ಬಳ್ಳಾರಿ(ಮಾ.04): ರಾಜ್ಯದಲ್ಲಿ ಕೊರೋನಾ ವೈರಸ್‌ ಹರಡುವ ಭೀತಿ ಹಿನ್ನಲೆಯಲ್ಲಿ ಮುಂಜಾಗ್ರತಾ ಕ್ರಮದ ಹೆಜ್ಜೆ ಇಟ್ಟಿರುವ ಜಿಲ್ಲೆಯ ವೈದ್ಯಕೀಯ ಇಲಾಖೆ ಇಲ್ಲಿನ ವಿಜಯನಗರ ವೈದ್ಯಕೀಯ ಶಿಕ್ಷಣ ಸಂಸ್ಥೆಯ ಆಸ್ಪತ್ರೆ (ವಿಮ್ಸ್‌) ಹಾಗೂ ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರತ್ಯೇಕ ವಾರ್ಡ್‌ ತೆರೆಯಲಾಗಿದೆ.

"

ಇನ್ನು ಜಿಲ್ಲೆಯ ವಿವಿಧ ತಾಲೂಕು ಕೇಂದ್ರಗಳಲ್ಲೂ ಸಹ ಕಟ್ಟೆಚ್ಚರ ವಹಿಸುವಂತೆ ವೈದ್ಯಕೀಯ ತಂಡಕ್ಕೆ ಸೂಚನೆ ನೀಡಲಾಗಿದ್ದು, ವೈರಸ್‌ ಕಂಡು ಬಂದಲ್ಲಿ ಮುಂಜಾಗ್ರತೆ ಕ್ರಮವಾಗಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಈಗಾಗಲೇ ತರಬೇತಿ ನೀಡಲಾಗಿದ್ದು ಅಗತ್ಯ ಔಷಧಿ ಮತ್ತಿತರ ಸಲಕರಣೆಗಳನ್ನು ಕಾಯ್ದಿಟ್ಟುಕೊಳ್ಳಲಾಗಿದೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ವಿಮ್ಸ್‌ ಆಸ್ಪತ್ರೆಯಲ್ಲಿ 8 ಬೆಡ್‌ಗಳಿರುವ ವಾರ್ಡ್‌ ತೆರೆಯಲಾಗಿದ್ದು, ದೀರ್ಘಕಾಲದ ಕೆಮ್ಮು, ಶೀತ ಇತರೆ ಕಾಯಿಲೆಯಿಂದ ಬಳಲುತ್ತಿರವವರನ್ನು ಕೂಡಲೇ ಪರೀಕ್ಷಿಸಲಾಗುತ್ತಿದೆ. ಆಂಧ್ರಪ್ರದೇಶದ ಗಡಿ ತಾಲೂಕುಗಳು ಸೇರಿದಂತೆ ಪಕ್ಕದೆ ರಾಯಚೂರು, ಕೊಪ್ಪಳ ಜಿಲ್ಲೆಗಳಿಂದ ರೋಗಿಗಳು ಬಳ್ಳಾರಿ ವಿಮ್ಸ್‌ಗೆ ಬರುವುದರಿಂದ ವೈರಸ್‌ನ ಲಕ್ಷಣ ಕಂಡು ಬಂದರೆ ಕೂಡಲೇ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ ಎಂದು ವಿಮ್ಸ್‌ ನಿರ್ದೇಶಕ ಡಾ. ದೇವಾನಂದ್‌ ತಿಳಿಸಿದ್ದಾರೆ.

ಕೊರೋನಾ ವೈರಸ್‌ಗೆ ಭಯಪಡಬೇಕಾಗಿಲ್ಲ. ಒಂದು ವೇಳೆ ಅಂತಹ ಲಕ್ಷಣ ಕಂಡು ಬಂದರೆ ಕೂಡಲೇ ವಿಮ್ಸ್‌ಗೆ ಬಂದರೆ ಸೂಕ್ತ ಚಿಕಿತ್ಸೆ ನೀಡಲು ನುರಿತ ವೈದ್ಯಕೀಯ ತಂಡ ಸಜ್ಜಾಗಿದೆ ಎಂದು ಡಾ. ದೇವಾನಂದ್‌ ತಿಳಿಸಿದರು.

ಇನ್ನು ಜಿಲ್ಲಾಸ್ಪತ್ರೆ ಸೇರಿದಂತೆ ತಾಲೂಕಿನ ವಿವಿಧ ತಾಲೂಕು ಕೇಂದ್ರಗಳ ಆಸ್ಪತ್ರೆಯಲ್ಲಿ ಕರೋನಾ ವೈರಸ್‌ ಸಂಬಂಧಿಸಿದಂತೆ ಚಿಕಿತ್ಸೆ ನೀಡಲು ವೈದ್ಯ ಸಿಬ್ಬಂದಿಯನ್ನು ಸಜ್ಜುಗೊಳಿಸಲಾಗಿದೆ. ಕರೋನಾ ವೈರಸ್‌ ಕಂಡು ಬಂದರೆ ಎದುರಿಸುವುದು ಹೇಗೆ ? ಹೇಗೆ ರೋಗಿಗಳನ್ನು ರಕ್ಷಣೆ ಮಾಡಿಕೊಳ್ಳಬೇಕು. ಬೇರೆ ಕಡೆ ಹರಡದಂತೆ ಯಾವ ಕ್ರಮ ವಹಿಸಬೇಕು ಎಂಬುದರ ಕುರಿತು ಈಗಾಗಲೇ ವೈದ್ಯರಿಗೆ ಕಾರ್ಯಾಗಾರ ನಡೆಸಲಾಗಿದೆ. ಸಾರ್ವಜನಿಕರಲ್ಲಿ ಅರಿವು ಮೂಡಿಸಲು ವಾಹನದಲ್ಲಿ ಬೃಹತ್‌ ಪರದೆಯಲ್ಲಿ ಡಿಸ್‌ಪ್ಲೇ ಮಾಡಲಾಗಿದೆ. ಮುಂಜಾಗ್ರತೆ ವಹಿಸುವುದರ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಗುತ್ತಿದ್ದು, ಈ ಸಂಬಂಧ ಎಲ್ಲ ನಗರ ಹಾಗೂ ಗ್ರಾಮೀಣ ಭಾಗದಲ್ಲಿ ಕರಪತ್ರಗಳನ್ನು ಹಂಚಲಾಗುತ್ತಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ಎಚ್‌.ಎಲ್‌. ಜನಾರ್ದನ ಕನ್ನಡಪ್ರಭಕ್ಕೆ ತಿಳಿಸಿದ್ದಾರೆ.

ಕೊರೋನಾ ವೈರಸ್‌ ಹರಡದಂತೆ ಮುಂಜಾಗ್ರತೆ ವಹಿಸುವ ಹಿನ್ನಲೆಯಲ್ಲಿ ಜಿಲ್ಲೆಯಲ್ಲಿ 4 ವಿಶೇಷ ತಂಡಗಳನ್ನು ಮಾಡಲಾಗಿದೆ. ಒಂದು ತಂಡ ಜಿಂದಾಲ್‌ ವಿಮಾನ ನಿಲ್ದಾಣದಲ್ಲಿರಲಿದೆ. ಮತ್ತೊಂದು ತಂಡ ರೈಲ್ವೆ ನಿಲ್ದಾಣ ಹಾಗೂ ಎರಡು ತಂಡಗಳು ಹಂಪಿಯಲ್ಲಿ ಕಾರ್ಯನಿರ್ವಹಿಸುತ್ತಿವೆ.

ವಿಮಾನ ನಿಲ್ದಾಣ ಹಾಗೂ ಹಂಪಿಗೆ ಬರುವ ವಿದೇಶಿಯರ ಮೇಲೆ ನಿಗಾ ವಹಿಸುತ್ತದೆ. ಅವರ ಮಾಹಿತಿಯನ್ನು ಪಡೆದು ಅವರನ್ನು ಪರೀಕ್ಷೆಗೆ ಒಳಪಡಿಸುತ್ತದೆ. ಈಗಾಗಲೇ ನಾಲ್ಕು ತಂಡಗಳು ಸಕ್ರೀಯವಾಗಿದ್ದು, ಈವರೆಗೆ ಯಾವುದೇ ರೀತಿಯ ವೈರಸ್‌ ಪತ್ತೆಯಾಗಿಲ್ಲ. ಔಷಧಿ, ಮಾಸ್ಕ್‌ ಸೇರಿದಂತೆ ಯಾವುದೇ ಕೊರತೆಯಿಲ್ಲ. ಮುಂಜಾಗ್ರತೆಯಾಗಿಯೇ ಸರ್ಕಾರ ಪೂರೈಕೆ ಮಾಡಿದ್ದು, ಸಾರ್ವಜನಿಕರು ಯಾವುದೇ ರೀತಿಯ ಆತಂಕ ಪಡಬೇಕಾಗಿಲ್ಲ ಎಂದು ಡಿಎಚ್‌ಒ ಡಾ. ಜನಾರ್ದನ್‌ ತಿಳಿಸಿದರು.