ಬೆಂಗಳೂರು(ಮಾ.04): ದೇಶಾದ್ಯಂತ ಕೊರೋನಾ ವೈರಸ್‌ ಹರಡುವ ಆತಂಕವಿರುವ ಹಿನ್ನೆಲೆಯಲ್ಲಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆ ಹಾಗೂ ಜಯನಗರದಲ್ಲಿರುವ ನ್ಯಾಷನಲ್‌ ಇನ್‌ಸ್ಟಿಟ್ಯೂಟ್‌ ಆಫ್‌ ವೈರಾಲಜಿ ಕೇಂದ್ರದಲ್ಲಿ ಕೊರೋನಾ ಮಾದರಿ ರಕ್ತ ಪರೀಕ್ಷಾ ಕೇಂದ್ರ ತೆರೆಯಲಾಗಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆಸುಧಾಕರ್‌ ತಿಳಿಸಿದ್ದಾರೆ.

ಮಂಗಳವಾರ ವಿಕ್ಟೋರಿಯಾ ಆಸ್ಪತ್ರೆಯಲ್ಲಿರುವ ಕೊರೋನಾ ವೈರಸ್‌ ರಕ್ತದ ಮಾದರಿ ಪರೀಕ್ಷಾ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಅವರು, ಬೆಂಗಳೂರಿನಲ್ಲಿ ಮೊದಲ ಬಾರಿಗೆ ಎರಡು ಕಡೆಗಳಲ್ಲಿ ಕೊರೋನಾ ವೈರಸ್‌ ರಕ್ತದ ಮಾದರಿ ಪರೀಕ್ಷಾ ಕೇಂದ್ರ ತೆರೆಯಲಾಗಿದೆ. ಈವರೆಗೆ ರಕ್ತದ ಮಾದರಿಯನ್ನು ಪರೀಕ್ಷೆಗಾಗಿ ಪುಣೆಗೆ ಕಳುಹಿಸಲಾಗುತ್ತಿತ್ತು. ಪ್ರತಿ ದಿನ ಹೆಚ್ಚಿನ ಸಂಖ್ಯೆಯಲ್ಲಿ ಜನರು ರಕ್ತದ ಪರೀಕ್ಷೆಗೆ ಮುಂದಾಗುತ್ತಿರುವ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿಯೇ ರಕ್ತದ ಮಾದರಿ ಪರೀಕ್ಷಾ ಕೇಂದ್ರ ತೆರೆಯಲಾಗಿದೆ ಎಂದು ಹೇಳಿದ್ದಾರೆ.

ಕೊರೋನಾ ವೈರಸ್‌ ಭೀತಿ: ಬಳ್ಳಾರಿಯ ವಿಮ್ಸ್‌ನಲ್ಲಿ ಪ್ರತ್ಯೇಕ ವಾರ್ಡ್‌

ಪ್ರತಿದಿನ ವಿಕ್ಟೋರಿಯಾದಲ್ಲಿ 88 ಹಾಗೂ ಜಯನಗರ ಕೇಂದ್ರದಲ್ಲಿ 60 ಜನರ ರಕ್ತ ಮಾದರಿ ಪರೀಕ್ಷೆ ನಡೆಸಲು ಸಾಧ್ಯವಿದೆ. ಸೋಂಕಿನ ಲಕ್ಷಣ ಅಥವಾ ಅನುಮಾನವಿದ್ದಲ್ಲಿ ರಕ್ತದ ಮಾದರಿ ಪರೀಕ್ಷೆ ಮಾಡಿಸಿಕೊಳ್ಳಬಹುದು. ಇದುವರೆಗೆ 35 ಜನರ ರಕ್ತದ ಮಾದರಿ ಪರೀಕ್ಷೆ ನಡೆಸಲಾಗಿದ್ದು, ಎಲ್ಲವೂ ನೆಗೆಟಿವ್‌ ಬಂದಿದೆ. ಆದ್ದರಿಂದ ಸಾರ್ವಜನಿಕರು ಆತಂಕಪಡುವ ಅಗತ್ಯವಿಲ್ಲ. ಆದರೂ ಎಚ್ಚರಿಕೆಯಿಂದ ಇರಬೇಕು ಎಂದು ಸಲಹೆ ನೀಡಿದರು.