ಬೆಂಗಳೂರು(ಅ.29): ಉಪ ಚುನಾವಣೆ ಪ್ರಚಾರದ ವೇಳೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಭಾಷಣಕ್ಕೆ ಅಡ್ಡಪಡಿಸಿದ ಪ್ರಕರಣ ಸಂಬಂಧ ಬಿಬಿಎಂಪಿ ಮಾಜಿ ಸದಸ್ಯ ಹಾಗೂ ಅವರ ಬೆಂಬಲಿಗರನ್ನು ಬಂಧಿಸಿ ಬಳಿಕ ಠಾಣಾ ಜಾಮೀನು ಮೇರೆಗೆ ಬುಧವಾರ ಯಶವಂತಪುರ ಪೊಲೀಸರು ಬಿಡುಗಡೆಗೊಳಿಸಿದ್ದಾರೆ.

ಯಶವಂತಪುರ ವಾರ್ಡ್‌ ಮಾಜಿ ಸದಸ್ಯ ಜಿ.ಕೆ.ವೆಂಕಟೇಶ್‌ ಹಾಗೂ ಅವರ ಬೆಂಬಲಿಗರಾದ ಭರತ್‌ ಸಿಂಗ್‌, ಕೊತ್ತಮರಿ ನಾಗ, ಖಾಜಾ, ರತ್ನಮ್ಮ ಸೇರಿದಂತೆ ಇತರರನ್ನು ಬೆಳಗ್ಗೆ ಬಂಧಿಸಿದ ಪೊಲೀಸರು, ನಂತರ ವೈಯಕ್ತಿಕ ಬಾಂಡ್‌ ಪಡೆದು ಬಿಡುಗಡೆಗೊಳಿಸಿದ್ದಾರೆ. ಠಾಣಾ ಜಾಮೀನು ಕೊಡುವ ಪ್ರಕರಣಗಳಾಗಿದ್ದರಿಂದ ಕಾನೂನು ರೀತ್ಯ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಉತ್ತರ ವಿಭಾಗದ ಡಿಸಿಪಿ ಧರ್ಮೇಂದ್ರ ಕುಮಾರ್‌ ಮೀನಾ ತಿಳಿಸಿದ್ದಾರೆ.

ನಾನು ಕಣ್ಣೀರು ಹಾಕಿದ್ದಕ್ಕೆ ಸಿದ್ದರಾಮಯ್ಯ ಡಿಸಿಎಂ ಆಗಿದ್ದು: ದೇವೇಗೌಡ

ರಾಜರಾಜೇಶ್ವರಿ ನಗರ ಕ್ಷೇತ್ರ ಉಪ ಚುನಾವಣೆ ಸಂಬಂಧ ಚೌಡೇಶ್ವರಿ ಬಸ್‌ ನಿಲ್ದಾಣದ ಬಳಿ ಮಂಗಳವಾರ ರಾತ್ರಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಪ್ರಚಾರ ನಡೆಸುತ್ತಿದ್ದರು. ಆಗ ಭಾಷಣಕ್ಕೆ ಅಡ್ಡಪಡಿಸಿದ್ದಲ್ಲದೆ ಕಾಂಗ್ರೆಸ್‌ ಕಾರ್ಯಕರ್ತರ ಮೇಲೆ ಗೂಂಡಾಗಿರಿ ನಡೆಸಿದ್ದಾರೆ ಎಂದು ಪಾಲಿಕೆ ಮಾಜಿ ಸದಸ್ಯ ವೆಂಕಟೇಶ್‌ ಹಾಗೂ ಅವರ ಹಿಂಬಾಲಕ ವಿರುದ್ಧ ಕಾಂಗ್ರೆಸ್‌ ಮುಖಂಡ ಗೋಪಾಲ ಕೃಷ್ಣ ದೂರು ನೀಡಿದ್ದರು. ಅಂತೆಯೇ ಯಶವಂತಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.