ತುಮಕೂರು ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಅರಣ್ಯಪಾಲಕ ನವೀನ್ ಕುಮಾರ್ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಹಾಸನ ಜಿಲ್ಲೆಯವರಾದ ನವೀನ್ ಅವರಿಗೆ ಪತ್ನಿ ಮತ್ತು ಇಬ್ಬರು ಮಕ್ಕಳಿದ್ದಾರೆ.

ತುಮಕೂರು (ಜೂ.18): ಕರ್ನಾಟಕದ ದಟ್ಟ ಕಾನನದಲ್ಲಿ ಸುತ್ತಾಡಿ, ಕಾಡು ಪ್ರಾಣಿಗಳಿಗೂ ಜಗ್ಗದ ಗಟ್ಟಿ ಗುಂಡಿಗೆಯ ಅರಣ್ಯ ಪಾಲಕ ಸೇವೆಯಲ್ಲಿದ್ದಾಗಲೇ ಹೃದಯಾಘಾತಕ್ಕೆ ಬಲಿಯಾಗಿದ್ದಾರೆ. ತೀವ್ರ ಎದೆನೋವು ಕಾಣಿಸಿಕೊಂಡು ಕುಸಿದು ಬಿದ್ದಿದ್ದು, ಸ್ಥಳದಲ್ಲಿಯೇ ಸಾವಿಗೀಡಾದ ಘಟನೆ ನಡೆದಿದೆ.,

ನವೀನ್‌ಕುಮಾರ್ (32) ಸಾವನ್ನಪ್ಪಿದ ಗಸ್ತು ಅರಣ್ಯ ಪಾಲಕ ಆಗಿದ್ದಾನೆ. ತುಮಕೂರು ಜಿಲ್ಲೆ, ಶಿರಾ ತಾಲೂಕಿನ ಬುಕ್ಕಾಪಟ್ಟಣದ ಅರಣ್ಯ ವಲಯದ ದಸೂಡಿ ವ್ಯಾಪ್ತಿಯಲ್ಲಿ ನವೀನ್ ಕೆಲಸ ಮಾಡುತ್ತಿದ್ದರು. ಮೂಲತಃ ಹಾಸನ ಜಿಲ್ಲೆ, ಅರಸೀಕೆರೆ ತಾಲೂಕಿನ ಸಿಂಗಟಗೆರೆ ನಿವಾಸಿಯಾಗಿರುವ ನವೀನ್ ಕುಮಾರ್‌ಗೆ ಹೆಂಡತಿ ಹಾಗೂ ಇಬ್ಬರು ಪುಟ್ಟ ಮಕ್ಕಳು ಇದ್ದಾರೆ. ಇತ್ತೀಚೆಗಷ್ಟೇ ತುಮಕೂರಿಗೆ ವರ್ಗಾವಣೆಯಾಗಿದ್ದರು. ಆದರೆ, ಮನೆಯಲ್ಲಿದ್ದಾಗ ಎದೆನೋವು ಕಾಣಿಸಿಕೊಂಡಿದೆ. ಕೂಡಲೇ ಕುಟುಂಬಸ್ಥರು ಆಸ್ಪತ್ರೆಗೆ ಕರೆದೊಯ್ದರಾದರೂ ಅಷ್ಟರಲ್ಲಿ ನವೀನ್ ಪ್ರಾಣಪಕ್ಷಿ ಹಾರಿಹೋಗಿತ್ತು.

ಇನ್ನು ನವೀನ್ ಅವರ ಮೃತದೇಹವನ್ನು ಪಡೆದ ಕುಟುಂಬ ಸದಸ್ಯರು ಹಾಸನ ಜಿಲ್ಲೆಯ ಸ್ವಗ್ರಾಮದಲ್ಲಿ ಅಂತ್ಯಕ್ರಿಯೆ ನಡೆಸಲಿದ್ದಾರೆ. ತುಮಕೂರು ಜಿಲ್ಲೆಯ ಹುಳಿಯಾರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ನವೀನ್‌ಕುಮಾರ್ ಅವರು ಸಕಲೇಶಪುರ ತಾಲ್ಲೂಕಿನ ಯಸಳೂರು ವಲಯ ಸೇರಿದಂತೆ ಹಲವು ಅರಣ್ಯ ವಲಯಗಳಲ್ಲಿ ಕರ್ತವ್ಯ ನಿರ್ವಹಿಸಿದ್ದ ಅನುಭವಿ ಅಧಿಕಾರಿ. ತಮ್ಮ ಕಿರಿಯ ವಯಸ್ಸಿನಲ್ಲಿಯೇ ಉತ್ತಮ ಸೇವಾ ಮನೋಭಾವದಿಂದ ಇಲಾಖೆಯ ಮೆಚ್ಚುಗೆ ಗಳಿಸಿದ್ದರು. ಈ ಅಕಾಲಿಕ ನಿಧನದಿಂದಾಗಿ ಕುಟುಂಬ, ಸಹೋದ್ಯೋಗಿಗಳು ಹಾಗೂ ಊರವರು ಆಘಾತಕ್ಕೆ ಒಳಗಾಗಿದ್ದು, ನವೀನ್‌ಕುಮಾರ್ ಅವರ ನಿಧನವನ್ನು ಅರಣ್ಯ ಇಲಾಖೆಯೂ ಅತ್ಯಂತ ದುಃಖದೊಂದಿಗೆ ಸ್ವೀಕರಿಸಿದೆ.