ಮತದಾನ ಜಾಗೃತಿ ಹೆಸರಲ್ಲಿ ಬೆಂಗಳೂರು ಮತದಾರರ ಮಾಹಿತಿ ಕಳವು ಆರೋಪ, ಬೆಂಗಳೂರಿನ 2 ಪೊಲೀಸ್‌ ಠಾಣೆಗಳಲ್ಲಿ ದೂರು ದಾಖಲಿಸಿದ್ದ ಪಾಲಿಕೆ ಅಧಿಕಾರಿಗಳು

ಬೆಂಗಳೂರು(ನ.19): ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಹಾಗೂ ಜಾಗೃತಿ ನೆಪದಲ್ಲಿ ಮತದಾರರ ಮಾಹಿತಿ ಕಳವು ಆರೋಪಕ್ಕೆ ತುತ್ತಾಗಿರುವ ಚಿಲುಮೆ ಸಂಸ್ಥೆಯ ನಿರ್ದೇಶಕ ಸೇರಿ ಇಬ್ಬರು ಹಿರಿಯ ಅಧಿಕಾರಿಗಳನ್ನು ಶುಕ್ರವಾರ ಬೆಂಗಳೂರು ಕೇಂದ್ರ ವಿಭಾಗದ ಪೊಲೀಸರು ಬಂಧಿಸಿದ್ದಾರೆ. ಇದೇ ವೇಳೆ, ಬಿಬಿಎಂಪಿ ಹಾಗೂ ಚಿಲುಮೆ ಸಂಸ್ಥೆಯ ಕಚೇರಿಯಲ್ಲಿ ಕೆಲವು ಮಹತ್ವದ ದಾಖಲೆಗಳನ್ನು ಕೂಡ ಜಪ್ತಿ ಮಾಡಿದ್ದಾರೆ.
ಚಿಲುಮೆ ಸಂಸ್ಥೆಯ ನಿರ್ದೇಶಕ ರೇಣುಕಾ ಪ್ರಸಾದ್‌ ಹಾಗೂ ಮಾನವ ಸಂಪನ್ಮೂಲ ಅಧಿಕಾರಿ ಧರ್ಮೇಶ್‌ ಬಂಧಿತರಾಗಿದ್ದು, ಮತ್ತಿಬ್ಬರು ಸಿಬ್ಬಂದಿಯನ್ನು ವಿಚಾರಣೆ ನಡೆಸಿ ಪೊಲೀಸರು ಕಳುಹಿಸಿದ್ದಾರೆ. ಈ ನಡುವೆ ಸಂಸ್ಥೆಯ ಆಡಳಿತಾಧಿಕಾರಿಗಳು ನಾಪತ್ತೆಯಾಗಿದ್ದು, ಪೊಲೀಸರು ಹುಡುಕಾಟ ನಡೆಸಿದ್ದಾರೆ.

‘ಮತದಾನ ಕುರಿತು ಜಾಗೃತಿ ನೆಪದಲ್ಲಿ ಮತದಾರರ ವೈಯಕ್ತಿಕ ಮಾಹಿತಿ ಸಂಗ್ರಹಿಸಿ ದತ್ತಾಂಶ ಕಳವು ಮಾಡಿದ್ದಾರೆ’ ಎಂದು ಚಿಲುಮೆ ಸಂಸ್ಥೆಯ ವಿರುದ್ಧ ಹಲಸೂರು ಗೇಟ್‌ ಹಾಗೂ ಕಾಡುಗೋಡಿ ಪೊಲೀಸ್‌ ಠಾಣೆಯಲ್ಲಿ ಬಿಬಿಎಂಪಿ ಅಧಿಕಾರಿಗಳು ದೂರು ದಾಖಲಿಸಿದ್ದರು. ‘ಈ ಕೃತ್ಯಕ್ಕೆ ಚುನಾವಣಾಧಿಕಾರಿಗಳ ಹೆಸರಿನಲ್ಲಿ ನಕಲಿ ಗುರುತಿನ ಚೀಟಿ ಸಹ ಬಳಕೆ ಮಾಡಿದ್ದರು’ ಎಂದು ಆರೋಪಿಸಲಾಗಿತ್ತು. ಈ ಪ್ರಕರಣ ರಾಜಕೀಯ ಸಂಚಲನ ಸೃಷ್ಟಿಸಿದೆ.

ಮತದಾರರ ಮಾಹಿತಿ ಕಳವು: ಚಿಲುಮೆ ವಿರುದ್ಧ ಬಿಬಿಎಂಪಿ ದೂರು

ದಾಳಿ, ಇಬ್ಬರ ಬಂಧನ:

ಈ ಪ್ರಕರಣದ ತನಿಖೆ ಕೈಗೆತ್ತಿಕೊಂಡ ಕೇಂದ್ರ ವಿಭಾಗದ ಡಿಸಿಪಿ ಶ್ರೀನಿವಾಸಗೌಡ ನೇತೃತ್ವದ ವಿಶೇಷ ತಂಡಗಳು, ಮಲ್ಲೇಶ್ವರದ 17ನೇ ಅಡ್ಡರಸ್ತೆಯಲ್ಲಿರುವ ಚಿಲುಮೆ ಸಂಸ್ಥೆಯ ಕಚೇರಿ ಮೇಲೆ ಶುಕ್ರವಾರ ಮಧ್ಯಾಹ್ನ ದಾಳಿ ನಡೆಸಿ ಪರಿಶೀಲಿಸಿತು.

ಕೃತ್ಯ ಬೆಳಕಿಗೆ ಬಂದ ನಂತರ ಕಚೇರಿಗೆ ಬೀಗ ಹಾಕಿಕೊಂಡು ಚಿಲುಮೆ ಸಂಸ್ಥೆಯ ವ್ಯವಸ್ಥಾಪಕ ಹಾಗೂ ಸಿಬ್ಬಂದಿ ಪರಾರಿಯಾಗಿದ್ದರು. ಹೀಗಾಗಿ ನ್ಯಾಯಾಲಯದ ಸಚ್‌ರ್‍ ವಾರೆಂಟ್‌ ಪಡೆದು ಚಿಲುಮೆ ಸಂಸ್ಥೆಯ ಕಚೇರಿಯನ್ನು ಪೊಲೀಸರು ಜಾಲಾಡಿದರು. ಈ ವೇಳೆ ಕೆಲವು ಕೃತ್ಯ ಸಂಬಂಧಿಸಿದ ದಾಖಲೆಗಳನ್ನು ವಶಕ್ಕೆ ಪಡೆದಿದ್ದಾರೆ.

ಮತ ಪಟ್ಟಿ ದುರ್ಬಳಕೆ, ಕಾಂಗ್ರೆಸ್‌ ಪಿತೂರಿ: ಸಚಿವ ಆರ್‌.ಅಶೋಕ್‌

ಈ ವೇಳೆ ತಪ್ಪಿಸಿಕೊಳ್ಳಲು ಯತ್ನಿಸಿದ್ದ ನಾಲ್ವರನ್ನು ವಶಕ್ಕೆ ಪಡೆದು ಠಾಣೆಗೆ ಕರೆತಂದು ವಿಚಾರಣೆಗೊಳಪಡಿಸಿದ ಪೊಲೀಸರು, ರಾತ್ರಿ ವೇಳೆಗೆ ಆ ಸಂಸ್ಥೆಯ ನೌಕರರಾದ ಧರ್ಮೇಶ್‌ ಹಾಗೂ ರೇಣುಕಾ ಪ್ರಸಾದ್‌ ಅವರನ್ನು ಬಂಧಿಸಿದ್ದಾರೆ. ಇನ್ನುಳಿದ ರಕ್ಷಿತ್‌ ಸೇರಿ ಇಬ್ಬರಿಗೆ ಮತ್ತೆ ವಿಚಾರಣೆಗೆ ಬರುವಂತೆ ನೋಟಿಸ್‌ ಜಾರಿಗೊಳಿಸಿ ಪೊಲೀಸರು ಕಳುಹಿಸಿದ್ದಾರೆ ಎಂದು ತಿಳಿದು ಬಂದಿದೆ.

ಬಿಬಿಎಂಪಿ ಕಚೇರಿಯಲ್ಲೂ ಸಹ ಶೋಧ:

ಇದೇ ಪ್ರಕರಣ ಸಂಬಂಧ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರ ವಿಭಾಗದ ಅಪರ ಚುನಾವಣಾಧಿಕಾರಿಯೂ ಆಗಿರುವ ಬಿಬಿಎಂಪಿ ವಿಶೇಷ ಆಯುಕ್ತ (ಆಡಳಿತ) ರಂಗಪ್ಪ ಅವರ ಕಚೇರಿಯಲ್ಲಿ ಸಹ ಪೊಲೀಸರು ಶೋಧ ನಡೆಸಿದ್ದಾರೆ. ಈ ವೇಳೆ ಕೆಲವು ದಾಖಲೆಗಳನ್ನು ಕೂಡ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಮತದಾರರ ಮಾಹಿತಿ ಕಳವು ಪ್ರಕರಣದ ತನಿಖೆ ಪ್ರಗತಿಯಲ್ಲಿದ್ದು, ತಪ್ಪಿಸಿಕೊಂಡಿರುವ ಆ ಸಂಸ್ಥೆಯ ವ್ಯವಸ್ಥಾಪಕರ ಪತ್ತೆಗೆ ಹುಡುಕಾಟ ನಡೆದಿದೆ. ಬೀಗ ಹಾಕಿರುವ ಚಿಲುಮೆ ಸಂಸ್ಥೆ ಕಚೇರಿಗಳಿಗೆ ಪೊಲೀಸರನ್ನು ಕಾವಲಿಗೆ ನಿಯೋಜಿಸಲಾಗಿದೆ ಅಂತ ಬೆಂಗಳೂರು ಪೊಲೀಸ್‌ ಆಯುಕ್ತ ಸಿ.ಎಚ್‌.ಪ್ರತಾಪ್‌ ರೆಡ್ಡಿ ತಿಳಿಸಿದ್ದಾರೆ.