ಹೇಮಾವತಿ ಹಿನ್ನೀರಿನಲ್ಲಿ ಮುಳುಗಿ ಸೈನಿಕ ಸಹಿತ ಇಬ್ಬರ ಸಾವು
ಕೊಡಗು ಜಿಲ್ಲೆ ಸೋಮವಾರಪೇಟೆ ತಾಲೂಕಿನ ಕೊಡ್ಲಿಪೇಟೆ ಹೋಬಳಿಯ ಕಟ್ಟೆಪುರ ಹೇಮಾವತಿ ನದಿ ಹಿನ್ನೀರಿನಲ್ಲಿ ಈಜಲು ಹೋದ ಸೈನಿಕ ಹಾಗೂ ಆತನ ಸಂಬಂಧಿ ಸೇರಿದಂತೆ ಇಬ್ಬರು ನೀರುಪಾಲಾದ ಘಟನೆ ಶುಕ್ರವಾರ ಬೆಳಗ್ಗೆ ನಡೆದಿದೆ.
ಶನಿವಾರಸಂತೆ(ಮೇ.02): ಕೊಡಗು ಜಿಲ್ಲೆ ಸೋಮವಾರಪೇಟೆ ತಾಲೂಕಿನ ಕೊಡ್ಲಿಪೇಟೆ ಹೋಬಳಿಯ ಕಟ್ಟೆಪುರ ಹೇಮಾವತಿ ನದಿ ಹಿನ್ನೀರಿನಲ್ಲಿ ಈಜಲು ಹೋದ ಸೈನಿಕ ಹಾಗೂ ಆತನ ಸಂಬಂಧಿ ಸೇರಿದಂತೆ ಇಬ್ಬರು ನೀರುಪಾಲಾದ ಘಟನೆ ಶುಕ್ರವಾರ ಬೆಳಗ್ಗೆ ನಡೆದಿದೆ. ಸೈನಿಕ ಲೋಕೇಶ್ (28) ಹಾಗೂ ಆತನ ಸಂಬಂಧಿ ಲತೇಶ್ (26) ಮೃತರು.
ಸೈನಿಕನಾಗಿರುವ, ಹಾಸನ ಜಿಲ್ಲೆಯ ಅರಕಲಗೂಡು ತಾಲೋಕಿನ ಅರಹಳ್ಳಿಯ ನಿವಾಸಿಯಾಗಿರುವ ಲೋಕೇಶ್ ಶುಕ್ರವಾರ ಬೆಳಗ್ಗೆ ಬೆಸೂರು ಗ್ರಾ.ಪಂ. ವ್ಯಾಪ್ತಿಯ ನಿಲುವಾಗಿಲು ಗ್ರಾಮದ ತನ್ನ ಸಂಬಂಧಿಯಾದ ಲತೇಶ್ ಅವರ ಮನೆಗೆ ಬಂದಿದ್ದ. ಶುಕ್ರವಾರ ಬೆಳಗ್ಗೆ ಲೋಕೇಶ್ ಮತ್ತು ಲತೇಶ್ ಪಕ್ಕದ ಕಟ್ಟೆಪುರ ಗ್ರಾಮದ ಹೇಮಾವತಿ ಜಲಾಶಯ ಹಿನ್ನೀರಿನಲ್ಲಿ ಈಜಲು ತೆರಳಿದ್ದರು.
'ಹೊಸ ನೀತಿ ಜಾರಿ: ಪಾರದರ್ಶಕ, ಕಡಿಮೆ ದರದಲ್ಲಿ ಮರಳು ಪೂರೈಕೆಗೆ ಕ್ರಮ'
ಈ ಸಂದರ್ಭ ನೀರಿನ ಸೆಳೆತಕ್ಕೆ ಇಬ್ಬರೂ ಕೊಚ್ಚಿಹೋಗಿದ್ದಾರೆ. ಸ್ನಾನಕ್ಕೆ ತೆರಳಿದ ಇಬ್ಬರೂ ಮಧ್ಯಾಹ್ನವಾದರೂ ಹಿಂತಿರುಗದ ಹಿನ್ನೆಲೆಯಲ್ಲಿ ಲತೇಶ್ ಪೋಷಕರು ಕಟ್ಟೆಪುರ ಹಿನ್ನೀರಿನ ಸ್ಥಳದಲ್ಲಿ ಹುಡುಕಾಟ ನಡೆಸಿದ್ದಾರೆ. ಸ್ನಾನಕ್ಕೆ ಇಳಿದ ಸಂದರ್ಭದಲ್ಲಿ ಇಬ್ಬರು ಬಟ್ಟೆಗಳು ನದಿ ದಡದಲ್ಲಿ ಇದ್ದಿರುವುದನ್ನು ಗಮನಿಸಿದ ಪೋಷಕರಿಗೆ ಅನುಮಾನ ಬಂದು ಗ್ರಾಮಸ್ಥರಿಗೆ ಮಾಹಿತಿ ನೀಡಿದ್ದಾರೆ.
ಪೋಷಕರು, ಗ್ರಾಮಸ್ಥರು ಘಟನೆ ಕುರಿತು ಶನಿವಾರಸಂತೆ ಪೊಲೀಸರಿಗೆ ಮಾಹಿತಿ ನೀಡಿದ್ದು, ಮುಳುಗು ತಜ್ಞರು ಮತ್ತು ಗ್ರಾಮಸ್ಥರು ಹಿನ್ನೀರಿನಲ್ಲಿ ಮೃತ ದೇಹದ ಹುಡುಕಾಟ ನಡೆಸಿದರು. ಮಧ್ಯಾಹ್ನ 3.30ರ ಸುಮಾರಿಗೆ ಲೋಕೇಶ್ ಮತ್ತು ಲತೇಶ್ ಅವರ ಮೃತ ದೇಹ ಸಿಕ್ಕಿದೆ.
ಗದಗ: ಮಹಾಮಾರಿ ಕೊರೋನಾ ಗೆದ್ದ ವೃದ್ಧೆ, ಕೋವಿಡ್ ಆಸ್ಪತ್ರೆಯಿಂದ ಡಿಸ್ಚಾರ್ಜ್
ಲೋಕೇಶ್‌ಗೆ ವಾರದ ಹಿಂದೆಯಷ್ಟೆವಿವಾಹ ನಿಶ್ಚಿತಾರ್ಥವಾಗಿತ್ತು. ಲತೇಶ್ ಅವಿವಾಹಿತನಾಗಿದ್ದ. ಸ್ಥಳಕ್ಕೆ ಶನಿವಾರಸಂತೆ ಪೊಲೀಸ್ ಠಾಣಾಧಿಕಾರಿ ಕೃಷ್ಣ ನಾಯಕ್ ಭೇಟಿ ನೀಡಿದ್ದರು. ಶನಿವಾರಸಂತೆ ಪೊಲೀಸರು ಪ್ರಕರಣವನ್ನು ದಾಖಲಿಸಿದ್ದಾರೆ.