ಬಿಜೆಪಿ ಸರ್ಕಾರದ ಮೇಲೆ ಸುಮ್ಮನೆ ಗೂಬೆ ಕೂರಿಸುವ ಕೆಲಸವನ್ನು ಕಾಂಗ್ರೆಸ್‌ ಮಾಡುತ್ತಿದೆ. ಆರೋಪದಲ್ಲಿ ಯಾವುದೇ ಸತ್ಯಾಂಶವಿಲ್ಲ ಎಂದ ಅಶೋಕ್‌  

ಮಳವಳ್ಳಿ(ನ.19): ರಾಜ್ಯ ಸರ್ಕಾರದ ವಿರುದ್ಧ ಮತದಾರರ ಪಟ್ಟಿದುರ್ಬಳಕೆ ಆರೋಪ ಕಾಂಗ್ರೆಸ್‌ ಪಿತೂರಿ ಎಂದು ಕಂದಾಯ ಸಚಿವ ಆರ್‌.ಅಶೋಕ್‌ ಹೇಳಿದರು. ಪಟ್ಟಣದ ಮೈಸೂರು ರಸ್ತೆಯ ನೂತನ ಬಿಜೆಪಿ ಕಚೇರಿಗೆ ಶುಕ್ರವಾರ ಭೇಟಿ ನೀಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಮತದಾರರ ಪಟ್ಟಿಪರಿಷ್ಕರಣೆ ಮಾಡುವುದು ಚುನಾವಣಾ ಆಯೋಗದ ಕೆಲಸ. ಪಟ್ಟಿಹಾಗೂ ಕಾರ್ಡ್‌ ತಯಾರಿಸುವ ಜವಾಬ್ದಾರಿ ಅವರಿಗಿದೆ ಎಂದರು. ಬಿಜೆಪಿ ಸರ್ಕಾರದ ಮೇಲೆ ಸುಮ್ಮನೆ ಗೂಬೆ ಕೂರಿಸುವ ಕೆಲಸವನ್ನು ಕಾಂಗ್ರೆಸ್‌ ಮಾಡುತ್ತಿದೆ. ಆರೋಪದಲ್ಲಿ ಯಾವುದೇ ಸತ್ಯಾಂಶವಿಲ್ಲ ಎಂದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಅವರ ಕೈವಾಡದ ಪ್ರಶ್ನೆಯೇ ಇಲ್ಲ. ಈ ಹಿಂದೆನೂ ಕೂಡ ಅದೇ ಕಂಪನಿಗೆ ಕಾಂಗ್ರೆಸ್‌ ಜವಾಬ್ದಾರಿ ಕೊಟ್ಟಿರುವುದು ಕಂಡು ಬಂದಿದೆ ಎಂದರು.

ಸಿ.ಪಿ.ಯೋಗೇಶ್ವರ್‌ ಗೋಲ್‌ಮಾಲ್‌ ರಾಜಕಾರಣಿ: ಕುಮಾರಸ್ವಾಮಿ

ಈಗಾಗಲೇ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದೆ. ಈ ವರದಿಯಲ್ಲಿ ಯಾವುದೇ ಅಧಿಕಾರಿಗಳು ತಪ್ಪು ಮಾಡಿದ್ದರೂ ಅವರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು. ಇದರಲ್ಲಿ ಮುಖ್ಯಮಂತ್ರಿಗಳ ಹಾಗೂ ಸಚಿವರ ಪಾತ್ರವಿಲ್ಲ. ಸುಮ್ಮನೆ ಬೇಜವಾಬ್ದಾರಿತನದಿಂದ ಕಾಂಗ್ರೆಸ್‌ ವರ್ತಿಸುತ್ತಿದೆ ಎಂದು ಕಿಡಿಕಾರಿದರು.

ಮೀಸಲಾತಿ ಹೆಚ್ಚಳ ಹಾಗೂ ನಾಡಪ್ರಭು ಕೆಂಪೇಗೌಡರ ಪ್ರತಿಮೆ ನಿರ್ಮಾಣ ನಂತರ ಒಂದು ರೀತಿಯಲ್ಲಿ ಹತಾಶೆಗೆ ಒಳಗಾಗಿರುವ ಕಾಂಗ್ರೆಸ್‌ ನವರು ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಈ ವೇಳೆ ಬಿಜೆಪಿ ಘಟಕದ ಅಧ್ಯಕ್ಷ ಎಂ.ಎನ್‌.ಕೃಷ್ಣ, ಹಿರಿಯ ಮುಖಂಡರಾದ ಯಮದೂರು ಸಿದ್ದರಾಜು, ಎಚ್‌.ಆರ್‌.ಅಶೋಕ್‌ಕುಮಾರ್‌, ದೋರನಹಳ್ಳಿ ಕುಮಾರಸ್ವಾಮಿ, ಶಿವಲಿಂಗಪ್ಪ, ಮೋಹನ್‌, ರಾಜಣ್ಣ, ದೇವರಾಜು, ಮಹೇಂದ್ರ, ಕೆ.ಸಿ.ನಾಗೇಗೌಡ, ಎಂ.ಪಿ.ಗೌಡ, ಪುಟ್ಟಸ್ವಾಮಿ ಇದ್ದರು.