ಬೆಳಗಾವಿ ತಾಲೂಕಿನ ಕಾಕತಿ ಗ್ರಾಮದ ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಮೇಲೆ‌ ನಡೆದ ಘಟನೆ. ಬೆಳಗಾವಿ ತಾಲೂಕಿನ ಶಿವಾಪುರ ಗ್ರಾಮದ ಮುಪ್ಪಿನ ಕಾಡಸಿದ್ದೇಶ್ವರ ಮಠದ ಕಾಡಸಿದ್ದೇಶ್ವರ ಸ್ವಾಮೀಜಿ ಅವರಿಗೆ ಗಂಭೀರವಾದ ಗಾಯ. 

ಬೆಳಗಾವಿ(ಜೂ.17): ಕಾರು, ಕಂಟೇನರ್‌ಗಳ ಮಧ್ಯೆ ಭೀಕರ ಸರಣಿ ಅಪಘಾತ ಸಂಭವಿಸಿದ ಪರಿಣಾಮ ಇಬ್ಬರು ಸಾವನ್ನಪ್ಪಿ, ಸ್ವಾಮೀಜಿಯೊಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ಬೆಳಗಾವಿ ತಾಲೂಕಿನ ಕಾಕತಿ ಗ್ರಾಮದ ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಮೇಲೆ‌ ಇಂದು(ಶನಿವಾರ) ನಡೆದಿದೆ. ಬೆಳಗಾವಿ ತಾಲೂಕಿನ ಶಿವಾಪುರ ಗ್ರಾಮದ ಮುಪ್ಪಿನ ಕಾಡಸಿದ್ದೇಶ್ವರ ಮಠದ ಕಾಡಸಿದ್ದೇಶ್ವರ ಸ್ವಾಮೀಜಿ ಅವರಿಗೆ ಗಂಭೀರವಾದ ಗಾಯಗಳಾಗಿವೆ ಅಂತ ತಿಳಿದು ಬಂದಿದೆ. 

ಮತಾಂತರ ನಿಷೇಧ ಕಾಯ್ದೆ ರದ್ದು ವಿರೋಧಿಸಿ ಇಂದು ಬೆಳಗಾವಿಯಲ್ಲಿ ನಡೆಯುತ್ತಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಲು ಕಾಡಸಿದ್ದೇಶ್ವರ ಸ್ವಾಮೀಜಿ ಅವರು ಬೆಳಗಾವಿಗೆ ಬರುತ್ತಿದ್ದರು. ವಿಶ್ವ ಹಿಂದೂ ಪರಿಷತ್- ಭಜರಂಗದಳ ಆಶ್ರಯದಲ್ಲಿ ಪ್ರತಿಭಟನೆ ಆಯೋಜನೆಗೊಂಡಿದೆ. ಬೆಳಗಾವಿ ತಾಲೂಕಿನ ಶಿವಾಪುರ ಗ್ರಾಮದಲ್ಲಿ ಮುಪ್ಪಿನ ಕಾಡಸಿದ್ದೇಶ್ವರ ಮಠ ಇದೆ. 

ಧಾರವಾಡ ಬೈಪಾಸ್‌ನಲ್ಲಿ ಭೀಕರ ಅಪಘಾತ, ಬಿಂದುಗೌಡ ಸೇರಿ ಮೂವರ ಸಾವು

ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ಬೆಳಗಾವಿಗೆ ಬರುತ್ತಿದ್ದ ಸ್ವಾಮೀಜಿ ಕಾರು ಮಾರ್ಗ ಮಧ್ಯೆ ಅಪಘಾತಕ್ಕಿಡಾಗಿದೆ. ವಾಹನದಲ್ಲಿದ್ದ ಸ್ವಾಮೀಜಿಯ ಇಬ್ಬರು ಸೇವಕರು ದುರ್ಘಟನೆಯಲ್ಲಿ ಮೃತಪಟ್ಟಿದ್ದಾರೆ. 

ಕಂಟೇನರ್ ಚಾಲಕ ದಿಢೀರ್ ಬ್ರೇಕ್ ಹಚ್ಚಿದಕ್ಕೆ ಸ್ವಾಮೀಜಿ ಅವರ ಕಾರು ಕಂಟೇನರ್‌ಗೆ ಕಾರು ಗುದ್ದಿದೆ, ಸ್ವಾಮೀಜಿ ಕಾರಿಗೆ ಹಿಂಬದಿಯಲ್ಲಿ ಬರುತ್ತಿದ್ದ ಮತ್ತೊಂದು ಕಂಟೇನರ್ ಡಿಕ್ಕಿ ಹೊಡೆದ ಪರಿಣಾಮ ಈ ದರ್ಘಟನೆ ಸಂಭವಿಸಿದೆ. 
ಘಟನಾ ಸ್ಥಳಕ್ಕೆ ಕಾಕತಿ ಠಾಣೆ ಪೊಲೀಸರ ಭೇಟಿ ನೀಡಿ ಕಾಡಸಿದ್ಧೇಶ್ವರ ಸ್ವಾಮೀಜಿ ಅವರನ್ನ ಬೆಳಗಾವಿಯ ಜಿಲ್ಲಾಸ್ಪತ್ರೆಗೆ ರವಾನೆ ಮಾಡಲಾಗಿದೆ. 

ಸದ್ಯ ಬೆಳಗಾವಿಯ ಜಿಲ್ಲಾಸ್ಪತ್ರೆಯ ಐಸಿಯುದಲ್ಲಿ ಕಾಡಸಿದ್ಧೇಶ್ವರ ಸ್ವಾಮೀಜಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಸ್ವಾಮೀಜಿ ಸೇವಕರಿಬ್ಬರ ಮೃತದೇಹಗಳನ್ನು ಬೀಮ್ಸ್‌ನ ಶವಾಗಾರಕ್ಕೆ ರವಾನೆ ಮಾಡಲಾಗಿದೆ. ಮೃತ ಸೇವಕರ ಹೆಸರು ಇನ್ನೂ ತಿಳಿದುಬಂದಿಲ್ಲ. ಈ ಕುರಿತು ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.