ತುಮಕೂರಿನ ಹೊರಪೇಟೆ ಮಠದ ಆನೆ 'ಲಕ್ಷ್ಮಿ'ಯ ನಿರ್ವಹಣೆ ಕುರಿತು ಅರಣ್ಯ ಇಲಾಖೆ ವಿಧಿಸಿರುವ ಕಟ್ಟುನಿಟ್ಟಿನ ನಿರ್ಬಂಧಗಳನ್ನು ಆರ್‌ಟಿಐ ಮೂಲಕ ಬಹಿರಂಗಪಡಿಸಲಾಗಿದೆ. ಮತ್ತೊಂದೆಡೆ, ನೆಲಮಂಗಲದ ಬೊಮ್ಮನಹಳ್ಳಿ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಮೈದಾಹಿಟ್ಟು ಸಾಗಿಸುತ್ತಿದ್ದ ಕ್ಯಾಂಟರ್ ಚಾಲಕನ ನಿಯಂತ್ರಣ ತಪ್ಪಿ ಹಳ್ಳಕ್ಕೆ ಉರುಳಿ ಬಿದ್ದಿದೆ.

ತುಮಕೂರು: ಪ್ರತಿನಿತ್ಯ ತುಮಕೂರು ನಗರದ ತುಂಬಾ ಸುತ್ತಾಡುತ್ತಾ, ಸಭೆ-ಸಮಾರಂಭಗಳಲ್ಲಿ ಕಾಣಿಸಿಕೊಳ್ಳುತ್ತಾ, ನಗರದ ಮನೆಮಾತಾಗಿರುವ ಹೊರಪೇಟೆ ಕರಿಬಸವಸ್ವಾಮಿ ಮಠದ ಹೆಣ್ಣಾನೆ “ಲಕ್ಷ್ಮಿ”ಯ ಯೋಗಕ್ಷೇಮಕ್ಕೆ ಸಂಬಂಧಿಸಿದಂತೆ ಅರಣ್ಯ ಇಲಾಖೆ ಅನೇಕ ನಿರ್ಬಂಧಗಳನ್ನು ವಿಧಿಸಿರುವ ಬಗ್ಗೆ ತುಮಕೂರು ನಗರದ ಸಾಮಾಜಿಕ ಕಾರ್ಯಕರ್ತ ಆರ್. ವಿಶ್ವನಾಥನ್ ಅವರು ಆರ್‌ಟಿಐ ಮೂಲಕ ಮಾಹಿತಿಯನ್ನು ಸಂಗ್ರಹಿಸಿದ್ದಾರೆ.

ಆನೆಯನ್ನು ದೀರ್ಘಕಾಲ ಬಿಸಿಲಿನಲ್ಲಿ ನಿಲ್ಲಿಸುವಂತಿಲ್ಲ. ಟಾರ್ ರಸ್ತೆಯಲ್ಲಿ ನಡೆಸುವಂತಿಲ್ಲ. ಜನಸಂದಣಿಯ ಸ್ಥಳಗಳಿಗೆ ಕರೆದೊಯ್ಯುವಂತಿಲ್ಲ. ಭಿಕ್ಷಾಟನೆಗೆ ಬಳಸುವಂತಿಲ್ಲ. ಅಸಮಂಜಸ ಅಲಂಕಾರಿಕ ಉಡುಪು ಹಾಕುವಂತಿಲ್ಲ ಎಂಬುದೂ ಸೇರಿದಂತೆ ಆನೆಯ ವಾಸಸ್ಥಳದಿಂದ ಹಿಡಿದು, ಅದರ ನೀರು-ಆಹಾರ-ನೈರ್ಮಲ್ಯ, ಆರೋಗ್ಯ ತಪಾಸಣೆ, ಆನೆಯ ಸಾಗಾಣಿಕೆ, ಆನೆಯ ಬಳಕೆಗೆ ಸಂಬಂಧಿಸಿದಂತೆ ಅರಣ್ಯ ಇಲಾಖೆಯು ಹಲವು ಸ್ಪಷ್ಟ ನಿಬಂಧನೆಗಳನ್ನು ವಿಧಿಸಿರುವುದು ಈ ಮಾಹಿತಿಯ ಮೂಲಕ ಬೆಳಕಿಗೆ ಬಂದಿದೆ ಎಂದು ಅವರು ತಿಳಿಸಿದ್ದಾರೆ.

ಇತ್ತೀಚೆಗೆ ಶಿವಮೊಗ್ಗದ ದಸರಾ ಮೆರವಣಿಗೆಯ ಸಂದರ್ಭದಲ್ಲಿ “ಸೋಮಣ್ಣ” ಎಂಬ ಆನೆಯು ಅಂಬಾರಿ ಸಮೇತ ಇದ್ದಕ್ಕಿದ್ದಂತೆ ದಿಕ್ಕಾಪಾಲಾಗಿ ಓಡಿ ಅಪಾರ ಹಾನಿ ಉಂಟಾದ ಘಟನೆಯ ಹಿನ್ನೆಲೆಯಲ್ಲಿ, ತುಮಕೂರಿನ “ಲಕ್ಷ್ಮಿ” ಆನೆಯ ಬಗ್ಗೆ ಅರಣ್ಯ ಇಲಾಖೆ ವಿಧಿಸಿರುವ ನಿರ್ಬಂಧಗಳ ಬಗ್ಗೆ ತಾವು 2023 ರಲ್ಲಿ ಆರ್.ಟಿ.ಐ. ಮೂಲಕ ಪಡೆದಿದ್ದ ಮಾಹಿತಿಗಳನ್ನು ಇದೀಗ ಸಾರ್ವಜನಿಕರ ಮಾಹಿತಿಗಾಗಿ ಹಂಚಿಕೊಳ್ಳುತ್ತಿರುವುದಾಗಿ ಆರ್.ವಿಶ್ವನಾಥನ್ ಹೇಳಿದ್ದಾರೆ.

ಚಾಲಕನ ನಿಯಂತ್ರಣ ತಪ್ಪಿ ಹಳ್ಳಕ್ಕೆ ಪಲ್ಟಿಯಾದ ಕ್ಯಾಂಟರ್

ದಾಬಸ್‍ಪೇಟೆ: ಚಾಲಕನ ನಿಯಂತ್ರಣ ತಪ್ಪಿ ಕ್ಯಾಂಟರೊಂದು ಹಳ್ಳಕ್ಕೆ ಪಲ್ಟಿ ಹೊಡೆದಿರುವ ಘಟನೆ ನೆಲಮಂಗಲ ತಾಲೂಕಿನ ಬೊಮ್ಮನಹಳ್ಳಿ ರಾಷ್ಟ್ರೀಯ ಹೆದ್ದಾರಿ-48ರಲ್ಲಿ ನಡೆದಿದೆ. ತುಮಕೂರು ಕಡೆಯಿಂದ ಬೆಂಗಳೂರು ಕಡೆಗೆ ಮೈದಾಹಿಟ್ಟು ಮೂಟೆಗಳನ್ನು ತುಂಬಿಕೊಂಡು ಹೋಗುತ್ತಿದ್ದ ಕ್ಯಾಂಟರ್ ವಾಹನ ಬೊಮ್ಮನಹಳ್ಳಿ ಬಳಿ ರಸ್ತೆ ಪಕ್ಕಕ್ಕೆ ವಾಹನ ನಿಲ್ಲಿಸಲು ಚಾಲಕ ಎಳೆದಿದ್ದಾನೆ. ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಡೆಯುತ್ತಿರುವ ಕಾರಣ ರಸ್ತೆ ಪಕ್ಕದಲ್ಲಿ ಹಾಕಿದ್ದ ಹೊಸ ಮಣ್ಣು ಮಳೆ ಕುಸಿದ ಪರಿಣಾಮ ಕ್ಯಾಂಟರ್‌ ಚಾಲಕನ ನಿಯಂತ್ರಣ ತಪ್ಪಿ ಹಳ್ಳಕ್ಕೆ ಉರುಳಿ ಬಿದ್ದಿದೆ.

ಕ್ಯಾಂಟರ್ ವಾಹನದಲ್ಲಿದ್ದ ಚಾಲಕ ಇಸ್ಮಾಯಿಲ್, ಮುಖೇಶ್ ಹಾಗೂ ಮತ್ತೋರ್ವನಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. ನೆಲಮಂಗಲ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.