ತುಮಕೂರು(ಆ.04): ತುಮಕೂರು- ಬೆಂಗಳೂರು ರೈಲ್ವೆ ಪ್ರಯಾಣಿಕರ ವೇದಿಕೆ ವತಿಯಿಂದ ರೈಲಿನ 6ನೇ ವರ್ಷದ ಹುಟ್ಟುಹಬ್ಬವನ್ನು ನಿಲ್ದಾಣದಲ್ಲಿ ವಿಜೃಂಭಣೆಯಿಂದ ಆಚರಿಸಲಾಯಿತು.

ಬೆಳಗ್ಗೆ 8 ಗಂಟೆಗೆ ರೈಲಿನ ಲೋಕೋ ಪೈಲೆಟ್‌ ವಿ.ಎನ್‌.ಪ್ರಸಾದ್‌ ಹಾಗೂ ಸಹ ಲೋಕೋ ಪೈಲೆಟ್‌ ವಿಶ್ವೇಶ್ವರ್‌ ಪ್ರಸಾದ್‌ ಮತ್ತು ಗಾರ್ಡ್‌ ಎನ್‌.ಕೆ.ನಿರಾಲ ಅವರಿಂದ ಕೇಕ್‌ ಕತ್ತರಿಸಿ ಸಂಭ್ರಮಿಸಿದರು. ಅಲ್ಲದೆ ಪ್ರಯಾಣಿಕರಿಗೆ ಕೇಕ್‌ ವಿತರಿಸಿ ಖುಷಿಯನ್ನು ಇಮ್ಮಡಿಗೊಳಿಸಿಕೊಂಡರು. ನಂತರ ಅದೇ ರೈಲಿನಲ್ಲಿ ಬೆಂಗಳೂರಿಗೆ ತೆರಳಿದ ವೇದಿಕೆಯ ಪದಾಧಿಕಾರಿಗಳು ರೈಲಿನ ಎಲ್ಲ ಪ್ರಯಾಣಿಕರಿಗೂ ಸಿಹಿ ವಿತರಿಸಿದರು.

ಉದ್ಯೋಗ ನಿಮಿತ್ತ ಬೆಂಗಳೂರಿಗೆ ಪ್ರತಿನಿತ್ಯ ಸಂಚರಿಸುವ ಉದ್ಯೋಗಿಗಳಿಗೆ ಅನುಕೂಲವಾಗಿದ್ದ ಬೆಳಗ್ಗೆ 8ಕ್ಕೆ ತುಮಕೂರು ಮಾರ್ಗವಾಗಿ ತೆರಳುತ್ತಿದ್ದ ಸೊಲ್ಲಾಪುರ-ಬೆಂಗಳೂರು ರೈಲಿನ ವೇಳೆ ಬದಲಾವಣೆಯಿಂದ ಪ್ರಯಾಣಿಕರಿಗೆ ತೊಂದರೆಯಾಗಿತ್ತು. ಆಗ ಒಂದಿಷ್ಟುಮಂದಿ ಉತ್ಸಾಹಿ ಪ್ರಯಾಣಿಕರು ನೇತೃತ್ವ ವಹಿಸಿ ಅಂದಿನ ರೈಲ್ವೇ ಸಚಿವ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿ ಪ್ರಯಾಣಿಕರಿಗೆ ಆಗುತ್ತಿದ್ದ ತೊಂದರೆಯನ್ನು ನಿವೇದಿಸಿಕೊಂಡರು. ಅಲ್ಲದೆ, ನೈಋುತ್ಯ ರೈಲ್ವೇ ಅಧಿಕಾರಿಗಳ ಮನವೊಲಿಸಿ ನೂತನ ರೈಲು ಆರಂಭಕ್ಕೆ ಕಾರಣವಾಗಿದ್ದ ಉತ್ಸಾಹಿ ಪ್ರಯಾಣಿಕರು ಸೇರಿ ವೇದಿಕೆಯೊಂದನ್ನು ಸ್ಥಾಪಿಸಿಕೊಂಡು ರೈಲ್ವೆ ಪ್ರಯಾಣಿಕರಿಗೆ ಅಗತ್ಯವಾಗಿರುವ ಅನುಕೂಲಗಳನ್ನು ಒದಗಿಸುತ್ತ ಬಂದಿದ್ದಾರೆ.

ವೇದಿಕೆ ಸ್ಥಾಪನೆ:

6 ವರ್ಷದ ಹಿಂದೆ ಆಗಸ್ಟ್‌ 3ರಂದು ಈ ಮಾರ್ಗದಲ್ಲಿ ರೈಲನ್ನು ಹೊಸದಾಗಿ ಮಂಜೂರು ಮಾಡಲಾಯಿತು. ಈ ಹಿನ್ನೆಲೆಯಲ್ಲಿ ಪ್ರತಿ ವರ್ಷದಿಂದ ರೈಲಿಗೆ ಹುಟ್ಟುಹಬ್ಬ ಆಚರಿಸುವ ಕಾರ್ಯ ಜಾರಿಗೆ ಬಂತು. ಶನಿವಾರ ಬೆಳ್ಳಂಬೆಳಗ್ಗೆಯೇ ನಿಲ್ದಾಣಕ್ಕೆ ಆಗಮಿಸಿದ ವೇದಿಕೆಯ ಪದಾಧಿಕಾರಿಗಳು ಮತ್ತು ಸದಸ್ಯರು ಪ್ರಯಾಣಿಕರ ಸಹಕಾರದೊಂದಿಗೆ ರೈಲಿಗೆ ಬಾಳೆ ಕಂದು, ಮಾವಿನ ಸೊಪ್ಪು ಕಟ್ಟಿ, ಹೂವಿನಿಂದ ಅಲಂಕರಿಸಿದರು. ಬಲೂನ್‌ ಬಂಟಿಂಗ್ಸ್‌ಗಳನ್ನೂ ಕಟ್ಟಿಖುಷಿಪಟ್ಟರು.

ಎತ್ತಿಗೆ 25ನೇ ವರ್ಷದ ಹುಟ್ಟು ಹಬ್ಬದ ಸಂಭ್ರಮ

ಇದೇ ಸಂದರ್ಭದಲ್ಲಿ ವೇದಿಕೆ ಅಧ್ಯಕ್ಷೆ ಬಾ.ಹ.ರಮಾಕುಮಾರಿ, ರೈಲ್ವೇ ಸುರಕ್ಷಾ ಪಡೆಯ ಉಪನಿರೀಕ್ಷಕ ಕುಬೇರಪ್ಪ ಮತ್ತು ತುಮಕೂರು ರೈಲ್ವೇ ವ್ಯವಸ್ಥಾಪಕ ರಮೇಶ್‌ ಬಾಬು ಮತ್ತು ಸಿಬ್ಬಂದಿ, ಡಿಆರ್‌ಯುಸಿಸಿ ಸದಸ್ಯ ರಘೋತ್ತಮರಾವ್‌ಭಾಗವಹಿಸಿದ್ದರು.

ಪ್ರತಿಭಾ ಪುರಸ್ಕಾರ:

ವೇದಿಕೆ ಆರಂಭದ ಆರನೇ ವರ್ಷಾಚರಣೆ ಅಂಗವಾಗಿ ಆಗಸ್ಟ್‌ 11ರ ಭಾನುವಾರ ಬೆಳಗ್ಗೆ 9 ಗಂಟೆಯಿಂದ ವೇದಿಕೆಯ ವತಿಯಿಂದ ಉಚಿತ ಆರೋಗ್ಯ ತಪಾಸಣೆ, ಕೀಲು-ಮೂಳೆ ಮತ್ತು ನೇತ್ರ ತಪಾಸಣೆ ಹಾಗೂ ರಕ್ತದಾನ ಶಿಬಿರ ನಡೆಯಲಿದೆ. ಇದರೊಂದಿಗೆ ರೈಲ್ವೇ ಪ್ರಯಾಣಿಕರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ, ನಿವೃತ್ತ ಪ್ರಯಾಣಿಕರಿಗೆ ಅಭಿನಂದನಾ ಸಮಾರಂಭ ನಡೆಯಲಿದೆ. ಸಂಸದ ಜಿ.ಎಸ್‌.ಬಸವರಾಜ್‌ ಉದ್ಘಾಟಿಸಲಿದ್ದು, ಶಾಸಕ ಜ್ಯೋತಿಗಣೇಶ್‌ ಪ್ರತಿಭಾ ಪುರಸ್ಕಾರ ವಿತರಿಸಲಿದ್ದಾರೆ.

ಭಾನುವಾರದ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ರೈಲ್ವೆ ಪ್ರಯಾಣಿಕರು ಭಾಗವಹಿಸಿ ಶಿಬಿರದ ಪ್ರಯೋಜನ ಪಡೆಯಬೇಕೆಂದು ವೇದಿಕೆಯ ಪದಾಧಿಕಾರಿಗಳು ಮನವಿ ಮಾಡಿದ್ದಾರೆ.

ಕರ್ನಾಟಕ ರಾಜಕೀಯದ ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ