ಮಾಜಿ ಡಿಸಿಎಂ ಪರಮೇಶ್ವರ್ ಸ್ವಕ್ಷೇತ್ರದ ಬರೋಬ್ಬರಿ 13 ಗ್ರಾಮದಿಂದ ಮತದಾನ ಬಹಿಷ್ಕಾರ!
ಮಾಜಿ ಡಿಸಿಎಂ ಪರಮೇಶ್ವರ್ ಸ್ವಕ್ಷೇತ್ರದಲ್ಲಿ ಬರೋಬ್ಬರಿ 13 ಗ್ರಾಮದ ಜನರು ಮತದಾನ ಬಹಿಷ್ಕರಿಸಿದ್ದಾರೆ. ಗ್ರಾಮದಲ್ಲಿ ಕಲ್ಲು ಗಣಿಗಾರಿಕೆ ನಡೆಸಲು ಅವಕಾಶ ಕೊಟ್ಟಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿ ಗ್ರಾಮಸ್ಥರು ಈ ನಿರ್ಧಾರ ತೆಗೆದುಕೊಂಡಿದ್ದಾರೆ.
ತುಮಕೂರು (ಏ.9): ಮಾಜಿ ಡಿಸಿಎಂ ಪರಮೇಶ್ವರ್ ಸ್ವಕ್ಷೇತ್ರದಲ್ಲಿ ಬರೋಬ್ಬರಿ 13 ಗ್ರಾಮದ ಜನರು ಮತದಾನ ಬಹಿಷ್ಕರಿಸಿದ್ದಾರೆ. ಗ್ರಾಮದಲ್ಲಿ ಕಲ್ಲು ಗಣಿಗಾರಿಕೆ ನಡೆಸಲು ಅವಕಾಶ ಕೊಟ್ಟಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿ ಗ್ರಾಮಸ್ಥರು ಈ ನಿರ್ಧಾರ ತೆಗೆದುಕೊಂಡಿದ್ದಾರೆ. 2016 ರಲ್ಲಿ ಕ್ರಷರ್ ನಡೆಸಲು ಅನುಮತಿ ನೀಡಲಾಗಿದೆ. ಗಣಿ ಮತ್ತು ಭೂವಿಜ್ಞಾನ ಹಾಗೂ ತುಮಕೂರು ಜಿಲ್ಲಾಧಿಕಾರಿಗಳಿಂದ ಶ್ರೀ ಧನಲಕ್ಷ್ಮಿ ಸ್ಟೋನ್ ಕ್ರಷರ್ ಗೆ ಗಣಿಗಾರಿಕೆ ಮಾಡಲು ಅವಕಾಶ ನೀಡಲಾಗಿದೆ. ಇದರ ಬೆನ್ನಲ್ಲೇ ಕ್ರಷರ್ ಪ್ರಾರಂಭಿಸಬಾರೆಂದು ಗ್ರಾಮಸ್ಥರು ಹೋರಾಟ ನಡೆಸುತ್ತಿದ್ದಾರೆ. 2016ರರಿಂದಲೂ ಗ್ರಾಮಸ್ಥರು ಹೋರಾಟ ನಡೆಸುತ್ತಿದ್ದಾರೆ.
ಆದರೆ ಗ್ರಾಮಸ್ಥರ ಮನವಿಗಳಿಗೆ ಅಧಿಕಾರಿಗಳು ಕ್ಯಾರೆ ಅನ್ನುತ್ತಿಲ್ಲ. ಅಧಿಕಾರಿಗಳ ನಡೆಗೆ ಬೇಸತ್ತಿರುವ ಗ್ರಾಮಸ್ಥರು ಮತದಾನ ಬಹಿಷ್ಕರಿಸಿದ್ದಾರೆ. ತುಮಕೂರು ತಾಲೂಕು ವ್ಯಾಪ್ತಿಯ ಬೆಳಧರ ಗ್ರಾಪಂ ವ್ಯಾಪ್ತಿಯ ಬರೋಬ್ಬರಿ 13 ಗ್ರಾಮಗಳ ಗ್ರಾಮಸ್ಥರು ಈ ದಿಟ್ಟ ನಿರ್ಧಾರ ಕೈಗೊಂಡಿದ್ದಾರೆ.
ಚಿನಿವಾರನಹಳ್ಳಿ, ಜಕ್ಕೆನಹಳ್ಳಿ, ಅನ್ನದಾನಿಪಾಳ್ಯ, ಸೀಗೇಹಳ್ಳ, ಗೌಡನಕಟ್ಟೆ, ಮಲ್ಲಯ್ಯನಪಾಳ್ಯ, ಚನ್ನಮುದ್ದನಹಳ್ಳಿ, ಮಸಣಿಪಾಳ್ಯ,ಅಹೋಬಲ ಅಗ್ರಹಾರ, ಹಿರೇಕೊಡತಕಲ್ಲು, ಮುದ್ದರಾಮಯ್ಯನಪಾಳ್ಯ ಸೇರಿ 13 ಹಳ್ಳಿಗಳು ಈ ನಿರ್ಧಾರ ಕೈಗೊಂಡಿದೆ. 13 ಹಳ್ಳಿಯ ಒಟ್ಟು 5000 ಕ್ಕೂ ಹೆಚ್ಚು ಮತದಾರರಿಂದ ಬಹಿಷ್ಕಾರ ಅಭಿಯಾನ ನಡೆಯುತ್ತಿದೆ. ಪ್ರತಿ ಗ್ರಾಮದಲ್ಲೂ ಪ್ಲೆಕ್ಸ್ ಹಾಕಿ ಬಹಿಷ್ಕಾರದ ಬಗ್ಗೆ ಮತದಾರರು ಅಭಿಯಾನ ಹಮ್ಮಿಕೊಂಡಿದ್ದು, ಕ್ರಷರ್ ಅನುಮತಿ ರದ್ದು ಪಡಿಸುವವರೆಗೂ ಮತದಾನ ಮಾಡೋಲ್ಲ ಎಂದು ಗ್ರಾಮಸ್ಥರು ಪಟ್ಟು ಹಿಡಿದಿದ್ದಾರೆ.
ತುಮಕೂರು ನಗರ ಕಾಂಗ್ರೆಸ್ ಬಂಡಾಯ, ಪರಮೇಶ್ವರ ಪ್ರತಿಕ್ರಿಯೆ:
ತುಮಕೂರು ನಗರ ಕಾಂಗ್ರೆಸ್ ನಲ್ಲಿ ಬಂಡಾಯ ಹಿನ್ನೆಲೆ ಕೊರಟಗೆರೆಯಲ್ಲಿ ಡಾ.ಜಿ.ಪರಮೇಶ್ವರ ಪ್ರತಿಕ್ರಿಯೆ ನೀಡಿದ್ದು, ಮಾಜಿ ಶಾಸಕ ಶಫಿ ಅಹ್ಮದ್ ಕುಟುಂಬಕ್ಕೆ ಟಿಕೆಟ್ ತಪ್ಪಲು ಕಾರಣ ನಾನಲ್ಲ. ಶಫಿ ಅಹ್ಮದ್ ಅವರು ಶಾಸಕರಾಗಿ, ಜಿಲ್ಲಾ ಅಧ್ಯಕ್ಷರಾಗಿ ಕೆಲಸ ಮಾಡಿದ್ದಾರೆ. ಅವರ ಬಗ್ಗೆ ನನಗೆ ಅಪಾರವಾದ ಗೌರವ ಇದೆ. ಅವರು ನನ್ನನ್ನು ವಿಶ್ವಾಸ ಘಾತುಕರು ಎಂದಿದ್ದಾರೆ. ಅವರು ಹಿರಿಯರಾಗಿದ್ದರಿಂದ ಅವರು ಏನೇ ಹೇಳಿದ್ರು ನಾನು ಸ್ವೀಕರಿಸುತ್ತೇನೆ.
ಟಿಕೆಟ್ ಫೈನಲ್ ಮಾಡೋದು ನನ್ನೊಬ್ಬನ ನಿರ್ಧಾರ ಅಲ್ಲ. ಕಾಂಗ್ರೆಸ್ ರಾಷ್ಟ್ರೀಯ ಚುನಾವಣಾ ಸಮಿತಿ ಅದನ್ನು ನಿರ್ಧರಿಸುತ್ತದೆ. ಆ ಸಮಿತಿಯಲ್ಲಿ 16-17 ಜನರು ಇರುತ್ತಾರೆ. ಅವರೆಲ್ಲರೂ ಸೇರಿ ಮಾಡಿರುವ ತೀರ್ಮಾನ ಇದು. ನನ್ನ ಅಭಿಪ್ರಾಯ ಏನಿದೆ ಅದನ್ನು ನಾನು ಸಮಿತಿ ಮುಂದೆ ಹೇಳಿದ್ದೇನೆ. ಅವರು ಅದನ್ನು ಪರಿಶೀಲನೆ ಮಾಡಿ ಅವರ ನಿರ್ಧಾರ ಪ್ರಕಟಿಸಿದ್ದಾರೆ.
ತುಮಕೂರು ಕಾಂಗ್ರೆಸ್ ನಲ್ಲಿ ಭುಗಿಲೆದ್ದ ಅಸಮಧಾನ, ಜಿ.ಪರಮೇಶ್ವರ್ ವಿಶ್ವಾಸ ಘಾತುಕ ಎಂದ ಮಾಜಿ ಶಾಸಕ
ಇಕ್ಬಾಲ್ ಅಹ್ಮದ್ ಕೂಡ ಸಾಮಾನ್ಯ ಕಾರ್ಯಕರ್ತ. ಅವರಿಗೆ ಯಾವ ಮಾನದಂಡ ಇಟ್ಟುಕೊಂಡು ಟಿಕೆಟ್ ಕೊಟ್ಟಿದ್ದಾರೆ ಗೊತ್ತಿಲ್ಲ. ಶಫಿ ಅಹ್ಮದ್ 50 ವರ್ಷ ಪಕ್ಷ ಕಟ್ಟಿ ಬೆಳೆಸಿದ್ದಾರೆ. ಅವರು ಪಕ್ಷ ತೊರೆಯದಂತೆ ನಾನು ಮನವಿ ಮಾಡುತ್ತೇನೆ.
ತುಮಕೂರು ಕಾಂಗ್ರೆಸ್ ನಲ್ಲಿ ಮುಂದುವರಿದ ರಾಜೀನಾಮೆ ಪಾಲಿಟಿಕ್ಸ್: ಕೆ.ಎನ್ ರಾಜಣ್ಣ ಶಿಷ್ಯ ರಾಜೀನಾಮೆ!
ಎರಡು ಕ್ಷೇತ್ರದ ಜಿ.ಪರಮೇಶ್ವರ ಟಿಕೆಟ್ ಕೇಳಿದ್ದಾರೆ ಎಂಬ ವಿಚಾರಕ್ಕೆ ಸಂಬಂಧಿಸಿ ಮಾತನಾಡಿದ ಅವರು, ನಾನು ಯಾವುದೇ ಸಂದರ್ಭದಲ್ಲೂ ಎಲ್ಲೂ ಎರಡು ಕಡೆ ಸ್ಪರ್ಧಿಸ್ತಿನಿ ಎಂದು ಹೇಳಿಲ್ಲ. ನಾನು ಎರಡು ಕಡೆ ನಿಲ್ಲೋದೂ ಇಲ್ಲ. ನಮ್ಮ ಹೈ ಕಮಾಂಡ್ ಕೊರಟಗೆರೆಯಲ್ಲಿ ನನಗೆ ಟಿಕೆಟ್ ಘೋಷಿಸಿದೆ. ಕೊರಟಗೆರೆಯಲ್ಲಿ ಮಾತ್ರ ನಿಲ್ಲುತ್ತೇನೆ. ನಾನು ಎಲ್ಲೂ ಕೇಳಿಲ್ಲ, ಎರಡು ಕಡೆ ನಿಲ್ಲುವ ಅವಶ್ಯಕತೆ ನನಗಿಲ್ಲ. ಕೊರಟಗೆರೆ ಕ್ಷೇತ್ರದ ಜನ ನನ್ನನ್ನು ಪ್ರೀತಿಯಿಂದ ಕಂಡಿದ್ದಾರೆ. ಎರಡು ಬಾರಿ ನನ್ನ ಗೆಲ್ಲಿಸಿದ್ದಾರೆ. ಹೀಗಾಗಿ ನಾನು ಯಾಕೆ ಕೊರಟಗೆರೆ ಜನರನ್ನು ಬಿಟ್ಟು ಬೇರೆ ಕಡೆ ಹೋಗಬೇಕು. ಕೊರಟಗೆರೆ ಕ್ಷೇತ್ರದ ಜನ ಈ ಚುನಾವಣೆಯಲ್ಲಿ ನನ್ನ ಪರ ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂಬ ವಿಶ್ವಾಸ ಇದೆ ಎಂದಿದ್ದಾರೆ.