ತುರುವೇಕೆರೆ (ಅ.29):  ತುರುವೇಕೆರೆ ವಿಧಾನಸಭಾ ಕ್ಷೇತ್ರದಲ್ಲಿ ಕಳೆದ ನಾಲ್ಕೈದು ವರ್ಷಗಳಿಂದ ಸಾಮಾಜಿಕ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡು ತಮ್ಮದೇ ಸೇವೆ ಮಾಡಿ ಜನಸಾಮಾನ್ಯರ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿರುವ ರಾಜ್ಯ ಒಕ್ಕಲಿಗರ ಮಹಾ ಸಭಾದ ಅಧ್ಯಕ್ಷ ಎಂ.ನಾರಾಯಣಗೌಡ ಕಾಂಗ್ರೆಸ್‌ಗೆ ಸೇರ್ಪಡೆಗೊಂಡಿರುವುದು ವಿಧಾನ ಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ ಗೆ ಹೆಚ್ಚು ಬಲ ತಂದಿದೆ ಎಂದು ಹಿರಿಯ ಕಾಂಗ್ರೆಸ್‌ ಮುಖಂಡ ಚೌದ್ರಿ ಟಿ.ರಂಗಪ್ಪ ಹೇಳಿದ್ದಾರೆ.

ಕಾಂಗ್ರೆಸ್‌ ಕಚೇರಿಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಎಂ.ನಾರಾಯಣಗೌಡರನ್ನು ಪಕ್ಷದ ಭಾವುಟ ನೀಡಿ ಪಕ್ಷಕ್ಕೆ ಸ್ವಾಗತಿಸಿ ಮಾತನಾಡಿದ ಅವರು, ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗುರುತರವಾದ ಮತ ಪಡೆದಿದ್ದ ನಾರಾಯಣಗೌಡರು ಕಾಂಗ್ರೆಸ್‌ಗೆ ಸೇರ್ಪಡೆಗೊಂಡಿರುವುದು ಕಾಂಗ್ರೆಸ್‌ ಕಾರ್ಯಕರ್ತರಲ್ಲೂ ಮತ್ತು ಅವರ ಅಭಿಮಾನಿಗಳಲ್ಲಿ ಸಂತಸ ಏರ್ಪಟ್ಟಿದೆ.

ನಾರಾಯಣಗೌಡರು ಜನಾಕರ್ಷಣೆ ಮಾಡುವಲ್ಲಿ ಮತ್ತು ಜನ ಸೇವೆ ಮಾಡುವಲ್ಲಿ ಎತ್ತಿದ ಕೈ. ಮುಂಬರುವ ದಿನಗಳಲ್ಲಿ ನಾರಾಯಣಗೌಡರು ಕಾಂಗ್ರೆಸ್‌ ನಲ್ಲಿ ಸಕ್ರಿಯವಾಗಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಪಕ್ಷವನ್ನು ಸದೃಢಗೊಳಿಸಲಿದ್ದಾರೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.

ಸಿದ್ದು ಭಾಷಣಕ್ಕೆ ಅಡ್ಡಿ: BBMP ಮಾಜಿ ಸದಸ್ಯನ ಬಂಧನ ...

ಪಕ್ಷ ಸೇರ್ಪಡೆ ನಂತರ ಮಾತನಾಡಿದ ನಾರಾಯಣಗೌಡರು, ಮುಂಬರುವ ದಿನಗಳಲ್ಲಿ ಕಾಂಗ್ರೆಸ್‌ ರಾಜ್ಯದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ. ಡಿ.ಕೆ.ಶಿವಕುಮಾರ್‌, ಸಿದ್ದರಾಮಯ್ಯ, ಡಾ.ಜಿ.ಪರಮೇಶ್ವರ್‌ ನೇತೃತ್ವದಲ್ಲಿ ಕಾಂಗ್ರೆಸ್‌ ಉತ್ತಮ ಆಡಳಿತ ನೀಡಲಿದೆ. ಜನ ಸಾಮಾನ್ಯರ ನೋವು ನಲಿವುಗಳಿಗೆ ಸ್ಪಂದಿಸುವುದು ಕಾಂಗ್ರೆಸ್‌ ಪಕ್ಷ ಮಾತ್ರ. ಹಾಗಾಗಿ ತಾವು ಕಾಂಗ್ರೆಸ್‌ ಸೇರ್ಪಡೆಗೊಂಡಿದುದಾಗಿ ಹೇಳಿದರು. ಪಕ್ಷ ಆದೇಶಿಸುವ ಯಾವುದೇ ಕಾರ್ಯಗಳನ್ನು ಶಿರಸಾವಹಿಸಿ ನಿರ್ವಹಿಸುವೆ ಎಂದು ನಾರಾಯಣ ಗೌಡ ಭರವಸೆ ನೀಡಿದರು.