ತುಮಕೂರು : 5 ರೈಲ್ವೆ ಮೇಲ್ಸೇತುವೆ ಕಾಮಗಾರಿಗೆ ಅನುಮೋದನೆ
ನಗರದ ವಿವಿಧ ರೈಲ್ವೆ ಗೇಟ್‌ಗಳ ಭಾಗದಲ್ಲಿ ಮೇಲ್ಸೇತುವೆ ನಿರ್ಮಾಣ ಕಾಮಗಾರಿಗೆ ಕೇಂದ್ರ ಸರ್ಕಾರ ಅನುಮೋದನೆ ನೀಡಿರುವುದನ್ನು ಸ್ವಾಗತಿಸಿ, ಸ್ಥಳಿಯ ನಾಗರೀಕರು ಮಂಗಳವಾರ ಸಿಹಿ ವಿತರಿಸಿ, ಪಟಾಕಿ ಸಿಡಿಸಿ ಸಂಭ್ರಮ ಆಚರಿಸಿದರು.
ತುಮಕೂರು : ನಗರದ ವಿವಿಧ ರೈಲ್ವೆ ಗೇಟ್‌ಗಳ ಭಾಗದಲ್ಲಿ ಮೇಲ್ಸೇತುವೆ ನಿರ್ಮಾಣ ಕಾಮಗಾರಿಗೆ ಕೇಂದ್ರ ಸರ್ಕಾರ ಅನುಮೋದನೆ ನೀಡಿರುವುದನ್ನು ಸ್ವಾಗತಿಸಿ, ಸ್ಥಳಿಯ ನಾಗರೀಕರು ಮಂಗಳವಾರ ಸಿಹಿ ವಿತರಿಸಿ, ಪಟಾಕಿ ಸಿಡಿಸಿ ಸಂಭ್ರಮ ಆಚರಿಸಿದರು.
ನಗರದ ಬಟವಾಡಿ ಹಾಗೂ ಗೋಕುಲ ರೈಲ್ವೆ ಗೇಟ್ ಬಳಿ ಸ್ಥಳೀಯ ನಾಗರೀಕರು, ಬಿಜೆಪಿ ಮುಖಂಡರು ಸಮಾಗಮಗೊಂಡು ಈ ಕಾರ್ಯಕ್ಕೆ ನೆರವಾದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಕೇಂದ್ರ ರೈಲ್ವೆ ಖಾತೆ ಸಚಿವ ಅಶ್ವಿನ್ ವೈಷ್ಣವ್ ಅವರಿಗೆ ಧನ್ಯವಾದ ತಿಳಿಸಿದರು.
ಕೇಂದ್ರ ಸರ್ಕಾರದ ಜಲಶಕ್ತಿ ಹಾಗೂ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣನವರು ಅಧಿಕಾರ ವಹಿಸಿಕೊಂಡ 35 ದಿನಗಳಲ್ಲೇ ತುಮಕೂರು ನಗರದ ಹಲವು ವರ್ಷಗಳ ಬೇಡಿಕೆಯಾದ 5 ರೈಲ್ವೆ ಮೇಲ್ಸೇತುವೆ ಕಾಮಗಾರಿಗಳಿಗೆ ಅನುಮೋದನೆ ದೊರಕಿದೆ. ಇದು ಸಚಿವರ ಇಚ್ಛಾಶಕ್ತಿಗೆ ಕಾರಣವೆಂದು ನಾಗರೀಕರು ಅಭಿಪ್ರಾಯ ವ್ಯಕ್ತಪಡಿಸಿದರು. ಸಚಿವ ವಿ.ಸೋಮಣ್ಣ ಹಾಗೂ ಈ ಕಾರ್ಯಕ್ಕೆ ಪ್ರಯತ್ನಿಸಿದ ಸ್ಥಳೀಯ ಶಾಸಕ ಜಿ.ಬಿ.ಜ್ಯೋತಿಗಣೇಶ್ ಅವರ ಪರ ಜೈಕಾರ ಕೂಗಿ ನಾಗರೀಕರು ಸಂಭ್ರಮಿಸಿದರು.
ಶಾಸಕ ಜ್ಯೋತಿ ಗಣೇಶ್ ಮಾತನಾಡಿ ತುಮಕೂರು ನಗರದ ನಾಗರೀಕರ ಬಹುದಿನಗಳ ಬೇಡಿಕೆಯಾದ ಬಡ್ಡಿಹಳ್ಳಿ ರೈಲ್ವೇ ಮೇಲ್ಸೇತುವೆ, ಬಟವಾಡಿ ರೈಲ್ವೇ ಮೇಲ್ಸೇತುವೆಗಳ ಅನುಮೋದನೆಯ ಜೊತೆಗೆ ಶೆಟ್ಟಿಹಳ್ಳಿ ಗೇಟ್ ಬಳಿ ಪಾದಚಾರಿ ಸಬ್ ವೇ, ಭೀಮಸಂದ್ರದ ರೈಲ್ವೇ ಕೆಳ ಸೇತುವೆ (ಲಘು ವಾಹನಗಳ ಸಂಚಾರಕ್ಕಾಗಿ) ಕಾಮಗಾರಿಗಳಿಗೆ ಈಗಾಗಲೇ ಮಾನ್ಯ ಸಚಿವರ ಸೂಚನೆಯ ಮೇರೆಗೆ ಅಧಿಕಾರಿಗಳೊಂದಿಗೆ ಸ್ಥಳ ಪರಿಶೀಲನೆ ನಡೆಸಿ ಕಾಮಗಾರಿ ಕೈಗೊಳ್ಳಲು ಕ್ರಮ ಕೈಗೊಳ್ಳಲಾಗಿದೆ. ಈ ಎಲ್ಲಾ ಕಾಮಗಾರಿಗಳಿಗೂ ಅನುಮೋದನೆ ನೀಡಿದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು, ಕೇಂದ್ರ ರೈಲ್ವೆ ಸಚಿವ ಅಶ್ವಿನ್ ವೈಷ್ಣವ್ ಹಾಗೂ 35 ದಿನಗಳಲ್ಲೇ ಸಾಧನೆ ಮಾಡಿದ ರೈಲ್ವೆ ಮತ್ತು ಜಲಶಕ್ತಿ ರಾಜ್ಯ ಖಾತೆ ಕೇಂದ್ರ ಸಚಿವರಾದ ವಿ.ಸೋಮಣ್ಣ ಅವರಿಗೆ ನಗರದ ನಾಗರೀಕರ ಪರವಾಗಿ ತುಂಬು ಹೃದಯದ ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದರು.
ಈ ವೇಳೆ ರಾಜ್ಯ ಬಿಜೆಪಿ ರೈತ ಮೋರ್ಚಾ ಮಾಜಿ ಪ್ರಧಾನ ಕಾರ್ಯದರ್ಶಿ ಎಸ್.ಶಿವಪ್ರಸಾದ್ ಮಾತನಾಡಿ, ರೈಲ್ವೆ ಗೇಟ್ ತೆರವು ಮಾಡಿ ಮೇಲು ಸೇತುವೆ ನಿರ್ಮಾಣದ ಅಗತ್ಯತೆ ಕಂಡ ಕೇಂದ್ರ ಸಚಿವ ವಿ.ಸೋಮಣ್ಣ ಹಾಗೂ ಶಾಸಕ ಜಿ.ಬಿ.ಜ್ಯೋತಿಗಣೇಶ್ ಸೇತುವೆ ನಿರ್ಮಾಣಕ್ಕಾಗಿ ಕಾಳಜಿವಹಿಸಿದರು. ಇದಕ್ಕೆ ಕೇಂದ್ರ ಸರ್ಕಾರ ಸ್ಪಂದಿಸಿ ಮೇಲ್ಸೆತುವೆ ನಿರ್ಮಾಣಕ್ಕೆ ಅನುಮೋದನೆ ನೀಡಿದೆ ಎಂದು ಹೇಳಿದರು.
ಮುಖಂಡರ ಎಸ್.ಪಿ.ಚಿದಾನಂದ್ ಮಾತನಾಡಿ, ವೇಗವಾಗಿ ಬೆಳೆಯುತ್ತಿರುವ ತುಮಕೂರು ನಗರದಲ್ಲಿ ರೈಲ್ವೆ ಮೇಲ್ಸೇತುವೆ ಹಾಗೂ ಕೆಳ ಸೇತುವೆಗಳ ನಿರ್ಮಾಣ ಅತ್ಯಗತ್ಯವಾಗಿದ್ದು, ಸಚಿವ ಸೋಮಣ್ಣ ಹಾಗೂ ಶಾಸಕ ಜ್ಯೋತಿಗಣೇಶ್ ಅವರು ಈ ಕಾರ್ಯದಲ್ಲಿ ಶ್ರಮಿಸುತ್ತಿದ್ದಾರೆ ಎಂದು ಅಭಿನಂದನೆ ಸಲ್ಲಿಸಿದರು.
ಮುಖಂಡರಾದ ಜಿಲ್ಲಾ ಬಿಜೆಪಿ ಕಾರ್ಯದರ್ಶಿ ಹೆಚ್.ಎಂ.ರವೀಶಯ್ಯ, ಎಂ.ವೈ.ರುದ್ರೇಶ್, ಸಿದ್ಧರಾಮೇಶ್ವರ ಬಡಾವಣೆ ನಾಗರೀಕ ಹಿತರಕ್ಷಣಾ ಸಮಿತಿ ಕಾರ್ಯದರ್ಶಿ ಜಯಪ್ರಕಾಶ್, ಮುಖಂಡರಾದ ಜಗದೀಶ್, ಪ್ರಕಾಶ್ ಭಾರಧ್ವಜ್, ಹನುಮಂತಪ್ಪ, ಕೆ.ಎಸ್.ಕುಮಾರ್, ಮಸೀದಿಯ ಮುತುವಲ್ಲಿ ರಹಮತ್ ಉಲ್ಲಾ ಖಾನ್, ನಿವೃತ್ತ ಪ್ರಾಚಾರ್ಯ ನರಸಿಂಹನ್, ಕೃಷ್ಣಮೂರ್ತಿ, 32 ನೇ ವಾರ್ಡ್ ಹೆಚ್.ಎಂ.ರವೀಶ್, ರುದ್ರೇಶ್, ನಟರಾಜ್, ರುದ್ರಪ್ಪ, ಮರಿಬಸಪ್ಪ, ಉಮಾಮಹೇಶ್, ಅಂಗಡಿ ಮಂಜುನಾಥ್, ಹೆಚ್.ಎಂ.ಟಿ.ಆಂಜನಪ್ಪ, ನಿಶ್ಚಲ್, ಚೇತನ್, ಮೂರ್ತಿ ಮೊದಲಾದವರು ಭಾಗವಹಿಸಿದ್ದರು.
ತುಮಕೂರು ನಗರ ಹಾಗೂ ಜಿಲ್ಲೆಯ ವಿವಿಧ ಐದು ರೈಲ್ವೆ ಮೇಲ್ಸೇತುವೆಗಳಿಗೆ ರೈಲ್ವೆ ಸಚಿವಾಲಯ ಅನುಮೋದನೆ ನೀಡಿ ಆದೇಶ ಹೊರಡಿಸಿದೆ. 350 ಕೋಟಿ ರೂ. ಅಂದಾಜು ವೆಚ್ಚದಲ್ಲಿ ೫ ಮೇಲ್ಸೇತುವೆಗಳ ಕಾಮಗಾರಿಯನ್ನು ರೈಲ್ವೆ ಇಲಾಖೆ ಕೈಗೆತ್ತಿಕೊಳ್ಳಲಿದೆ. ನಗರದ ಬಡ್ಡಿಹಳ್ಳಿ ಗೇಟ್, ಬಟವಾಡಿ ಗೇಟ್ ಅಲ್ಲದೆ, ಕ್ಯಾತ್ಸಂದ್ರದ ಮೈದಾಳ ಗೇಟ್, ಅರೆಯೂರು ಗೇಟ್, ನಿಟ್ಟೂರು ಬಳಿಯ ಗೇಟ್‌ಗಳನ್ನು ತೆರವು ಮಾಡಿ ಇಲ್ಲಿ ರೈಲ್ವೆ ಮೇಲ್ಸೇತುವೆ ಮಾಡಲಾಗುತ್ತಿದೆ.