ಉಳುವವನ ಊರುಗೋಲು ಕಿತ್ತು ಉಳ್ಳವರಿಗೆ ನೀಡುವ ಹುನ್ನಾರ| ರಾಜ್ಯ ಸರ್ಕಾರದ ನೀತಿ ವಿರುದ್ಧ ಎಚ್‌.ಕೆ. ಪಾಟೀಲ್‌ ಆಕ್ರೋಶ| ಪಕ್ಷದ ವೇದಿಕೆಯಲ್ಲಿ ಚರ್ಚಿಸಿ ಮುಂದಿನ ಹೋರಾಟಕ್ಕೆ ತೀರ್ಮಾನ| ಗ್ರಾಪಂ ಚುನಾವಣೆ ನಡೆಸಲು ಯಾಕೆ ಹಿಂದೇಟು?| 

ಗದಗ(ಜೂ.13): ರಾಜ್ಯ ಸರ್ಕಾರ ಕೃಷಿ ಭೂಮಿ ಖರೀದಿಗೆ ಎಲ್ಲರಿಗೂ ಅವಕಾಶ ಕಲ್ಪಿಸಿ ಆದೇಶ ಹೊರಡಿಸಿದ್ದನ್ನು ನೋಡಿದಲ್ಲಿ ಇದು ಉಳುವವನ ಊರುಗೋಲನ್ನು ಕಿತ್ತುಕೊಂಡು ಉಳ್ಳವರಿಗೆ ನೀಡುವ ಹುನ್ನಾರ ನಡೆಸಿದಂತೆ ಕಾಣುತ್ತದೆ ಎಂದು ಶಾಸಕ ಎಚ್‌.ಕೆ. ಪಾಟೀಲ ಹೇಳಿದ್ದಾರೆ. 

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉಳುವವನೇ ಭೂಮಿಯ ಒಡೆಯ ಎನ್ನುವ ಕಾನೂನನ್ನು ತಂದು, ಬಡವರಿಗೆ ಕೃಷಿ ಜಮೀನು ದೊರಕಿಸಿಕೊಟ್ಟಿದ್ದಲ್ಲದೇ, ಕೃಷಿಕರ ಜಮೀನುಗಳು, ಕೃಷಿಕರ ಬಳಿಯೇ ಇರಬೇಕು, ಅದು ಉಳ್ಳವರ ಪಾಲಾದರೆ ದುಡಿವ ವರ್ಗದ ಗತಿ ಏನು? ಸರ್ಕಾರದ ಈ ನೂತನ ನಿಯಮದಿಂದ ಕಪ್ಪು ಹಣ ಇರುವವರು, ಅನ್ಯ ಮಾರ್ಗಗಳಲ್ಲಿ ಅಕ್ರಮ ಹಣ ಸಂಪಾದನೆ ಮಾಡಿದವರು ಕೃಷಿಕರ ಭೂಮಿಯನ್ನು ಖರೀದಿಸಲು ಅವಕಾಶ ಕಲ್ಪಿಸುವ ಮೂಲಕ ಸಮಾಜದಲ್ಲಿ ಅಸಮತೋಲನತೆ ಉಂಟಾಗುತ್ತದೆ ಎಂದು ಕಳವಳ ವ್ಯಕ್ತಪಡಿಸಿದರು.

'ತೋ​ರ್ಪ​ಡಿಕೆಗಾಗಿ ಮಾತ್ರ ಕೆಲ ರಾಜ​ಕಾ​ರ​ಣಿ​ಗ​ಳಿಂದ ಬಡ​ವ​ರಿಗೆ ಸಹಾ​ಯ'

ಸರ್ಕಾರದ ಈ ನಿರ್ಧಾರವನ್ನು ನೋಡಿದಲ್ಲಿ ಮುಂಬರುವ ದಿನಗಳಲ್ಲಿ ರಾಜ್ಯದಲ್ಲಿ ಕುರುಡು ಕಾಂಚಾಣ ಇನ್ನಷ್ಟು ಕುಣಿಯಲು ಪ್ರಾರಂಭಿಸುತ್ತದೆ ಎನ್ನುವುದು ಸ್ಪಷ್ಟವಾಗುತ್ತದೆ. ರಾಜ್ಯ ಸರ್ಕಾರ ಹಣವಂತರಿಗೆ ಮಣೆ ಹಾಕುವ ಕೆಲಸ ಮಾಡುತ್ತಿದೆ ಎನ್ನುವುದು ಗೋಚರವಾಗುತ್ತಿದ್ದು, ಬಡ ರೈತಪರವಾದ ನಮ್ಮ ಪಕ್ಷ ಇದನ್ನು ಉಗ್ರವಾಗಿ ಖಂಡಿಸುತ್ತದೆ. ಈ ಕುರಿತು ಪಕ್ಷದ ವೇದಿಕೆಯಲ್ಲಿ ಚರ್ಚಿಸಿ ಮುಂದೆ ಕಾನೂನಿನ ವಿರುದ್ಧ ಹೋರಾಟ ಮಾಡಲು ತೀರ್ಮಾನಿಸಲಾಗಿದೆ ಎಂದು ಹೇಳಿದರು.

ಗ್ರಾಪಂ ಚುನಾವಣೆಗಳ ಕುರಿತು ಮಾತನಾಡಿದ ಪಾಟೀಲ್‌, ಜೂ. 24ಕ್ಕೆ ರಾಜ್ಯದ 2400 ಗ್ರಾಪಂಗಳ ಅವಧಿ ಪೂರ್ಣಗೊಳ್ಳಲಿದೆ. ಜು. 3ನೇ ವಾರದಲ್ಲಿ 3,500 ಗ್ರಾಪಂಗಳ ಅವಧಿ ಪೂರ್ಣಗೊಳ್ಳಲಿದೆ. ಯಾವುದೇ ಕಾರಣಕ್ಕೂ ಚುನಾವಣೆ ಮುಂದೂಡದೇ ನಿಗದಿತ ಸಮಯದಲ್ಲಿಯೇ ಚುನಾವಣೆ ನಡೆಸಬೇಕು. ನೀವು ಬೇರೆ ಬೇರೆ ಎಲ್ಲ ಚುನಾವಣೆಗಳನ್ನು ನಡೆಸಲು ಅವಕಾಶ ಕಲ್ಪಿಸುತ್ತೀರಿ, ಆದರೆ ಗ್ರಾಪಂ ಚುನಾವಣೆ ನಡೆಸಲು ಯಾಕೆ ಹಿಂದೇಟು? ಲಾಕ್‌ಡೌನ್‌ ಪೂರ್ಣಗೊಂಡಿದೆ, ಎಲ್ಲದಕ್ಕೂ ಅವಕಾಶ ಕಲ್ಪಿಸಿ ಕೇವಲ ಚುನಾವಣೆಗೆ ಮಾತ್ರ ಯಾವ ಕಾರಣದ ಮೇಲೆ ಮುಂದೂಡುತ್ತೀರಿ ಎಂದು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.

ಪಿಪಿಇ ಕಿಟ್‌ಗಳ ಖರೀದಿಯಲ್ಲಿ ಆಗಿರುವ ಅಕ್ರಮದ ಬಗ್ಗೆ ಮಾತನಾಡಿದ ಎಚ್ಕೆ, ಈ ಕುರಿತು ದೂರುಗಳು ಲಿಖಿತವಾಗಿ ಬಂದಿವೆ. ಇಲ್ಲಿ ಭಾರೀ ಪ್ರಮಾಣದ ಲೋಪಗಳು ಕಂಡು ಬಂದಿವೆ. ಬ್ಲಾಕ್‌ಲಿಸ್ಟ್‌ನಲ್ಲಿರುವ ಕಂಪನಿಗಳಿಂದ ಹೆಚ್ಚಿನ ದರ ನೀಡಿ ಸ್ಯಾನಿಟೈಸರ್‌ ಖರೀದಿಸಿದ್ದಾರೆ. ಈ ಬಗ್ಗೆಯೂ ಸಮಗ್ರ ತನಿಖೆಯಾಗಬೇಕಿದೆ. ಆದರೆ, ಸರ್ಕಾರ ಅದಕ್ಕೆ ಅವಕಾಶ ನೀಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಗದಗ ಜಿಲ್ಲೆಯಲ್ಲಿ ಜಿಂಕೆ ಹಾವಳಿ ಹೆಚ್ಚಾಗುತ್ತಿರುವ ಕುರಿತು ರೈತರಿಂದ ದೂರುಗಳು ಕೇಳಿ ಬಂದಿದ್ದು, ಈ ಕುರಿತು ಅರಣ್ಯ ಸಚಿವರಿಗೆ ಪತ್ರ ಬರೆದು ಕ್ರಮಕ್ಕೆ ಆಗ್ರಹಿಸುತ್ತೇನೆ ಎಂದರು. ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಜಿ.ಎಸ್‌. ಪಾಟೀಲ, ವಿಧಾನ ಪರಿಷತ್‌ ಸದಸ್ಯ ಶ್ರೀನಿವಾಸ ಮಾನೆ, ಗುರಣ್ಣ ಬಳಗಾನೂರ, ಅಶೋಕ ಮಂದಾಲಿ, ಸಿದ್ದು ಪಾಟೀಲ ಮುಂತಾದವರು ಹಾಜರಿದ್ದರು.

ಎಸ್‌ಎಸ್‌ಎಲ್‌ಸಿ ಪರೀಕ್ಷೆ ವಿಷಯವಾಗಿ ಶಿಕ್ಷಣ ಸಚಿವರು ಅತ್ಯುತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ಸಾರ್ವಜನಿಕರ ಅಭಿಪ್ರಾಯ ಸಂಗ್ರಹಣೆ ವಿಷಯದಲ್ಲಿ ಸೂಕ್ಷ್ಮವಾಗಿ ಹೆಜ್ಜೆ ಇಡುತ್ತಿದ್ದಾರೆ. ಇದಕ್ಕಾಗಿ ಅವರನ್ನು ಅಭಿನಂದಿಸುತ್ತೇನೆ. ಅದೇ ರೀತಿ ನಾನು ಕೂಡಾ ಶಿಕ್ಷಣ ತಜ್ಞರು, ನಿವೃತ್ತ ನ್ಯಾಯಾಧೀಶರು ಸೇರಿದಂತೆ ಶಿಕ್ಷಣ ಕ್ಷೇತ್ರದಲ್ಲಿ ಗಣ್ಯರೊಂದಿಗೆ ಸಭೆ ನಡೆಸಿ, ಇನ್ನೆರಡು ದಿನಗಳಲ್ಲಿ ಶಿಕ್ಷಣ ಸಚಿವರಿಗೆ ವಿವರವಾದ ಅಭಿಪ್ರಾಯ ತಿಳಿಸುತ್ತೇನೆ ಎಂದು ಶಾಸಕ ಎಚ್‌.ಕೆ. ಪಾಟೀಲ್‌ ಅವರು ಹೇಳಿದ್ದಾರೆ.