ಬೆಂಗಳೂರು [ಮಾ.14]: ಮಹಿಳಾ ಪಿ.ಜಿಯಲ್ಲಿನ (ಪೇಯಿಂಗ್‌ ಗೆಸ್ಟ್‌) ಹೌಸ್‌ಕೀಪಿಂಗ್‌ಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಆರೋಪಿ ಸೇರಿ ಇಬ್ಬರನ್ನು ಸುಬ್ರಹ್ಮಣ್ಯನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಪ್ರಭು ಹಾಗೂ ಈತನ ಸ್ನೇಹಿತನ ರೌಡಿ ಶಿವು ಬಂಧಿತರು. 32 ವರ್ಷದ ಮಹಿಳೆ ಕೊಟ್ಟದೂರಿನ ಮೇರೆಗೆ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಮಹಿಳೆಯು ರಾಜಾಜಿನಗರದ ಲಕ್ಷ್ಮೀ ಮಹಿಳಾ ಪಿ.ಜಿಯಲ್ಲಿ ಹೌಸ್‌ಕೀಪಿಂಗ್‌ ಕೆಲಸ ಮಾಡುತ್ತಿದ್ದರು. ಇದೇ ಪಿ.ಜಿ.ಮಾಲಿಕರಿಗೆ ಸೇರಿದ್ದ ಮತ್ತೊಂದು ಬಾಯ್ಸ್ ಪಿ.ಜಿ.ರಾಜಾಜಿನಗರದ 1ನೇ ಬ್ಲಾಕ್‌ನಲ್ಲಿದ್ದು, ಮಹಿಳೆ ಅಲ್ಲಿಗೆ ಶುಚಿತ್ವ ಕೆಲಸಕ್ಕೆ ತೆರಳಿದ್ದರು. ಈ ವೇಳೆ ಪಿ.ಜಿ.ಯಲ್ಲಿದ್ದ ಮೇಲ್ವಿಚಾರಕ ಪ್ರಭು ಮಹಿಳೆಯನ್ನು ತಬ್ಬಿ ಲೈಂಗಿಕ ಕ್ರಿಯೆಗೆ ಒತ್ತಾಯಿಸಿದ್ದ. 

ತವರಿಗೆ ಬಂದವಳನ್ನು ಸ್ನಾನದ ಮನೆಯಲ್ಲಿ ಪ್ರಾಣವನ್ನೇ ತೆಗೆದ ಗೀಸರ್‌...

ಮಹಿಳೆ ಆತನಿಂದ ತಪ್ಪಿಸಿಕೊಂಡು ಬಂದು ಪತಿಗೆ ವಿಷಯ ಮುಟ್ಟಿಸಿದ್ದರು. ಬಳಿಕ ಮಹಿಳೆ ಪತಿ ಆರೋಪಿಗೆ ಎಚ್ಚರಿಕೆ ನೀಡಿ ಸುಮ್ಮನಾಗಿದ್ದರು. ಘಟನೆ ಬಳಿಕ ಪಿ.ಜಿ.ಮಾಲಿಕರು ಆರೋಪಿಯನ್ನು ಕೆಲಸದಿಂದ ತೆಗೆದು ಹಾಕಿದ್ದರು. ಇದಾದ ನಂತರ ಕೂಡ ಆರೋಪಿ ಮಹಿಳೆಯನ್ನು ಹಿಂಬಾಲಿಸುತ್ತಿದ್ದ. ಅಲ್ಲದೆ, ರೌಡಿ ಶಿವು ಎಂಬಾತನ ಕೈನಲ್ಲಿ ಕರೆ ಮಾಡಿಸಿ ಪೊಲೀಸರಿಗೆ ದೂರು ನೀಡದಂತೆ ಬೆದರಿಕೆ ಹಾಕಿಸಿದ್ದ.

ಕೆಲ ದಿನಗಳ ಬಳಿಕ ಮಹಿಳೆ ಕೆಲಸ ಮಾಡುತ್ತಿದ್ದ ಪಿ.ಜಿ. ಸಮೀಪವೇ ಇದ್ದ ಮತ್ತೊಂದು ಪಿ.ಜಿ.ಯಲ್ಲಿ ಆರೋಪಿ ಕೆಲಸಕ್ಕೆ ಸೇರಿದ್ದ. ಮಾ.10ರಂದು ಮಹಿಳೆ ರಸ್ತೆಯಲ್ಲಿ ಹೋಗುತ್ತಿದ್ದ ವೇಳೆ ಆಕೆಯನ್ನು ಹಿಡಿದು ಅಸಭ್ಯವಾಗಿ ವರ್ತಿಸಿದ್ದ. ಈ ಸಂಬಂಧ ಮಹಿಳೆ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.