ತುಮಕೂರು, [ಜ.13]:  ಶತಾಯುಷಿ ಸಿದ್ಧಗಂಗಾ ಶ್ರೀಗಳ ಆರೋಗ್ಯ ನಿರೀಕ್ಷಿತ ಮಟ್ಟದಲ್ಲಿ ಚೇತರಿಕೆ ಆಗಿಲ್ಲ.  ಶ್ರೀಗಳ ಶ್ವಾಸಕೋಶದ ಎರಡೂ ಭಾಗದಲ್ಲಿ ಮತ್ತೆ ನೀರು ತುಂಬಿಕೊಂಡಿದ್ದು, ವೈದ್ಯರು ಚಿಕಿತ್ಸೆ ಮುಂದುವರಿಸಿದ್ದಾರೆ.

ಭಾನುವಾರ ಶ್ರೀಗಳ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದ ಬಳಿಕ ವೈದ್ಯ ಡಾ.ಪರಮೇಶ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ಶ್ರೀಗಳ ಶ್ವಾಸಕೋಶದಲ್ಲಿ ತುಂಬಿರುವ ನೀರನ್ನು ಹೊರಕ್ಕೆ ತೆಗೆಯಲಾಗಿದೆ.

ಶ್ರೀಗಳು ಕೈ ಸನ್ನೆ ಮೂಲಕ ಮಾತನಾಡುತ್ತಿದ್ದಾರೆ. ಕಣ್ಣು ಬಿಟ್ಟು ನೋಡುತ್ತಾರೆ. ಕೈಕಾಲುಗಳ ಚಲನ ವಲನ ಇದೆ ಎಂದು ಡಾ. ಪರಮೇಶ್ ವಿವರಿಸಿದರು. 

ಶ್ರೀಗಳಿಗೆ ದ್ರವ ಆಹಾರ ಸೇವಿಸುತ್ತಿದ್ದು, ಪೂಜೆ ಮಾಡಲು ಸಾಧ್ಯವಾಗುತ್ತಿಲ್ಲ. ಕೆಲ ಕಾಲ ಕೃತಕ ಉಸಿರಾಟದ ಸಾಧನ ತೆರವುಗೊಳಿಸಿ ಸಹಜ ಉಸಿರಾಟಕ್ಕೆ ಅನುವು ಮಾಡಿಕೊಡಲಾಗುತ್ತಿದೆ.

ಎರಡು ಗಂಟೆಗಳ ಕಾಲ ಸಹಜ ಉಸಿರಾಟದ ನಂತರ ಮತ್ತೆ ತೊಂದರೆ ಆದಾಗ ಕೃತಕ ಉಸಿರಾಟ ಸಾಧನ ಅಳವಡಿಸುತ್ತಿದ್ದೇವೆ ಎಂದು ತಿಳಿಸಿದರು.

ದೇಹದಲ್ಲಿನ ಪ್ರೋಟೀನ್ ಅಂಶ 2.6 ಮಿಲಿಗ್ರಾಮ್ ಗೆ ಇಳಿಕೆಯಾಗಿದೆ. ನಿನ್ನೆ [ಶನಿವಾರ] ಪ್ರೋಟಿನ್ ಅಂಶ 3.1 ಇತ್ತು. ಆದರೂ, ಶ್ರೀಗಳು ಚಿಕಿತ್ಸೆಗೆ ಸ್ಪಂದಿಸುತ್ತಿದ್ದು, ಭಕ್ತರು ಆತಂಕಗೊಳ್ಳುವ ಅಗತ್ಯವಿಲ್ಲ ಅಂತ ವೈದ್ಯರು ಸ್ಪಷ್ಟಪಡಿಸಿದ್ದಾರೆ.