ತುಮಕೂರು 250 ಪೌರಕಾರ್ಮಿಕರ ಸೇವೆ ಕಾಯಂ
ತುಮಕೂರು ನಗರ ಪಾಲಿಕೆಯಲ್ಲಿ ದಿನಗೂಲಿ ಆಧಾರದ ಮೇಲೆ ಕಾರ್ಯ ನಿರ್ವಹಿಸುತ್ತಿದ್ದ 250 ಪೌರಕಾರ್ಮಿಕರ ಸೇವೆ ಕಾಯಂಗೊಳಿಸುವಂತೆ ಆದೇಶಿಸುವ ಮೂಲಕ ಕಳೆದ 20 ವರ್ಷಗಳಿಂದ ನಡೆಯುತ್ತಿದ್ದ ಕಾನೂನು ಸಮರಕ್ಕೆ ಹೈಕೋರ್ಚ್ ಅಂತಿಮ ತೆರೆ ಎಳೆದಿದೆ.
ಬೆಂಗಳೂರು: ತುಮಕೂರು ನಗರ ಪಾಲಿಕೆಯಲ್ಲಿ ದಿನಗೂಲಿ ಆಧಾರದ ಮೇಲೆ ಕಾರ್ಯ ನಿರ್ವಹಿಸುತ್ತಿದ್ದ 250 ಪೌರಕಾರ್ಮಿಕರ ಸೇವೆ ಕಾಯಂಗೊಳಿಸುವಂತೆ ಆದೇಶಿಸುವ ಮೂಲಕ ಕಳೆದ 20 ವರ್ಷಗಳಿಂದ ನಡೆಯುತ್ತಿದ್ದ ಕಾನೂನು ಸಮರಕ್ಕೆ ಹೈಕೋರ್ಚ್ ಅಂತಿಮ ತೆರೆ ಎಳೆದಿದೆ.
ಮುಂದಿನ ಮೂರು ತಿಂಗಳಲ್ಲಿ ತುಮಕೂರು ನಗರ ಪಾಲಿಕೆಯು (ಹಿಂದಿನ ನಗರಸಭೆ) ಪ್ರಕರಣದಲ್ಲಿ ವ್ಯಾಜ್ಯದಾರರಾದ 250 ಪೌರ ಕಾರ್ಮಿಕರ ಸೇವೆಯನ್ನು ಅವರು ಕೆಲಸಕ್ಕೆ ಸೇರಿದ ದಿನಾಂಕದಿಂದ ಪೂರ್ವಾನ್ವಯವಾಗುವಂತೆ ಕಾಯಂಗೊಳಿಸಬೇಕು. ಅವರ ಕೆಲಸಕ್ಕೆ ಸಮಾನ ವೇತನ ಹಾಗೂ ಹಿಂಬಾಕಿ ಪಾವತಿಸಬೇಕು. ಅಲ್ಲದೆ, ಎಲ್ಲ ಶಾಸನಬದ್ಧ ಸೌಲಭ್ಯ ಕಲ್ಪಿಸಬೇಕು ಎಂದು ಹೈಕೋರ್ಚ್ ಆದೇಶಿಸಿದೆ.
ತುಮಕೂರು ನಗರ ಪಾಲಿಕೆ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್ ಗೋವಿಂದ ರಾಜ್ ಅವರ ನ್ಯಾಯಪೀಠ ಈ ಆದೇಶ ಮಾಡಿದೆ.
ನಗರ ಪಾಲಿಕೆಯಲ್ಲಿ 20 ವರ್ಷಗಳಿಂದ ಪೌರ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಈ 20 ವರ್ಷವನ್ನು ತಾತ್ಕಾಲಿಕ ಸಮಯ ಎಂದು ಪರಿಗಣಿಸಲಾಗದು. ಗುತ್ತಿಗೆದಾರರು ಬದಲಾದರೂ ಪೌರ ಕಾರ್ಮಿಕರು ಬದಲಾಗಿಲ್ಲ. ಅವರ ಹಿತಾಸಕ್ತಿ ಹಾಗೂ ಹಕ್ಕುಗಳನ್ನು ನ್ಯಾಯಾಲಯ ರಕ್ಷಣೆ ಮಾಡಬೇಕಿದೆ. ಕಡಿಮೆ ಸಂಬಳ ನೀಡುವ ಕುತಂತ್ರದಿಂದ ಪೌರ ಕಾರ್ಮಿಕರನ್ನು ಗುತ್ತಿಗೆ ಆಧಾರದ ಮೇಲೆ ನೇಮಿಕೊಳ್ಳಲಾಗಿದೆ ಎಂದು ಪಾಲಿಕೆಯ ನಡೆಯನ್ನು ಹೈಕೋರ್ಚ್ ಕಟುವಾಗಿ ಟೀಕಿಸಿದೆ.
ಕಾರ್ಮಿಕರ ಕಾನೂನು ಸಮರಕ್ಕೆ 20 ವರ್ಷ:
2002ರ ವೇಳೆಗೆ ತುಮಕೂರು ನಗರಸಭೆಯಲ್ಲಿ 250 ಪೌರ ಕಾರ್ಮಿಕರು ದಿನಗೂಲಿ ಆಧಾರದಲ್ಲಿ ದುಡಿಯುತ್ತಿದ್ದರು. ಸೇವೆ ಕಾಯಂಗೊಳಿಸಲು ಕೋರಿ ನಗರಸಭೆ ಪೌರ ಕಾರ್ಮಿಕರ ಸಂಘ ಸಲ್ಲಿಸಿದ್ದ ಮನವಿಯನ್ನು ಸರ್ಕಾರ 2002ರ ನವೆಂಬರ್‌ನಲ್ಲಿ ಕೈಗಾರಿಕಾ ನ್ಯಾಯಾಧಿಕರಣಕ್ಕೆ ಶಿಫಾರಸು ಮಾಡಿತ್ತು.
ಮೊದಲಿಗೆ ಪೌರಕಾರ್ಮಿಕರು ಸೇವೆ ಕಾಯಂಗೆ ಅರ್ಹರಲ್ಲ ಎಂದು ನ್ಯಾಯಾಧಿಕರಣ 2006ರ ಜು.4ರಂದು ಆದೇಶಿಸಿತ್ತು. ಈ ಆದೇಶ ಸಲ್ಲಿಸಿದ್ದ ಪೌರಕಾರ್ಮಿಕರ ಸಂಘದ ಅರ್ಜಿಯನ್ನು ಹೈಕೋರ್ಚ್ ಏಕ ಸದಸ್ಯ ನ್ಯಾಯಪೀಠ 2009ರಲ್ಲಿ ವಜಾಗೊಳಿಸಿತ್ತು. ಆದರೆ, ಸಂಘದ ಮೇಲ್ಮನವಿಯನ್ನು ಪರಿಗಣಿಸಿದ್ದ ವಿಭಾಗೀಯ ಪೀಠ, ಪ್ರಕರಣವನ್ನು ಮತ್ತೊಮ್ಮೆ ಪರಿಶೀಲಿಸುವಂತೆ ನ್ಯಾಯಾಧಿಕರಣಕ್ಕೆ ನಿರ್ದೇಶಿಸಿತ್ತು.
ಇದರಿಂದ ಮತ್ತೆ ಹೊಸದಾಗಿ ಪ್ರಕರಣದ ವಿಚಾರಣೆ ನಡೆಸಿದ್ದ ನ್ಯಾಯಾಧಿಕರಣ 2017ರ ಸೆ. 26ರಂದು ದಿನಗೂಲಿ ನೌಕರರ ಸೇವೆ ಕಾಯಂಗೊಳಿಸದೆ ಕೆಲಸ ಮಾಡಿಸಿಕೊಳ್ಳುತ್ತಿರುವುದು, ಸಮಾನ ಕೆಲಸಕ್ಕೆ ಸಮಾನ ವೇತನ ಪಾವತಿಸದಿರುವುದು, ಪೌರ ಕಾರ್ಮಿಕರಿಗೆ ಪ್ರತಿ ವರ್ಷ ಸಮವಸ್ತ್ರ, ಪಾದರಕ್ಷೆ, ಸುರಕ್ಷಿತ ಕವಚ ನೀಡದಿರುವುದು ನ್ಯಾಯಸಮ್ಮತವಲ್ಲ. ಆದ್ದರಿಂದ ಅವರನ್ನು ನೌಕರಿಗೆ ಸೇರಿದ ದಿನದಿಂದ ಪೂರ್ವಾನ್ವಯವಾಗುವಂತೆ ಕಾಯಂಗೊಳಿಸಬೇಕು. ಅವರ ಶ್ರೇಣಿಯ ಉದ್ಯೋಗಕ್ಕೆ ಸಮಾನ ವೇತನ, ಹಿಂಬಾಕಿ, ಎಲ್ಲ ಶಾಸನಬದ್ಧ ಪ್ರಯೋಜನ, ಸೌಲಭ್ಯ ಹಾಗೂ ಪರಿಹಾರ ನೀಡಬೇಕು. ಗ್ಲೌಸ್, ಶೂ, ಸಮವಸ್ತ್ರ, ಜಾಕೆಟ್ ಹಾಗೂ ಹೆಲ್ಮೆಟ್ ಸೇರಿದಂತೆ ಸುರಕ್ಷಿತ ಸಾಮಗ್ರಿ ಒದಗಿಸಬೇಕು. ನಿವೃತ್ತಿಯಾದ ಕಾರ್ಮಿಕನಿಗೆ ಎಲ್ಲ ಹಣಕಾಸು ಪ್ರಯೋಜನ ಕಲ್ಪಿಸಬೇಕು ಎಂದು ನಿರ್ದೇಶಿಸಿತ್ತು. ಈ ಆದೇಶ ಪ್ರಶ್ನಿಸಿ 2018ರಲ್ಲಿ ತುಮಕೂರು ನಗರ ಪಾಲಿಕೆ ಹೈಕೋರ್ಚ್‌ಗೆ ತಕರಾರು ಅರ್ಜಿ ಸಲ್ಲಿಸಿತ್ತು. ಆ ಅರ್ಜಿಯನ್ನು ಇದೀಗ ವಜಾಗೊಳಿಸಿರುವ ಹೈಕೋರ್ಚ್, ನ್ಯಾಯಾಧಿಕರಣದ ಆದೇಶ ಜಾರಿಗೆ ಪಾಲಿಕೆಗೆ ಮೂರು ತಿಂಗಳು ಗಡುವು ನೀಡಿದೆ.
ಕಾಯಂ ಆಗಬೇಕಿದ್ದವರಲ್ಲಿ18 ಕಾರ್ಮಿಕರು ಸಾವು
ಕಾನೂನು ಸಮರದಲ್ಲಿ ಗೆದ್ದ 250 ಪೌರ ಕಾರ್ಮಿಕರಲ್ಲಿ 157 ಮಂದಿ ಮಾತ್ರ ಸದ್ಯ ಕೆಲಸ ಮಾಡುತ್ತಿದ್ದಾರೆ. ಅವರಿಗೆ ಪಾಲಿಕೆಯೇ ನೇರವಾಗಿ ವೇತನ ಪಾವತಿಸುತ್ತಿದೆ. 18 ಮಂದಿ ಮೃತಪಟ್ಟಿದ್ದಾರೆ. 47 ಮಂದಿ ಈಗಾಗಲೇ ಕಾಯಂಗೊಂಡಿದ್ದಾರೆ. ಸದ್ಯ ಪಾಲಿಕೆಯಲ್ಲಿ ಒಟ್ಟು 254 ಕಾಯಂ ಪೌರ ಕಾರ್ಮಿಕರ ಉದ್ಯೋಗವಿದ್ದು, 107 ಕೆಲಸ ಮಾಡುತ್ತಿದ್ದಾರೆ. ಅದರಲ್ಲಿ ಕಾನೂನು ಹೋರಾಟದಲ್ಲಿ ಜಯಗಳಿಸಿದ 47 ಮಂದಿ ಕಾರ್ಮಿಕರಿದ್ದಾರೆ. ಉಳಿದಂತೆ 147 ಉದ್ಯೋಗ ಖಾಲಿಯಿದೆ.