವಣೆಯಲ್ಲಿ ಮಳೆ ನೀರುಗಾಲುವೆ ಮೇಲೆ 50 ಅಡಿ ವಿಸ್ತೀರ್ಣದಲ್ಲಿ ನಿರ್ಮಿಸಲಾಗಿದ್ದ 4 ಅಂತಸ್ತಿನ ಕಟ್ಟಡ (ಜಿ+4) ಕಟ್ಟವನ್ನು ಬುಲ್ಡೋಜರ್‌ನಿಂದ ಕೆಡವಲಾಗಿದೆ. ಸರ್ಜಾಪುರ ರಸ್ತೆಯ ಗ್ರೀನ್‌ ವುಡ್‌ ರೆಸಿಡೆನ್ಸಿ ಬಳಿ ರಾಜಕಾಲುವೆ ಮೇಲೆ ನಿರ್ಮಿಸಿದ್ದ ಕಾಂಕ್ರಿಟ್‌ ಸ್ಲಾ್ಯಬ್‌ ತೆರವುಗೊಳಿಸಲಾಗಿದೆ.

ಕಟ್ಟಡ ತೆರವಿಗೆ ವಿರೋಧ:

ಪಾಪಯ್ಯ ರೆಡ್ಡಿ ಲೇಔಟ್‌ನಲ್ಲಿ ರಾಜಕಾಲುವೆಯನ್ನು ಒತ್ತುವರಿ ಮಾಡಿಕೊಂಡಿದ್ದ 4 ಅಂತಸ್ತಿನ ಕಟ್ಟಡ ಕಾಂಪೌಂಡ್‌ನ್ನು ಸೆ.13 ರಂದು ತೆರವುಗೊಳಿಸಲಾಗಿತ್ತು. ಈ ವೇಳೆ ಕಂದಾಯ ಇಲಾಖೆ ಅಧಿಕಾರಿಗಳು ಮತ್ತು ಪಾಲಿಕೆ ಸಿಬ್ಬಂದಿ ಮನೆಯಲ್ಲಿರುವ ಎಲ್ಲರೂ ಖಾಲಿ ಮಾಡುವಂತೆ ನೋಟಿಸ್‌ ನೀಡಲಾಗಿತ್ತು. ಆದರೂ ಖಾಲಿ ಮಾಡಿರಲಿಲ್ಲ. ಗುರುವಾರ ತೆರವು ಕಾರ್ಯಕ್ಕೆ ಮುಂದಾದಾಗ ವಿರೋಧ ವ್ಯಕ್ತಪಡಿಸಿದ ಘಟನೆ ನಡೆದಿದೆ.
ಮನೆಯನ್ನು ಕಟ್ಟಿಕೇವಲ 8 ವರ್ಷಗಳಾಗಿದ್ದು ತೆರವು ಮಾಡದಂತೆ ಅಧಿಕಾರಿಗಳ ಬಳಿ ಗೋಳಾಡಿದರು. ಪೊಲೀಸರ ಭದ್ರತೆಯೊಂದಿಗೆ ತೆರವು ಕಾರ್ಯ ನಡೆಸಲಾಯಿತು. ಪಕ್ಕದ ಮನೆಗಳಿಗೆ ಹಾನಿಯಾಗುವ ಸಾಧ್ಯತೆ ಕಂಡು ಬಂದ ಹಿನ್ನೆಲೆಯಲ್ಲಿ ಕಾರ್ಮಿಕರ ನೆರವಿನಿಂದ ತೆರವು ಕಾರ್ಯಾಚರಣೆ ಕೈಗೊಳ್ಳಲಾಗಿದೆ.

ಬೆಂಗ್ಳೂರಲ್ಲಿ ಒತ್ತುವರಿ ತೆರವು ಕಾರ್ಯದಲ್ಲಿ ರಾಜಿ ಇಲ್ಲ: ಸಿಎಂ ಬೊಮ್ಮಾಯಿ

ಮಹದೇವಪುರ ವಲಯ ಆಯುಕ್ತ ಡಾ. ತ್ರಿಲೋಕ್‌ ಚಂದ್ರ, ಜಂಟಿ ಆಯುಕ್ತ ವೆಂಕಟಾಚಲಪತಿ, ಮುಖ್ಯ ಇಂಜನಿಯರ್‌ ಬಸವರಾಜ್‌ ಕಬಾಡೆ ಸ್ಥಳದಲ್ಲಿ ಉಪಸ್ಥಿತರಿದ್ದರು.

ಒತ್ತುವರಿ ತೆರವು ಕಾರ್ಯಾಚರಣೆಗೆ ಅಗತ್ಯವಿರುವ ಎಲ್ಲ ಯಂತ್ರೋಪಕರಣಗಳು ಹಾಗೂ ಸಿಬ್ಬಂದಿ ನಿಯೋಜಿಸಲಾಗಿದೆ. ಒತ್ತುವರಿ ತೆರವುಗೊಳಿಸಿದ ಕಡೆ ಕೂಡಲೇ ಕಾಲುವೆ ನಿರ್ಮಾಣ ಕಾಮಗಾರಿಯನ್ನು ಆರಂಭಿಸಲು ಅಧಿಕಾರಿಗಳಿಗೆ ನಿರ್ದೇಶಿಸಲಾಗಿದೆ ಅಂತ ಮಹದೇವಪುರ ವಲಯ ಆಯುಕ್ತ ಡಾ. ಕೆ.ವಿ. ತ್ರಿಲೋಕ್‌ಚಂದ್ರ ತಿಳಿಸಿದ್ದಾರೆ.