ಮಂಗಳೂರು(ಮೇ 19): ಲಾಕ್‌ಡೌನ್‌ ಸಡಿಲಗೊಂಡರೂ ನಿಗದಿತ ಮುಹೂರ್ತಕ್ಕೆ ಎರಡು ರಾಜ್ಯಗಳ ವಧೂವರರು ದಿಬ್ಬಣ ಸಮೇತ ಗಡಿ ಭಾಗಕ್ಕೆ ಆಗಮಿಸಿ ಅಲ್ಲಿಯೇ ತಾಳಿ ಕಟ್ಟಲು ಮುಂದಾದ ವಿದ್ಯಮಾನ ಸೋಮವಾರ ಕೇರಳದ ಗಡಿ ತಲಪಾಡಿಯಲ್ಲಿ ನಡೆದಿದೆ.

ಮಂಗಳೂರಿನ ವಿಮಲಾ ಎಂಬವರ ಜೊತೆ ಕಾಸರಗೋಡು ಮುಳ್ಳೇರಿಯಾ ನಿವಾಸಿ ಪುಷ್ಪರಾಜ್‌ ಅವರ ವಿವಾಹ ಸೋಮವಾರ ಮಂಗಳೂರಿನಲ್ಲಿ ನಿಶ್ಚಯವಾಗಿತ್ತು. ಕೊರೋನಾ ಹಿನ್ನೆಲೆಯಲ್ಲಿ ಕರ್ನಾಟಕ-ಕೇರಳ ಪ್ರಯಾಣಕ್ಕೆ ನಿರ್ಬಂಧ ವಿಧಿಸಿದ್ದರಿಂದ ಪಾಸ್‌ಗಾಗಿ ಪುಷ್ಪರಾಜ್‌ ಹಲವು ಬಾರಿ ಜಿಲ್ಲಾಡಳಿತಕ್ಕೆ ಅರ್ಜಿ ಸಲ್ಲಿಸಿದ್ದರು. ಆದರೆ ಕಾಸರಗೋಡು ಜಿಲ್ಲಾಡಳಿತ ಅನುಮತಿ ನೀಡಿರಲಿಲ್ಲ. ನಿಗದಿಪಡಿಸಿದ ಮುಹೂರ್ತ ಬದಲಾಯಿಸಲು ಮನಸ್ಸು ಮಾಡದ ಎರಡೂ ಕಡೆಯ ಕುಟುಂಬಸ್ಥರು ಸೋಮವಾರ ದಿಬ್ಬಣ ಸಮೇತ ತಲಪಾಡಿ ಗಡಿಗೆ ಬಂದೇಬಿಟ್ಟರು.

ಮಂಗಳೂರಿಗೆ 3 ನೇ ವಿಮಾನ: 20ರಂದು ಮಸ್ಕತ್‌ನಿಂದ ಕನ್ನಡಿಗರು ತವರಿಗೆ

ಬೆಳಗ್ಗೆ 11 ಗಂಟೆಗೆ ವಿವಾಹ ಮುಹೂರ್ತ ನಿಗದಿಯಾಗಿತ್ತು. ಆದರೆ ಎರಡು ಕಡೆಯ ಅಧಿಕಾರಿಗಳು ಪರಸ್ಪರ ಒಪ್ಪಿಗೆ ನೀಡಲಿಲ್ಲ. ಜಿಲ್ಲಾಡಳಿತ ಮಣಿಯದ ಹಿನ್ನೆಲೆಯಲ್ಲಿ ವಧೂವರರು ಗಡಿಯಲ್ಲೇ ತಾಳಿ ಕಟ್ಟಲು ತೀರ್ಮಾನಿಸಿದರು. ಕೊನೆಗೂ ಇದು ಸಾಧ್ಯವಾಗದಿದ್ದಾಗ ಜಿಲ್ಲಾಡಳಿತ ಮಧ್ಯಾಹ್ನ ಬಳಿಕ ಪಾಸ್‌ ನೀಡಿತು. ಸಂಜೆ ವಧುವನ್ನು ಮುಳ್ಳೇರಿಯಾದ ವರನ ಮನೆಗೆ ಕರೆದುಕೊಂಡು ರಾತ್ರಿ ವಿವಾಹ ನೆರವೇರಿಸಲಾಯಿತು. ನಂತರ ವಧೂವರರಿಬ್ಬರಿಗೂ ಹೋಂ ಕ್ವಾರಂಟೈನ್‌ ವಿಧಿಸಲಾಗಿದೆ.