ಮಯೂರ ಹೆಗಡೆ

ಹುಬ್ಬಳ್ಳಿ(ಡಿ. 02): ವಾಣಿಜ್ಯ ನಗರಿಯಲ್ಲಿ ಸ್ಟಾರ್ಟ್‌ಅಪ್‌ಗಳಿಗೆ ಮತ್ತಷ್ಟು ಬಲ ಬಂದಿದೆ. ಕೆಎಲ್‌ಇ ತಾಂತ್ರಿಕ ವಿಶ್ವ ವಿದ್ಯಾಲಯದಿಂದ ಎಚ್‌ಇಎಕ್ಸ್‌ (ಹುಬ್ಬಳ್ಳಿ ಎಲೆಕ್ಟ್ರಾನಿಕ್‌ ಸಿಸ್ಟಮ್‌ ಡಿಸೈನ್‌ ಮ್ಯಾನುಫ್ಯಾಕ್ಚರಿಂಗ್‌ ಎಕ್ಸಚೇಂಜ್‌) ಕೇಂದ್ರ ಸ್ಥಾಪನೆಯಾಗಿದ್ದು, ಇದರಿಂದ ವಿಶೇಷವಾಗಿ ಉಕ ಭಾಗದಲ್ಲಿ ಎಲೆಕ್ಟ್ರಾನಿಕ್‌ ಸ್ಟಾರ್ಟ್‌ಅಪ್‌ಗಳು ಎದುರಿಸುತ್ತಿದ್ದ ತೊಂದರೆಗಳಿಗೆ ಪೂರ್ಣವಿರಾಮ ಬಿದ್ದಂತಾಗಿದೆ.

ಈಗಾಗಲೆ ನಗರದಲ್ಲಿ ಕೆಎಲ್‌ಇ ಟೆಕ್‌ ಸೇರಿದಂತೆ ಸ್ಯಾಂಡ್‌ಬಾಕ್ಸ್‌, ದೇಶಪಾಂಡೆ ಫೌಂಡೇಶನ್‌, ಟೈ ಹುಬ್ಬಳ್ಳಿ ಸ್ಟಾರ್ಟ್‌ಅಪ್‌ಗೆ ಸಾಕಷ್ಟು ಪ್ರೋತ್ಸಾಹ ನೀಡುತ್ತಿವೆ. ಕೆಎಲ್‌ಇ ಎಲೆಕ್ಟ್ರಾನಿಕ್‌ ಸೇರಿದಂತೆ ಇತರ ವಿಭಾಗದ ನವೋದ್ಯಮಕ್ಕೂ ಬೆನ್ನೆಲುಬಾಗಿ ನಿಂತಿದೆ. ಆದರೆ, ಎಲೆಕ್ಟ್ರಾನಿಕ್‌ ಸ್ಟಾರ್ಟ್‌ಅಪ್‌ ಎದುರಿಸುತ್ತಿದ್ದ ಸವಾಲು, ಸಮಸ್ಯೆಗಳಿಗೆ ಇದೀಗ ಉತ್ತರ ದೊರಕಿದೆ.

ರಾಜ್ಯ ಸರ್ಕಾರದ ಕರ್ನಾಟಕ ಇನೋವೇಶನ್‌ ಮತ್ತು ಟೆಕ್ನಾಲಜಿ ಸವೀರ್‍ಸಸ್‌ (ಕೆಐಟಿಎಸ್‌), ಇಂಡಿಯಾ ಎಲೆಕ್ಟ್ರಾನಿಕ್ಸ್‌ ಮತ್ತು ಸೆಮಿಕಂಡಕ್ಟರ್ಸ್‌ (ಐಇಎಸ್‌ಎ) ಮತ್ತು ಕೆಎಲ್‌ಇ ತಾಂತ್ರಿಕ ವಿಶ್ವವಿದ್ಯಾಲಯ ಜಂಟಿಯಾಗಿ ಬಿವಿಬಿ ಕಾಲೇಜಿನ ಆವರಣದಲ್ಲಿ ಎಚ್‌ಇಎಕ್ಸ್‌ ಕೇಂದ್ರವನ್ನು ಸ್ಥಾಪಿಸಿದೆ. ಇದು ಎಲೆಕ್ಟ್ರಾನಿಕ್ಸ್‌ ಸ್ಮಾರ್ಟ್‌ಅಪ್‌ಗಳಿಗೆ ಸಂಪೂರ್ಣ ಮಾರ್ಗದರ್ಶಿಯಾಗಿ ಕಾರ್ಯ ನಿರ್ವಹಿಸಲಿದೆ. ಜತೆಗೆ ಜಾಗತಿಕ ಮಟ್ಟದ ಉತ್ಪನ್ನಗಳ ಉತ್ಪಾದನೆ ಮಾಡಲು ವೇದಿಕೆ ಕಲ್ಪಿಸಿದೆ.

ಪ್ರವಾಹ ಸಂತ್ರಸ್ತರ ಮನೆ ಹಂಚಿಕೆಯಲ್ಲಿ ಭಾರೀ ಅವ್ಯವಹಾರ; ಜನಪ್ರತಿನಿಧಿಗಳಿಂದಲೇ ಗೋಲ್‌ಮಾಲ್?

ಏನೇನಿದೆ?:

ಕೆಎಲ್‌ಇ ಯೂನಿವರ್ಸಿಟಿ ಬಿವಿಬಿ ಕ್ಯಾಂಪಸ್‌ ಟೆಕ್‌ ಪಾರ್ಕ್‌ನಲ್ಲಿ 5 ಸಾವಿರ ಚ.ಅಡಿ. ಕಚೇರಿ ಸ್ಥಳವನ್ನು ಸ್ಥಾಪಿಸಲಾಗಿದೆ. ವಿಶ್ವ ದರ್ಜೆಯ ಎಎಸ್‌ಡಿಎಂ ಲ್ಯಾಬ್‌, ಎಲೆಕ್ಟ್ರಾನಿಕ್ಸ್‌ ಎಬಲಿಂಗ್‌ ಲ್ಯಾಬ್‌, (ಇಇಎಲ್‌), ಮೇಕರ್‌ ಸ್ಪೇಸ್‌ ಮತ್ತು ಟಿಂಕರಿಂಗ್‌ ಲ್ಯಾಬ್‌ ಇದೆ. ಇವುಗಳ ಸಹಾಯದಿಂದ ಹೊಸ ಉತ್ಪನ್ನಗಳ ಶೋಧನೆ, ಅಭಿವೃದ್ಧಿ ಪಡಿಸುವಿಕೆ, ಪ್ರಾಯೋಗಿಕ ಪರೀಕ್ಷೆಗಳನ್ನು ನಡೆಸಲು ಅನುಕೂಲವಾಗಲಿದೆ. ಎಲೆಕ್ಟ್ರಾನಿಕ್‌ಗೆ ಸಂಬಂಧಿಸಿ ಈಗಾಗಲೆ ನಾಲ್ಕೈದು ಸ್ಟಾರ್ಟ್‌ಅಪ್‌ಗಳು ಕೆಎಲ್‌ಇ ಟೆಕ್‌ನಲ್ಲಿವೆ. ಪ್ರಾಯೋಗಿಕ, ಅಭಿವೃದ್ಧಿ ಪಡಿಸುವಿಕೆಗೆ ಬೆಂಗಳೂರು, ಪುಣೆ ಸೇರಿ ಇತರೆಡೆ ತೆರಳಬೇಕಾದ ಅನಿವಾರ್ಯತೆ ಇನ್ನು ತಪ್ಪಲಿದೆ.

ಔದ್ಯಮಿಕ ವಾತಾವರಣ:

ಎಚ್‌ಇಎಕ್ಸ್‌ ನಿರ್ದೇಶಕ ಡಾ. ನಿತಿನ್‌ ಕುಲಕರ್ಣಿ ಮಾತನಾಡಿ, ಎಚ್‌ಇಎಕ್ಸ್‌ ಸ್ಥಾಪನೆಯಿಂದ ಮುಖ್ಯವಾಗಿ ಹುಬ್ಬಳ್ಳಿಯಲ್ಲಿ ಎಲೆಕ್ಟ್ರಾನಿಕ್‌ ಉತ್ಪನ್ನಗಳ ಉತ್ಪಾದನೆ, ಉದ್ಯಮ ಸ್ಥಾಪನೆ, ಮಾರುಕಟ್ಟೆ ವ್ಯವಸ್ಥೆ ಸಂಪರ್ಕ ನಿರ್ಮಾಣವಾಗಲಿದೆ. ನವೋದ್ಯಮಕ್ಕೆ ಪ್ರತಿ ಹಂತದಲ್ಲೂ ಸೂಕ್ತ ಮಾರ್ಗದರ್ಶನ ದೊರೆಯಲಿದೆ. ಪರಿಪೂರ್ಣ ಔದ್ಯಮಿಕ ವಾತಾವರಣದಿಂದ ಸ್ಟಾರ್ಟ್‌ ಅಪ್‌ಗೆ ಪ್ರೋತ್ಸಾಹ ದೊರೆಯಲಿದೆ. ಈ ವಿಭಾಗದ ಹೆಚ್ಚಿನವರು ನವೋದ್ಯಮಕ್ಕೆ ಮುಂದಾಗುವಂತೆ ಪ್ರೇರೇಪಿಸುತ್ತದೆ ಎಂದು ವಿವರಿಸಿದರು.

ಕೆಎಲ್‌ಇ ತಾಂತ್ರಿಕ ವಿಶ್ವವಿದ್ಯಾಲಯ ಕುಲಪತಿ ಡಾ. ಅಶೋಕ ಶೆಟ್ಟರ್‌ ಮಾತನಾಡಿ, ಕಳೆದ 10-15 ವರ್ಷದಿಂದ ನವೋದ್ಯಮಿಗಳಿಗೆ ಕೆಎಲ್‌ಇ ಟೆಕ್‌ ಪ್ರೋತ್ಸಾಹ ನೀಡುತ್ತಿದೆ. ಅದರ ಭಾಗವಾಗಿ ಹುಬ್ಬಳ್ಳಿ ಎಲೆಕ್ಟ್ರಾನಿಕ ಸಿಸ್ಟಮ್‌ ಡಿಸೈನ್‌ ಮ್ಯಾನುಫ್ಯಾಕ್ಚರಿಂಗ್‌ ಎಕ್ಸಚೇಂಜ್‌ ಕಾರ್ಯ ನಿರ್ವಹಿಸಲಿದೆ. ವಿದ್ಯಾರ್ಥಿಗಳು ಪ್ರತಿಷ್ಠಿತ ಕಂಪನಿಗಳಲ್ಲಿ ಪ್ರಶಿಕ್ಷಣಾರ್ಥಿಗಳಾಗಲೂ ಅವಕಾಶ ಸಿಗಲಿದೆ. ವೇಗವಾಗಿ ಬೆಳೆಯುತ್ತಿರುವ ಎಲೆಕ್ಟ್ರಾನಿಕ್‌ ಕ್ಷೇತ್ರದ ಜತೆಗೆ ನಮ್ಮ ವಿದ್ಯಾರ್ಥಿಗಳು ಕೂಡ ಹೆಜ್ಜೆ ಹಾಕಲು ಇದರಿಂದ ಅನುಕೂಲವಾಗಲಿದೆ. ಕೇವಲ ನಮ್ಮ ಕಾಲೇಜಿನ ವಿದ್ಯಾರ್ಥಿಗಳಿಗೆ ಮಾತ್ರವಲ್ಲ, ಉಳಿದ ವಿದ್ಯಾರ್ಥಿಗಳಿಗೂ ಇದರ ಪ್ರಯೋಜನರ ಸಿಗಲಿದೆ ಎಂದರು.

ಇಂದು ಉದ್ಘಾಟನೆ:

ಬುಧವಾರ ಹುಬ್ಬಳ್ಳಿ ಎಲೆಕ್ಟ್ರಾನಿಕ ಸಿಸ್ಟಮ್‌ ಡಿಸೈನ್‌ ಮ್ಯಾನುಫ್ಯಾಕ್ಚರಿಂಗ್‌ ಎಕ್ಸಚೇಂಜ್‌ ಕೇಂದ್ರವು ವರ್ಚುವಲ್‌ ಮೂಲಕ ಉದ್ಘಾಟನೆಯಾಗಲಿದೆ. ಮಧ್ಯಾಹ್ನ 2 ಗಂಟೆಗೆ ಕಾರ್ಯಕ್ರಮ ನಡೆಯಲಿದ್ದು, ಎಲೆಕ್ಟ್ರಾನಿಕ್‌, ಐಟಿ, ಬಿಟಿ, ಕೆಐಟಿಎಸ್‌ ಇಲಾಖೆ ನಿರ್ದೇಶಕಿ ಮೀನಾ ನಾಗರಾಜ, ಐಇಎಸ್‌ಎ ಅಧ್ಯಕ್ಷರಾದ ಡಾ. ಸತ್ಯಗುಪ್ತ, ಕೆಎಲ್‌ಇ ಉಪಕುಲಪತಿ ಡಾ. ಅಶೋಕ ಶೆಟ್ಟರ್‌, ಎಚ್‌ಇಎಕ್ಸ್‌ ನಿರ್ದೇಶಕ ಡಾ. ನಿತಿನ್‌ ಕುಲಕರ್ಣಿ ಸೇರಿ ಹಲವು ಗಣ್ಯರು ಪಾಲ್ಗೊಳ್ಳಲಿದ್ದಾರೆ.

ಇಲ್ಲಿವರೆಗೆ ಬೆಂಗಳೂರು ಭಾಗದಲ್ಲಿ ಮಾತ್ರ ಇಎಸ್‌ಡಿಎಂ ಕ್ಷೇತ್ರದಲ್ಲಿ ಸ್ಟಾರ್ಟ್‌ಅಪ್‌ ಪ್ರೇರಕವಾಗುವ ವಾತಾವರಣ ಇತ್ತು. ಎಚ್‌ಇಎಕ್ಸ್‌ ಆರಂಭದಿಂದ ಉಕ ಭಾಗದ ವಿದ್ಯಾರ್ಥಿಗಳಿಗೂ ಹೆಚ್ಚಿನ ಅನುಕೂಲವಾಗಲಿದೆ ಎಂದು ಕೆಎಲ್‌ಇ ತಾಂತ್ರಿಕ ವಿಶ್ವವಿದ್ಯಾಲಯದ ಕುಲಪತಿ ಡಾ. ಅಶೋಕ ಶೆಟ್ಟರ್‌ ತಿಳಿಸಿದ್ದಾರೆ. 

20 ತಿಂಗಳಲ್ಲಿ ಕನಿಷ್ಠ 12 ಎಲೆಕ್ಟ್ರಾನಿಕ್‌ ಸಿಸ್ಟಮ್‌ ಡಿಸೈನ್‌ ಮ್ಯಾನುಫ್ಯಾಕ್ಚರಿಂಗ್‌ ಸ್ಮಾರ್ಟ್‌ಅಪ್‌ ಸಂಸ್ಥೆಗಳನ್ನು ರೂಪಿಸುವ ಗುರಿ ಇದೆ. ಅದಕ್ಕೆ ತಕ್ಕುದಾದ ಎಲ್ಲ ಸೌಲಭ್ಯಗಳು, ಮಾರ್ಗದರ್ಶಕರು ನಮ್ಮಲ್ಲಿದ್ದಾರೆ ಎಂದು ಎಚ್‌ಇಎಕ್ಸ್‌ ನಿರ್ದೇಶಕ ಡಾ. ನಿತೀನ್‌ ಕುಲಕರ್ಣಿ ತಿಳಿಸಿದ್ದಾರೆ.