Asianet Suvarna News Asianet Suvarna News

ರಾಜಕೀಯ ಫೈಟ್‌ಗೆ ಸಜ್ಜಾಗಿದ್ದಾಗಿ ಹೇಳಿದ ತುಮಕೂರು ಮುಖಂಡ

ರಾಜಕೀಯ ಫೈಟ್‌ಗೆ ಸಜ್ಜಾಗಿದ್ದಾಗಿ ಮುಖಂಡರೋರ್ವರು ಹೇಳಿದ್ದಾರೆ. ಈಗಾಗಲೇ ಬಿರುಸಿನ ರಾಜಕೀಯ ಚಟುವಟಿಕೆ ಆರಂಭವಾಗಿದ್ದು ಈ ನಿಟ್ಟಿನಲ್ಲಿ ಪಕ್ಷಗಳು ತಯಾರಿಯಲ್ಲಿ ತೊಡಗಿವೆ. 

tumkuru bjp Leaders prepare for gram Panchayat Election snr
Author
Bengaluru, First Published Dec 2, 2020, 9:20 AM IST

ತುಮಕೂರು (ಡಿ.02):  ಗ್ರಾಪಂ ಚುನಾವಣೆಗೆ ಬಿಜೆಪಿ ಸಜ್ಜಾಗುತ್ತಿದೆ. ಈ ಸಂಬಂಧ ಇದೇ ತಿಂಗಳ 3 ರಂದು 2 ಕಡೆ ಗ್ರಾಮಸ್ವರಾಜ್‌ ಸಮಾವೇಶ ಹಮ್ಮಿಕೊಂಡಿದೆ. ತಿಪಟೂರು ತಾಲೂಕಿನ ಕೆ.ಬಿ. ಕ್ರಾಸ್‌ನಲ್ಲಿ ಹಾಗೂ ಮಧುಗಿರಿಯಲ್ಲಿ ಗ್ರಾಮ ಸ್ವರಾಜ್‌ ಸಮಾವೇಶ ಏರ್ಪಡಿಸಲಾಗಿದೆ ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ಬಿ. ಸುರೇಶಗೌಡ ತಿಳಿಸಿದ್ದಾರೆ.

ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದಲ್ಲಿ ಡಿ. 22 ಮತ್ತು 27 ರಂದು ನಡೆಯಲಿರುವ ಗ್ರಾಮ ಪಂಚಾಯ್ತಿ ಚುನಾವಣೆಯಲ್ಲಿ ಶೇ. 80ಕ್ಕೂ ಅತಿ ಹೆಚ್ಚಿನ ಸ್ಥಾನಗಳನ್ನು ಗೆಲ್ಲುವ ಗುರಿ ಹೊಂದಿರುವ ಭಾರತೀಯ ಜನತಾ ಪಾರ್ಟಿ ಅತಿ ಹೆಚ್ಚಿನ ಸ್ಥಾನಗಳನ್ನು ಗೆಲ್ಲುವ ಯೋಜಿತ ಕಾರ್ಯತಂತ್ರ, ಪ್ರಯತ್ನ, ಪ್ರವಾಸ ಹಾಗೂ ಸಮಾವೇಶಗಳನ್ನು ನಡೆಸಲು ರಾಜ್ಯದ ಪ್ರಮುಖ ನಾಯಕರು ಒಳಗೊಂಡ 6 ತಂಡಗಳನ್ನು ರಚಿಸಿದೆ ಎಂದರು.

ಸಂಪುಟ ವಿಸ್ತರಣೆ : ಸುಳಿವೊಂದನ್ನು ಕೊಟ್ಟ ವಿಜಯೇಂದ್ರ ...

ರಾಜ್ಯದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವ ಕೆ.ಎಸ್‌. ಈಶ್ವರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ್‌ ಕಟೀಲ್‌, ಕಂದಾಯ ಸಚಿವ ಆರ್‌. ಅಶೋಕ್‌, ಉಪಮುಖ್ಯಮಂತ್ರಿಗಳಾದ ಡಾ. ಸಿ.ಎನ್‌. ಅಶ್ವತ್‌್ಥನಾರಾಯಣ್‌ ಹಾಗೂ ಗೋವಿಂದ ಕಾರಜೋಳ ಅವರ ನೇತೃತ್ವದಲ್ಲಿ 6 ತಂಡಗಳನ್ನು ರಚಿಸಲಾಗಿದೆ ಎಂದರು. ತುಮಕೂರು ಜಿಲ್ಲೆಗೆ ಡಿ. 3 ರಂದು ನಡೆಯುವ ಗ್ರಾಮ ಸ್ವರಾಜ್‌ ಸಮಾವೇಶಕ್ಕೆ ಪಂಚಾಯತ್‌ ರಾಜ್‌ ಸಚಿವ ಕೆ.ಎಸ್‌. ಈಶ್ವರಪ್ಪ ನೇತೃತ್ವದ ತಂಡ ಆಗಮಿಸುತ್ತಿದ್ದು, ಈ ತಂಡದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ. ಮಾಧುಸ್ವಾಮಿ, ಚಿತ್ರದುರ್ಗ ಸಂಸದ ಎ. ನಾರಾಯಣಸ್ವಾಮಿ, ಶಿವಮೊಗ್ಗ ಸಂಸದ ಬಿ.ವೈ. ರಾಘವೇಂದ್ರ, ದಾವಣಗೆರೆ ಸಂಸದ ಜಿ.ಎಂ. ಸಿದ್ದೇಶ್ವರ್‌, ತುಳಸಿ ಮುನಿರಾಜೇಗೌಡ ಅವರು ಇರಲಿದ್ದಾರೆ ಎಂದರು.

ಡಿ. 3 ರಂದು ಬೆಳಿಗ್ಗೆ 11 ಗಂಟೆಗೆ ಕೆ.ಬಿ.ಕ್ರಾಸ್‌ನಲ್ಲಿ ನಡೆಯಲಿರುವ ಸಮಾವೇಶದಲ್ಲಿ ಕುಣಿಗಲ್‌, ತುರುವೇಕೆರೆ, ಗುಬ್ಬಿ, ಚಿಕ್ಕನಾಯಕನಹಳ್ಳಿ ಹಾಗೂ ತಿಪಟೂರು ತಾಲೂಕುಗಳಿಂದ ಕಾರ್ಯಕರ್ತರು ಭಾಗವಹಿಸಲಿದ್ದಾರೆ. ಮಧ್ಯಾಹ್ನ 3 ಗಂಟೆಗೆ ಮಧುಗಿರಿಯಲ್ಲಿ ನಡೆಯಲಿರುವ ಸಮಾವೇಶದಲ್ಲಿ ಮಧುಗಿರಿ, ಸಿರಾ, ಪಾವಗಡ, ಕೊರಟಗೆರೆ, ತುಮಕೂರು ತಾಲ್ಲೂಕುಗಳ ಪಕ್ಷದ ಕಾರ್ಯಕರ್ತರು, ಮುಖಂಡರು ಭಾಗಿಯಾಗಲಿದ್ದಾರೆ ಎಂದು ಅವರು ಹೇಳಿದರು.

ಈ ಸಮಾವೇಶದಲ್ಲಿ ಗ್ರಾ.ಪಂ. ಚುನಾವಣೆಗಳಲ್ಲಿ ಶೇ. 80ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲಲು ಅಗತ್ಯ ಯೋಜನೆಗಳನ್ನು ಅತ್ಯಂತ ವ್ಯವಸ್ಥಿತವಾಗಿ ಕಾರ್ಯಗೊಳಿಸಲಾಗುವುದು. ಬೂತ್‌ ಮಟ್ಟದಲ್ಲಿ ಸಂಘಟನೆಯನ್ನು ಬಲಪಡಿಸುವ ಸಂಬಂಧವೂ ಚರ್ಚೆಗಳು ನಡೆಯಲಿವೆ ಎಂದರು.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಜನಪರ ಯೋಜನೆಗಳು ಹಾಗೂ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ನೇತೃತ್ವದ ರಾಜ್ಯ ಸರ್ಕಾರದ ಬಡವರ ಪರ ಯೋಜನೆಗಳನ್ನು ಮುಂದಿಟ್ಟುಕೊಂಡು ಈ ಚುನಾವಣೆಯಲ್ಲಿ ಮತ ಯಾಚನೆ ಮಾಡುತ್ತೇವೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಯೋಜನೆಗಳನ್ನು ಮನೆ ಮನೆಗೆ ತಲುಪಿಸುವ ನಿಟ್ಟಿನಲ್ಲಿ ನಮ್ಮ ಪಕ್ಷದ ಕಾರ್ಯಕರ್ತರು ಕೆಲಸ ಮಾಡಲಿದ್ದಾರೆ ಎಂದರು.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅದ್ವಿತೀಯವಾಗಿ ಜನಪರ ಯೋಜನೆಗಳನ್ನು ಸಾಕಾರಗೊಳಿಸಿರುವುದು ಗ್ರಾ.ಪಂ. ಚುನಾವಣೆಯ ಗೆಲುವಿಗೆ ಸಹಕಾರಿಯಾಗಲಿದೆ ಎಂದರು.ಗ್ರಾಮ ಪಂಚಾಯ್ತಿಗಳ ಗೆಲುವಿಗಾಗಿ ಪಂಚಸೂತ್ರಗಳನ್ನು ಅಳವಡಿಸಿಕೊಳ್ಳಲಾಗುತ್ತಿದೆ. ಈ ಪಂಚಸೂತ್ರದಲ್ಲಿ ವಾರ್‌ರೂಮ್‌ಗಳ ರಚನೆ, ಕಾಲ್‌ಸೆಂಟರ್‌ಗಳ ಕಾರ್ಯಾರಂಭ, ಪ್ರತಿ ಬೂತ್‌ನಲ್ಲೂ 5 ಜನ ಕಾರ್ಯಕರ್ತರ ಪಂಚರತ್ನ ಎಂಬ ತಂಡದ ರಚನೆ, ಪೇಜ್‌ಪ್ರಮುಖರ ನಿಯುಕ್ತಿ ಹಾಗೂ ಕುಟುಂಬ ಮಿಲನ ಕಾರ್ಯಕ್ರಮಗಳನ್ನು ಅಳವಡಿಸಿಕೊಳ್ಳಲಾಗಿದೆ ಎಂದರು.

ಪಂಚರತ್ನ ತಂಡ ಆಯಾ ಬೂತ್‌ಗಳ ಸರ್ವ ಉಸ್ತುವಾರಿಯನ್ನು ನಿರ್ವಹಿಸಲಿದೆ. ಜಿಲ್ಲೆಯಿಂದ ಬೂತ್‌ವರೆಗಿನ ಸಂಪರ್ಕಕ್ಕಾಗಿ ವಾರ್‌ ರೂಮ್‌ಗಳು, ಪ್ರತಿ ಶಕ್ತಿ ಕೇಂದ್ರದಲ್ಲೂ ಕಾಲ್‌ಸೆಂಟರ್‌ಗಳು ಕಾರ್ಯನಿರ್ವಹಿಸಲಿವೆ. ಪೇಜ್‌ ಪ್ರಮುಖರು ಸಂಬಂಧಿಸಿದ ಪೇಜ್‌ಗಳ ಮತದಾರರು ಮತ್ತು ಕಾರ್ಯಕರ್ತರೊಂದಿಗಿನ ಸಂಪರ್ಕಕ್ಕೆ ಅನುವಾಗಲಿದ್ದಾರೆ. ಈ ಎಲ್ಲ ಕಾರ್ಯಗಳ ಸಮನ್ವಯಕ್ಕೆ ವಾರ್‌ ರೂಮ್‌ಗಳು ಕಾರ್ಯನಿರ್ವಹಿಸಲಿವೆ. ಜತೆಗೆ ಆಯಾ ಶಕ್ತಿ ಕೇಂದ್ರದಲ್ಲಿ ನಡೆಯುವ ಕುಟುಂಬ ಮಿಲನ ಕಾರ್ಯಕ್ರಮಗಳು ಬಿಜೆಪಿ ಪರವಾದ ವಾತಾವರಣ ನಿರ್ಮಾಣವಾಗಲು ಸಹಕಾರಿಯಾಗಲಿದೆ ಎಂದು ಅವರು ವಿವರಿಸಿದರು.

ಸಂಘಟಿತ ಯೋಜನೆ, ಪ್ರಯತ್ನಗಳ ಫಲದಿಂದ ಇಡೀ ರಾಜ್ಯದಲ್ಲಿ ಹಿಂದೆಂದಿಗಿಂತಲೂ ಅತಿ ಹೆಚ್ಚು ಸ್ಥಾನಗಳನ್ನು ಬಿಜೆಪಿ ಗೆಲ್ಲಲಿ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದರು. ಜಿಲ್ಲೆಯಲ್ಲಿ ಕಳೆದ ಬಾರಿ 900 ಸ್ಥಾನಗಳಲ್ಲಿ ಬಿಜೆಪಿ ಬೆಂಬಲಿತ ಸದಸ್ಯರು ಗೆಲುವು ಸಾಧಿಸಿದ್ದರು. ಆದರೆ ಈ ಬಾರಿ ಶೇ. 80ಕ್ಕೂ ಅಧಿಕ ಸ್ಥಾನಗಳಲ್ಲಿ ಗೆಲ್ಲಲು ಪ್ರಯತ್ನಿಸಲಾಗುವುದು ಎಂದರು.

Follow Us:
Download App:
  • android
  • ios