ಕಲಘಟಗಿ(ಡಿ. 02): ತಾಲೂಕಿನ ಗುಡ್ಡದಹುಲಿಕಟ್ಟಿ ಗ್ರಾಮದ ಸಮೀಪ ತಿರುಮಲಕೊಪ್ಪ ಕ್ರಾಸ್‌ ಹತ್ತಿರ ಆಟೋರಿಕ್ಷಾ ಹಾಗೂ ಟ್ರ್ಯಾಕ್ಟರ್‌ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಇಬ್ಬರು ಕಾರ್ಮಿಕರು ಮೃತಪಟ್ಟ ಘಟನೆ ಮಂಗಳವಾರ ನಡೆದಿದೆ.

ಗುಡ್ಡದಹುಲಿಕಟ್ಟಿ ಗ್ರಾಮದ ರವಿ ತಳವಾರ ಟ್ರ್ಯಾಕ್ಟರ್‌ನ್ನು ವೇಗವಾಗಿ ಚಲಾಯಿಸಿದ ಪರಿಣಾಮ ಈ ಅಪಘಾತ ನಡೆದಿದೆ. ತಡಸ ಕಡೆಯಿಂದ ಗುಡ್ಡದಹುಲಿಕಟ್ಟಿ ಕಡೆಗೆ ಬರುತ್ತಿದ್ದ ಆಟೋರಿಕ್ಷಾಗೆ ಈ ಟ್ರ್ಯಾಕ್ಟರ್‌ ಡಿಕ್ಕಿ ಹೊಡೆದ ಪರಿಣಾಮ ಬೆಳಗಲಿ ಗ್ರಾಮದ ಪೀರಸಾಬ್‌ ಹಸನಸಾಬ್‌ ನದಾಫ (18) ಹಾಗೂ ಹಳೆಯ ಹುಬ್ಬಳ್ಳಿ ನಿವಾಸಿ ವಿಠ್ಠಲ ಪೀರಪ್ಪ ಉಪರೆ (67) ಇಬ್ಬರು ಕಾರ್ಮಿಕರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಹುಬ್ಬಳ್ಳಿಯಲ್ಲಿ ಎಲೆಕ್ಟ್ರಾನಿಕ್‌ ಸ್ಟಾರ್ಟ್‌ಅಪ್‌ಗೆ HEX ಬಲ

ಹುಬ್ಬಳ್ಳಿಯ ಸಾದಿಕ್‌ ಅತ್ತಿವಾಲೆ, ಜಮೀರ್‌ ಅಣ್ಣಿಗೇರಿ ಹಾಗೂ ಬೆಳಗಲಿ ಗ್ರಾಮದ ಶೇಕಪ್ಪ ಶೇಖಯ್ಯ ಮೂವರ ಸ್ಥಿತಿ ಗಂಭೀರವಾಗಿದ್ದು, ಅವರನ್ನು ಕೂಡಲೇ ಚಿಕಿತ್ಸೆಗೆ ಹುಬ್ಬಳ್ಳಿ ಕಿಮ್ಸ್‌ಗೆ ದಾಖಲಿಸಲಾಗಿದೆ. ಟ್ರ್ಯಾಕ್ಟರ್‌ ಚಾಲಕ ಪರಾರಿಯಾಗಿದ್ದು, ಈ ಕುರಿತು ಕಲಘಟಗಿ ಪೊಲೀಸ್‌ ಠಾಣೆಯ ಸಿಪಿಐ ವಿಜಯ ಬಿರಾದಾರ ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.