ಶಿವಕುಮಾರ ಕುಷ್ಟಗಿ

ಗದಗ(ಜೂ.13): ಕಳೆದ ಸಾಲಿನಲ್ಲಿ ಉಂಟಾದ ಭಾರಿ ಪ್ರವಾಹದಿಂದ ಜಿಲ್ಲೆಯ ನದಿ ತೀರದ ಗ್ರಾಮಗಳುt ತತ್ತರಿಸಿ ಹೋಗಿವೆ. ತೊಂದರೆಗೆ ಒಳಗಾದವರ ಮನೆ ನಿರ್ಮಾಣಕ್ಕೆ ಸರ್ಕಾರ ಪರಿಹಾರ ನೀಡಿ 10 ತಿಂಗಳಾಗಿದ್ದರೂ ಅಧಿಕಾರಿಗಳು ಮಾಡಿದ ಎಡವಟ್ಟಿನಿಂದಾಗಿ ಸಂತ್ರಸ್ತರು ಇನ್ನೂ ಬೀದಿಯಲ್ಲಿ ನಿಲ್ಲುವಂತಾಗಿದೆ.

ರೋಣ ತಾಲೂಕಿನ ಹೊಳೆಆಲೂರ ಗ್ರಾಮದ 2 ಕುಟುಂಬಗಳ ಕರುಣಾಜನಕ ಕತೆ ಇದು. ಹೊಳೆಆಲೂರು ಗ್ರಾಮದ ಫಲಾನುಭವಿಗಳಾದ ಶಂಕ್ರಪ್ಪ ಹುಚ್ಚಪ್ಪ ಗಂಗೂರ ಹಾಗೂ ಶಂಕ್ರಪ್ಪ ಕಲ್ಲಪ್ಪ ಗಂಗೂರ ಎನ್ನುವವರು ಸಮಸ್ಯೆ ಎದುರಿಸುತ್ತಿದ್ದಾರೆ. ಇಬ್ಬರ ಹೆಸರು ಒಂದೇ, ಅಡ್ಡಹೆಸರುಗಳು ಒಂದೇ ಇದ್ದು ತಂದೆಯ ಹೆಸರು ಮಾತ್ರ ಬೇರೆ ಇದೆ. ಇದು ಸಮಸ್ಯೆಗೆ ಕಾರಣವಾಗಿದ್ದು, ಇದುವರಿಗೂ ಅವರಿಗೆ ಪರಿಹಾರ ದೊರೆತಿಲ್ಲ.

ಹಿನ್ನೆಲೆ:

10 ತಿಂಗಳ ಹಿಂದೆ ಮಲಪ್ರಭಾ ನದಿ ಹಾಗೂ ಬೆಣ್ಣೆಹಳ್ಳದ ಪ್ರವಾಹಕ್ಕೆ ರೋಣ ತಾಲೂಕಿನ ಹೊಳೆಆಲೂರು ಗ್ರಾಮ ತತ್ತರಿಸಿ ಹೋಗಿ, ನಿರಾಶ್ರಿತರ ಬದುಕು ಮಾತ್ರ ಅತಂತ್ರವಾಗಿದೆ. ಸ್ವತಃ ಮನೆ ನಿರ್ಮಾಣ ಮಾಡಿಕೊಳ್ಳಲು ಈ ಕುಟುಂಬಕ್ಕೆ ಸಾಧ್ಯವಾಗುತ್ತಿಲ್ಲ. ಫಲಾನುಭವಿ ಶಂಕ್ರಪ್ಪ ಹುಚ್ಚಪ್ಪ ಗಂಗೂರ, ಫಲಾನುಭವಿ ಸಂಖ್ಯೆ- 441450, ಅಕೌಂಟ್‌ ನಂಬರ್‌- 64154236626, ಈ ಅಕೌಂಟ್‌ ನಂಬರ್‌ ಇನ್ನೋರ್ವ ಫಲಾನುಭವಿ ಶಂಕ್ರಪ್ಪ ಕಲ್ಲಪ್ಪ ಗಂಗೂರ, ಅವರ ಫಲಾನುಭವಿ ಸಂಖ್ಯೆ-440941 ನಮೂದು ಮಾಡಿದ್ದಾರೆ. ಇವರ ಅಕೌಂಟ್‌ ನಂಬರ್‌ 1719477056. ಆದರೆ ಶಂಕ್ರಪ್ಪ ಕಲ್ಲಪ್ಪ ಗಂಗೂರ ಅವರ ಹೆಸರಿಗೆ ಶಂಕ್ರಪ್ಪ ಹುಚ್ಚಪ್ಪ ಗಂಗೂರು ಅಕೌಂಟ್‌ ನಂಬರ್‌ ನಮೂದು ಮಾಡಿದ್ದಾರೆ. ಇದರಿಂದಾಗಿ ಮನೆ ನಿರ್ಮಾಣಕ್ಕೆ ಸರ್ಕಾರದಿಂದ ಮಂಜೂರಾತಿ ದೊರೆತಿದ್ದರೂ ಖಾತೆಗಳಲ್ಲಿ ಹೆಸರು ಮತ್ತು ದಾಖಲಾತಿಗಳು ಹೊಂದಾಣಿಯಾಗದೇ ಇರುವ ಹಿನ್ನೆಲೆಯಲ್ಲಿ ಇಬ್ಬರಿಗೂ ಸರ್ಕಾರದ ಹಣ ಜಮೆ ಆಗುತ್ತಿಲ್ಲ.

'ಯಡಿಯೂರಪ್ಪ ಸರ್ಕಾರ ಹಣವಂತರಿಗೆ ಮಣೆ ಹಾಕುವ ಕೆಲಸ ಮಾಡುತ್ತಿದೆ'

ಬಾಡಿಗೆ ಮನೆಯಲ್ಲಿ ವಾಸ:

ಈ ಸಮಸ್ಯೆ ಮೂಲವನ್ನು ಪತ್ತೆ ಮಾಡುವಲ್ಲಿ ಹೊಳೆಆಲೂರ ಹೋಬಳಿ ಅಧಿಕಾರಿಗಳಾಗಲಿ, ರೋಣ ತಹಸೀಲ್ದಾರರಾಗಲಿ ಗಮನ ನೀಡದೇ ನಿಮ್ಮ ಹಣ ಸದ್ಯದಲ್ಲಿಯೇ ಬಿಡುಗಡೆಯಾಗುತ್ತದೆ ಎನ್ನುತ್ತಲೇ ಕಾಲಹರಣ ಮಾಡಿದ್ದಾರೆ. ಇಂದಲ್ಲ ನಾಳೆ ನಮ್ಮ ಹಣ ಬರುತ್ತದೆ ಎನ್ನುವ ವಿಶ್ವಾಸದಲ್ಲಿಯೇ ಎರಡೂ ಕುಟುಂಬಗಳು ತಹಸೀಲ್ದಾರ್‌ ಕಚೇರಿಗೆ ಅಲೆದು ಸುಸ್ತಾಗಿವೆ. ಇದೇ ವೇಳೆಗೆ ಲಾಕ್‌ಡೌನ್‌ ಆಗಿ ಎಲ್ಲವೂ ಸ್ಥಗಿತವಾಯಿತು. ಈಗ ಮತ್ತೆ ಎಲ್ಲ ಕಚೇರಿ ಕೆಲಸಗಳು ಆರಂಭವಾಗಿದ್ದು, ಈ ಕುಟುಂಬಗಳ ನೆರವಿಗೆ ತಾಲೂಕು ಆಡಳಿತ ಈಗಲಾದರೂ ಧಾವಿಸಬೇಕಿದೆ.

ಬೆಣ್ಣೆಹಳ್ಳ ಪ್ರವಾಹಕ್ಕೆ ಸಿಲುಕಿ ಮನೆಗಳನ್ನು ಕಳೆದುಕೊಂಡವರು ಆದಷ್ಟುಬೇಗ ನಿರ್ಮಾಣ ಮಾಡಿಕೊಳ್ಳುವಂತೆ ಸರ್ಕಾರದಿಂದ ನೋಟಿಸ್‌ ಸಹ ನೀಡಿದ್ದಾರೆ. ರೋಣ ತಹಸೀಲ್ದಾರ್‌ 1 ಲಕ್ಷ ಹಣ ಮಂಜೂರು ಮಾಡಲಾಗಿದ್ದು, ಮನೆ ಕಟ್ಟಲು ಆರಂಭ ಮಾಡಿದ ಮೇಲೆ ಹಂತ ಹಂತವಾಗಿ 5 ಲಕ್ಷ ಹಣ ಬರುತ್ತದೆ, ಕೂಡಲೇ ಕಾಮಗಾರಿ ಆರಂಭ ಮಾಡುವಂತೆ ನೋಟಿಸ್‌ ನೀಡಿದ್ದಾರೆ. ಆದರೆ ಹಣ ಜಮೆ ಆಗುತ್ತಿಲ್ಲ ಎಂದು ಫಲಾನುಭವಿ ಶಂಕ್ರಪ್ಪ ಹುಚ್ಚಪ್ಪ ಗಂಗೂರ ಅವರು ಹೇಳಿದ್ದಾರೆ. 

ಡಾಟಾ ಎಂಟ್ರಿ ಆಪರೇಟರ್‌ಗಳು ತಾಂತ್ರಿಕ ಸಮಸ್ಯೆಯಿಂದಾಗಿ ಇಬ್ಬರು ಫಲಾನುಭವಿಗಳಿಗೆ ಒಂದೇ ಅಕೌಂಟ್‌ ಎಂಟ್ರಿ ಆಗಿರುವ ಹಿನ್ನೆಲೆಯಲ್ಲಿ ಸಮಸ್ಯೆಯಾಗಿದೆ. ಇನ್ನೆರಡು ದಿನಗಳಲ್ಲಿ ಸರಿ ಮಾಡಲಾಗುವುದು ಎಂದು ರೋಣ ತಹಸೀಲ್ದಾರ್‌ ಜೆ.ಬಿ. ಜಕ್ಕನಗೌಡ್ರ ಅವರು ತಿಳಿಸಿದ್ದಾರೆ.