* ಬೆಳಗಾವಿ ಜಿಲ್ಲೆಯ ಸದಲಗಾ ಪೊಲೀಸ್‌ ಠಾಣೆ ಮೇಲೆ ಎಸಿಬಿ ದಾಳಿ* 40 ಸಾವಿರ ಲಂಚ ಪಡೆಯುವಾಗ ದಾಳಿ * ರಾಜು ಪಾಶ್ಚಾಪುರೆ ಎಂಬುವರನ್ನ ಹೆದರಿಸಿ ಲಂಚಕ್ಕಾಗಿ ಬೇಡಿಕೆ ಇಟ್ಟಿದ್ದ ಪೊಲೀಸರು 

ಬೆಳಗಾವಿ(ಜು.09): ಅನಧಿಕೃತವಾಗಿ ಪಾನ್‌ ಮಸಾಲಾ ಕಾರ್ಖಾನೆ ನಡೆಸುತ್ತಿದ್ದೀರಿ ಎಂದು ಹೆದರಿಸಿ ಅದರ ಮಾಲೀಕನಿಂದ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಸದಲಗಾ ಪೊಲೀಸ್‌ ಠಾಣೆಯ ಪಿಎಸ್‌ಐ ಹಾಗೂ ಇಬ್ಬರು ಕಾನ್ಸಟೇಬಲ್‌ಗಳು ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ)ದ ಬಲೆಗೆ ಬಿದ್ದಿದ್ದಾರೆ.

ಗುರುವಾರ ಠಾಣೆಯ ಮೇಲೆ ದಾಳಿ ನಡೆಸಿದ ಎಸಿಬಿ ಅಧಿಕಾರಿಗಳು ಪಿಎಸ್‌ಐ ಕುಮಾರ ಹಿತ್ತಲಮನಿ ಹಾಗೂ ಕಾನ್ಸಟೇಬಲ್‌ಗಳಾದ ಮಾಯಪ್ಪಾ ಗಡ್ಡೆ ಮತ್ತು ಶ್ರೀಶೈಲ ಮಂಗಿ ಅವರನ್ನು 40 ಸಾವಿರ ಲಂಚ ಪಡೆಯುವಾಗ ದಾಳಿ ನಡೆಸಿ ವಶಕ್ಕೆ ಪಡೆದಿದ್ದಾರೆ. 

ಪ್ರತಿ ಜಿಲ್ಲೆಯಿಂದ 5 ಲಕ್ಷ ಹಣ ಆಡಿಯೋ ವೈರಲ್: ಅಬಕಾರಿ ಸಚಿವರ ವಿರುದ್ಧ ACBಗೆ ದೂರು

ಸರ್ಕಾರದ ಅಗತ್ಯ ಎಲ್ಲ ಪರವಾನಗಿ ಪಡೆದು ಗಡಿಗ್ರಾಮ ಬೋರಗಾಂವದಲ್ಲಿ ಪಾನ್‌ ಮಸಾಲಾ ಕಾರ್ಖಾನೆ ನಡೆಸುತ್ತಿದ್ದ ಇಚಲಕರಂಜಿ ಮೂಲದ ರಾಜು ಪಾಶ್ಚಾಪುರೆ ಅವರನ್ನು ಹೆದರಿಸಿದ್ದ ಪಿಎಸ್‌ಐ ಮತ್ತು ಪೇದೆಗಳು ಲಂಚಕ್ಕಾಗಿ ಬೇಡಿಕೆ ಇಟ್ಟಿದ್ದರು. ಈ ಬಗ್ಗೆ ಕಾರ್ಖಾನೆ ಮಾಲೀಕ ಎಸಿಬಿಗೆ ದೂರು ಸಲ್ಲಿಸಿದ್ದರು. ದೂರಿನ ಹಿನ್ನೆಲೆಯಲ್ಲಿ ದಾಳಿ ನಡೆಸಿರುವ ಅಧಿಕಾರಿಗಳು ಠಾಣೆಯ ಮೇಲೆ ದಾಳಿ ನಡೆಸಿದರು.

ಎಸಿಬಿ ಎಸ್ಪಿ ಬಿ.ಎಸ್‌.ನ್ಯಾಮಗೌಡರ ಮಾರ್ಗದರ್ಶನ ಮತ್ತು ಡಿವೈಎಸ್ಪಿ ಜೆ.ಎಂ.ಕರುಣಾಕರ ಶೆಟ್ಟಿನೇತೃತ್ವದಲ್ಲಿ ಇನ್ಸಪೆಕ್ಟರ್‌ಗಳಾದ ಹೆಚ್‌. ಸುನಿಲಕುಮಾರ, ಎ.ಎಸ್‌.ಗುದಿಗೊಪ್ಪ, ಧಾರವಾಡದ ಅಲಿ ಶೇಖ್‌ ಹಾಗೂ ಸಿಬ್ಬಂದಿ ಕಾರ್ಯಾಚರಣೆ ನಡೆಸಿದರು.