ಹುಬ್ಬಳ್ಳಿ(ಜು.13): ಅಕ್ರಮ ಗೋಸಾಗಣೆ, ಗೋಹತ್ಯೆಯಂತಹ ಘಟನೆಗಳೇ ಸುದ್ದಿಯಾಗುತ್ತಿರುವ ದಿನಗಳಲ್ಲಿ ಹುಬ್ಬಳ್ಳಿಯ ಅನ್ನದಾತರೊಬ್ಬರು ತಮ್ಮ ಮನೆಯಲ್ಲಿ ಹುಟ್ಟಿ ಬೆಳೆದು ಮನೆಗಾಗಿ ದುಡಿದ ಎತ್ತಿನ 25ನೇ ವರ್ಷದ ಹುಟ್ಟು ಹಬ್ಬ ಆಚರಿಸಿ ರೈತ ಮಿತ್ರನಿಗೆ ಗೌರವ ಸಲ್ಲಿಸಿದ್ದಾರೆ.

ಅಶೋಕ ಗಾಮನಗಟ್ಟಿ ಕುಟುಂಬಸ್ಥರು ಎತ್ತಿಗೆ ವಿಶೇಷ ಪೂಜೆ ಮಾಡಿ, ಆರತಿ ಬೆಳಗಿ ಕೇಕ್ ಕತ್ತರಿಸಿ ಸಂಭ್ರಮಾಚರಣೆ ಮಾಡುವ ಮೂಲಕ‌ ವಿಶಿಷ್ಟವಾಗಿ ಹುಟ್ಟು ಹಬ್ಬ ಆಚರಿಸಿದರು. 1994 ಜುಲೈ 12 ರಂದು ಅದರಗುಂಚಿ ಗ್ರಾಮದಲ್ಲಿ ಈ ಎತ್ತು ಜನಿಸಿತ್ತು. ಗಾಮನಗಟ್ಟಿಯವರ ಮನೆಯಲ್ಲಿ ಸಾಕಿದ ಆಕಳಿಗೆ ಜನಿಸಿದ ಎತ್ತು ಇದಾಗಿದ್ದು, ಇದಕ್ಕೆ 'ರಾಮ‌' ಎಂದು ನಾಮ‌ಕರಣ ಮಾಡಿದ್ದಾರೆ.‌ ಸುಮಾರು 16 ವರ್ಷಗಳ ಕಾಲ ಮನೆತನದ ವ್ಯವಸಾಯದಲ್ಲಿ ಭಾಗಿಯಾಗಿ ಮನೆಗಾಗಿ ದುಡಿದಿದೆ.‌ ಎತ್ತಿನ ಜೊತೆಗೆ ಇವರ ಕುಟುಂಬಕ್ಕಿರುವ ಆತ್ಮೀಯತೆಗೆ ಇದು ಸಾಕ್ಷಿಯಾಗಿದೆ.‌