ಶಿವಮೊಗ್ಗ(ಜು.26): ನಗರದಲ್ಲಿ ಸ್ಮಾರ್ಟ್‌ ಸಿಟಿ ಯೋಜನೆಯಡಿ ತುಂಗಾ ನದಿ ತೀರವನ್ನು ಸುಮಾರು 130ಕೋಟಿ ರು. ವೆಚ್ಚದಲ್ಲಿ ಅಭಿವೃದ್ಧಿಪಡಿಸುವ ಮಹತ್ವಾಕಾಂಕ್ಷೆಯ ಯೋಜನೆಗೆ 15ದಿನಗಳ ಒಳಗಾಗಿ ಕಾರ್ಯಾದೇಶ ನೀಡಲಾಗುವುದು ಎಂದು ಮಹಾನಗರ ಪಾಲಿಕೆ ಆಯುಕ್ತೆ ಚಾರುಲತಾ ಸೋಮಲ್‌ ಅವರು ಹೇಳಿದರು.

ನಾಗರಿಕರಿಗೆ ಅನುಕೂಲಕರ ಅಭಿವೃದ್ಧಿ ಕಾರ್ಯ:

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಿವಮೊಗ್ಗ ನಗರದಲ್ಲಿ ಸ್ಮಾರ್ಟ್‌ ಸಿಟಿ ಯೋಜನೆಯಡಿ ಕೈಗೊಳ್ಳಲಾಗುತ್ತಿರುವ ಅತ್ಯಂತ ಮಹತ್ವಾಕಾಂಕ್ಷೆಯ ಯೋಜನೆ ಇದಾಗಿದೆ. ಈ ಯೋಜನೆಯಡಿ ತುಂಗಾ ನದಿಯ ಹಳೆಯ ಸೇತುವೆಯಿಂದ ಆರಂಭಿಸಿ ಹೊಸ ಸೇತುವೆವರೆಗಿನ 2.6ಕಿ.ಮೀ. ಪ್ರದೇಶದ 6.5 ಹೆಕ್ಟೇರ್‌ ವ್ಯಾಪ್ತಿಯಲ್ಲಿ ನಾಗರಿಕರಿಗೆ ಅನುಕೂಲವಾಗುವಂತೆ ಹಲವಾರು ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗುವುದು ಎಂದರು.

ಪ್ರವಾಸಿತಾಣವಾಗಲಿದೆ ತುಂಗಾ ತೀರ:

ಇಲ್ಲಿ ವಿವಿಧ ಕ್ರೀಡಾ ಚಟುವಟಿಕೆಗಳು, ವಾಕಿಂಗ್‌ ಟ್ರಾಕ್‌ಗಳು, ಕಮರ್ಷಿಯಲ್‌ ಪ್ಲಾಜಾಗಳು, ಸೈಕಲ್‌ ಟ್ರಾಕ್‌, ಫುಟ್‌ಪಾತ್‌, ಮಾಹಿತಿ ಕೇಂದ್ರ, ಜೆಟ್ಟಿಗಳು, ಗಣಪತಿ ವಿಸರ್ಜನೆಗೆ ಕೆರೆ ನಿರ್ಮಾಣ ಸೇರಿದಂತೆ ಪ್ರವಾಸಿ ತಾಣವನ್ನಾಗಿ ಅಭಿವೃದ್ಧಿಪಡಿಸುವ ಯೋಜನೆ ಇದಾಗಿದೆ. ಇದಲ್ಲದೆ, ಬಯಲು ರಂಗಮಂದಿರ, ವೀಕ್ಷಣಾ ಗೋಪುರ, ಮಕ್ಕಳಿಗೆ ಆಟವಾಡುವ ತಾಣಗಳು, ಉದ್ಯಾನವನ, ಶಿವಮೊಗ್ಗ ನಗರದ ಇತಿಹಾಸವನ್ನು ಬಿಂಬಿಸುವ ಮ್ಯೂರಲ್‌ ಪೈಂಟಿಂಗ್‌ಗಳು, ಲೈಟಿಂಗ್‌, ಕ್ರಾಸಿಂಗ್‌ ಬ್ರಿಡ್ಜ್‌, ಜಿಮ್‌ ಸೌಲಭ್ಯ ಒದಗಿಸಲಾಗುವುದು. ಹಲವು ಪ್ರಸಿದ್ಧ ನಗರಗಳಲ್ಲಿ ನದಿ ದಂಡೆಯನ್ನು ಅಭಿವೃದ್ಧಿಪಡಿಸಿದ ಮಾದರಿಯಲ್ಲಿ ಇದನ್ನು ಅಭಿವೃದ್ಧಿಪಡಿಸಲಾಗುವುದು ಎಂದು ಹೇಳಿದರು.

ಸ್ಮಾರ್ಟ್‌ ಸಿಟಿ ಪ್ರಗತಿ:

ಸ್ಮಾರ್ಟ್‌ ಸಿಟಿ ಯೋಜನೆಯಡಿ ಟ್ಯಾಂಕ್‌ ಮೊಹಲ್ಲಾ ಪಾರ್ಕ್ ಹಾಗೂ ಇ ಲೈಬ್ರರಿ ಆರಂಭಿಸಲು ಮೂಲಸೌಕರ್ಯ ಕಲ್ಪಿಸುವ ಕಾರ್ಯ ಪೂರ್ಣಗೊಂಡಿವೆ. ಕಳೆದ ಒಂದು ವರ್ಷದಲ್ಲಿ ಯೋಜನೆ ತ್ವರಿತವಾಗಿ ಅನುಷ್ಠಾನಗೊಳುತ್ತಿದ್ದು, ಪ್ರಸ್ತುತ 839ಕೋಟಿ ರು. ವೆಚ್ಚದ 37 ಕಾಮಗಾರಿಗಳು ಅನುಷ್ಠಾನ ಹಂತದಲ್ಲಿವೆ. ಲಕ್ಷ್ಮಿ ಥಿಯೇಟರ್‌ ಬಳಿಯಿಂದ ಎನ್‌ಟಿ ರಸ್ತೆವರೆಗೆ ವರ್ತುಲ ರಸ್ತೆಯ ಕೊನೆಯ ಹಂತವನ್ನು ಜೋಡಿಸುವ ರಸ್ತೆ ನಿರ್ಮಾಣ ಕಾರ್ಯವನ್ನು ಸದ್ಯದಲ್ಲಿಯೇ ಆರಂಭಿಸಲಾಗುವುದು ಎಂದರು.

ಖಾಸಗಿ ಕಾಲೇಜುಗಳಿಗೆ ಸೆಡ್ಡು, ತುಮಕೂರಿನ ಸರ್ಕಾರಿ ಕಾಲೇಜಿಗೆ 'ಡಿಜಿಟಲ್' ಟಚ್

ಖಾಸಗಿ ಬಸ್‌ ನಿಲ್ದಾಣ ಅಭಿವೃದ್ಧಿ:

ಖಾಸಗಿ ಬಸ್‌ ನಿಲ್ದಾಣ ಅಭಿವೃದ್ಧಿ, 100 ಇ-ರಿಕ್ಷಾ ಖರೀದಿ, ಡಿಜಿಟಲ್‌ ಡಿಸ್‌ಪ್ಲೇ ಬೋರ್ಡ್‌ಗಳ ಅಳವಡಿಕೆ, 17 ಉದ್ಯಾನವನಗಳ ಅಭಿವೃದ್ಧಿ, 35ಸರ್ಕಾರಿ ಶಾಲೆಗಳಲ್ಲಿ ಸ್ಮಾರ್ಟ್‌ ಎಜುಕೇಶನ್‌ ಸೌಲಭ್ಯ, ಬೈಕ್‌ ಶೇರಿಂಗ್‌ ಸೌಲಭ್ಯ, ಕನ್ಸರ್ವೆನ್ಸಿಗಳ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಒಟ್ಟು 120ಕೋಟಿ ರು. ವೆಚ್ಚದಲ್ಲಿ 11ಕಾಮಗಾರಿಗಳ ಅನುಷ್ಠಾನ ಅಂತಿಮ ಹಂತದಲ್ಲಿವೆ. ಬಹುಮಹಡಿ ವಾಹನ ಪಾರ್ಕಿಂಗ್‌, ನೆಹರು ಸ್ಟೇಡಿಯಂನಲ್ಲಿ ಅಭಿವೃದ್ಧಿ ಕಾಮಗಾರಿಗಳು, ಸ್ಮಾರ್ಟ್‌ ಬಸ್‌ ಶೆಲ್ಟರ್‌ ನಿರ್ಮಾಣ ಕಾಮಗಾರಿ ಪ್ರಸ್ತಾವನೆಗಳು ಡಿಪಿಆರ್‌ ಹಂತದಲ್ಲಿವೆ ಎಂದು ಹೇಳಿದರು.

ಡಿಜಿಟಲ್‌ ಲೈಬ್ರರಿ:

ನಗರದ ಪ್ರಮುಖ ಶಾಲಾ ಕಾಲೇಜುಗಳಲ್ಲಿ ಹಾಗೂ ಗ್ರಂಥಾಲಯಗಳಲ್ಲಿ ಡಿಜಿಟಲ್‌ ಲೈಬ್ರರಿ ಮತ್ತು ವರ್ಚುವಲ್‌ ಲೈಬ್ರರಿ ಯೋಜನೆಯನ್ನು ಜಾರಿಗೊಳಿಸಲಾಗುತ್ತಿದೆ. ಕಡಿಮೆ ವೆಚ್ಚದಲ್ಲಿ ಗುಣಮಟ್ಟದ ಮಾಹಿತಿಯನ್ನು ವಿದ್ಯಾರ್ಥಿಗಳು ಮಾತ್ರವಲ್ಲದೆ ಸಾರ್ವಜನಿಕರು ಇದರಿಂದ ಸುಲಭವಾಗಿ ಪಡೆಯಲು ಸಾಧ್ಯವಾಗಲಿದೆ ಎಂದು ಅವರು ಹೇಳಿದರು.

ಕರ್ನಾಟಕ ರಾಜಕೀಯದ ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಸ್ಮಾರ್ಟ್‌ ಸಿಟಿ ಯೋಜನೆಯ ಸುಪರಿಂಟೆಂಡೆಂಟ್‌ ಎಂಜಿನಿಯರ್‌ ಪರಸಪ್ಪ ಬಸಪ್ಪ, ಎಕ್ಸಿಕ್ಯೂಟಿವ್‌ ಎಂಜಿನಿಯರ್‌ ಗಣೇಶ್‌ ಉಪಸ್ಥಿತರಿದ್ದರು.