ತುಮಕೂರು(ಜ.24): ಒಬ್ಬ ಬಾಲಕ ಸೇರಿ ಮೂವರ ರಕ್ತ ಹೀರಿದ ನರಹಂತಕ ಚಿರತೆ ಕಾರ್ಯಾಚರಣೆಗೆ ಹಿನ್ನೆಡೆಯಾಗಿದ್ದು ಚಿರತೆ ಸೆರೆ ಹಿಡಿಯಲು ಆಗಮಿಸಿದ್ದ ವಿಶೇಷ ಹುಲಿ ಕಾರ್ಯಪಡೆ ತಂಡ ವಾಪಾಸ್‌ ಹೋಗಿದೆ.

ಎರಡು ತಿಂಗಳಿನಿಂದ ಮೂವರನ್ನು ಚಿರತೆ ಬಲಿ ತೆಗೆದುಕೊಂಡಿದೆ. ಹೆಬ್ಬೂರು ಸಮೀಪ ಲಕ್ಷಮ್ಮ ಎಂಬ ಮಹಿಳೆಯನ್ನು ಬಲಿ ತೆಗೆದುಕೊಳ್ಳುವ ಮೂಲಕ ತುಮಕೂರು ತಾಲೂಕಿನಲ್ಲಿ ಚಿರತೆಯೊಂದು ನರಹಂತಕವಾಗಿರುವ ಸುಳಿವನ್ನು ನೀಡಿತು. ಇದರ ಬೆನ್ನಲ್ಲೇ ಕುಣಿಗಲ್‌ ತಾಲೂಕಿನ ಕೊತ್ತಗೆರೆ ಹೋಬಳಿಯ ದೊಡ್ಡಮಳಲವಾಡಿಯಲ್ಲಿ ಅಂದಾನಪ್ಪ ಎಂಬುವರನ್ನು ಆಹುತಿ ತೆಗೆದುಕೊಂಡಿತು. ಬಳಿಕ ಗುಬ್ಬಿ ತಾಲೂಕು ಮಣಿಕುಪ್ಪೆಯಲ್ಲಿ ಬಾಲಕ ಸಮರ್ಥಗೌಡ ಎಂಬ ಬಾಲಕನನ್ನು ಬಲಿತೆಗೆದುಕೊಂಡಿತು.

ಬೆಳ್ಳಂಬೆಳಗ್ಗೆ ಹುಲಿ ಪ್ರತ್ಯಕ್ಷ, ಅರ್ಧ ಗಂಟೆ ರಸ್ತೆಯಲ್ಲೇ ವಾಕಿಂಗ್..!

ಮೂರನೇ ಬಲಿ ತೆಗೆದುಕೊಂಡಾಗ ರಾಜ್ಯಾದ್ಯಂತ ನರಹಂತಕ ಚಿರತೆ ಪ್ರಕರಣ ಸದ್ದು ಮಾಡಿತು. ಮೊದಲೆರೆಡು ಬಲಿಯಾದಾಗಲೇ ಅರಣ್ಯ ಇಲಾಖೆ ನರಹಂತಕ ಚಿರತೆ ಸೆರೆಗೆ ಕ್ರಮ ಕೈಗೊಂಡಿತ್ತು. ಹೆಬ್ಬೂರು, ನಾಗವಲ್ಲಿ ಸುತ್ತಮುತ್ತ ಹಾಗೂ ಕುಣಿಗಲ್‌ ತಾಲೂಕು ದೊಡ್ಡಮಳಲವಾಡಿ ಸುತ್ತಮುತ್ತ ಬೋನುಗಳನ್ನು ಇಡಲಾಗಿತ್ತು. ಎರಡು ತಿಂಗಳ ಹಿಂದೆ ಬೋನಿನೊಳಗೆ ಚಿರತೆಯೊಂದು ಬಿದ್ದಿತ್ತು. ಆದರೆ ಅದು ನರಹಂತಕ ಎಂದೆಲ್ಲಾ ಬಿಂಬಿಸಲಾಗಿತ್ತು. ಆದರೆ ಅದಾದ ಬಳಿಕ ಬಾಲಕನನ್ನು ಬಲಿ ತೆಗೆದುಕೊಂಡಾಗ ಅವತ್ತು ಬೋನಿಗೆ ಬಿದ್ದಿದ್ದು ನರಹಂತಕ ಚಿರತೆಯಲ್ಲ ಎಂಬ ತೀರ್ಮಾನಕ್ಕೆ ಬರಲಾಯಿತು.

60 ಮಂದಿ ಸಿಬ್ಬಂದಿಯ ಕಾರ್ಯಾಚರಣೆ ವ್ಯರ್ಥ:

ಎರಡು ತಿಂಗಳಿನಿಂದ ಚಿರತೆ ಸೆರೆ ಹಿಡಿಯಲು ಅರಣ್ಯ ಇಲಾಖೆ 60 ಮಂದಿ ಸಿಬ್ಬಂದಿಯನ್ನು ಕಾರ್ಯಾಚರಣೆಯಲ್ಲಿ ಬಳಸಿಕೊಂಡಿದ್ದರೂ ನಿರೀಕ್ಷಿತ ಫಲಿತಾಂಶ ಸಿಗುತ್ತಿಲ್ಲ. ಇದರಿಂದ ಅವರ ಶ್ರಮ ವ್ಯರ್ಥವಾದಂತಾಗಿದೆ. ಹೆಬ್ಬೂರು, ದೊಡ್ಡಮಳಲವಾಡಿ ಸುತ್ತಮುತ್ತ ಅಳವಡಿಸಿರುವ ಕ್ಯಾಮರಾಗಳಲ್ಲಿ ಚಿರತೆ ಬೋನಿನ ಬಳಿ ಬಂದು ಹೋಗಿದೆ ಬಿಟ್ಟರೆ ಬೋನಿನೊಳಗೆ ಹೋಗಿ ಅಲ್ಲಿ ಕಟ್ಟಿರುವ ನಾಯಿಯನ್ನು ತಿನ್ನುವ ಗೋಜಿಗೆ ಬಂದಿಲ್ಲ. ಈಗಾಗಲೇ ಒಂದೇ ಕಡೆ ಒಂದು ಗಂಡು, ಒಂದು ಹೆಣ್ಣು ಮತ್ತು 2 ಮರಿಗಳು ಇವೆ. ಅದರ ಕಾರ್ಯಾಚರಣೆ ಕಷ್ಟವಾಗಿದೆ.

ಚಿರತೆ ಬಂತು ಚಿರತೆ

ಅರಣ್ಯ ಇಲಾಖೆಗೆ ವಾರದಲ್ಲಿ ನಾಲ್ಕಾರು ಬಳಿ ನಮ್ಮ ಗ್ರಾಮದಲ್ಲಿ ಚಿರತೆ ಬಂದಿತ್ತು ಎಂಬ ದೂರುಗಳು ಬರುತ್ತಲೇ ಇವೆ. ಗ್ರಾಮಸ್ಥರ ದೂರುಗಳಿಗೆ ಸ್ಪಂದಿಸಿ ಅಲ್ಲಿಗೆ ಹೋಗುವಷ್ಟರಲ್ಲಿ ಚಿರತೆ ಕಾಲ್ಕಿತ್ತಿರುತ್ತದೆ. ಹೀಗಾಗಿ ಚಿರತೆ ಕಾರ್ಯಾಚರಣೆ ಕಷ್ಟವಾಗಿದೆ.

ಒಂದೇ ಕಡೆ 10ಕ್ಕೂ ಹೆಚ್ಚು ಸುಳಿವು:

ಸದ್ಯ ಚಿರತೆ ಕಾರ್ಯಾಚರಣೆ ನಡೆಸುತ್ತಿರುವ 10 ಕಿಮೀ. ವ್ಯಾಪ್ತಿಯಲ್ಲೇ 10ಕ್ಕೂ ಹೆಚ್ಚು ಚಿರತೆಗಳು ಇವೆ ಎಂಬುದು ಗ್ರಾಮಸ್ಥರ ಅಭಿಪ್ರಾಯವಾಗಿದೆ. ಗ್ರಾಮಸ್ಥರ ಈ ಮಾತನ್ನು ಅರಣ್ಯ ಇಲಾಖೆ ಕೂಡ ತಳ್ಳಿ ಹಾಕುತ್ತಿಲ್ಲ. ಕೆಲವು ಕಡೆ ಗ್ರಾಮಗಳಿಗೆ ನುಗ್ಗಿ ಕುರಿ ಮರಿಗಳನ್ನು ಬೇಟೆಯಾಡುತ್ತಿವೆ. ಇನ್ನು ಕೆಲವು ಕಡೆ ತಾನಿರುವ ಜಾಗದಲ್ಲೇ ನಾಯಿ, ಕುರಿಮರಿಗಳು ಸುಲಭವಾಗಿ ಬೇಟೆಗೆ ಸಿಗುತ್ತಿದೆ.

ನಾಯಿಗಳು ನಾಪತ್ತೆ

ಗ್ರಾಮಗಳಲ್ಲಿ ಅಡ್ಡಾಡುತ್ತಿದ್ದ ಬೀಡಾಡಿ ನಾಯಿಗಳು ಕಳೆದ ಎರಡು ತಿಂಗಳಿನಿಂದ ಒಂದೊಂದೆ ಕಣ್ಮರೆಯಾಗುತ್ತಿದ್ದು ಇದೆಲ್ಲವೂ ಚಿರತೆಗಳಿಗೆ ಆಹುತಿಯಾಗಿರಬಹುದು ಎಂಬ ಶಂಕೆ ಬಲವಾಗಿ ಬೇರೂರಿದೆ. ಕೆಲವು ಕಡೆಯಂತೂ ಮೇಕೆಗಳನ್ನು ಮೇಯಿಸಲು ಕಾಡಿಗೆ ಹೋದಾಗ ಮೇಕೆ ಹಿಂಡಿನಿಂದ ಬೇರ್ಪಟ್ಟಮರಿಗಳನ್ನು ಚಿರತೆಗಳು ಹೊತ್ತೊಯ್ದಿವೆ.

9 ವರ್ಷಗಳ ಹಿಂದೆಯೇ ನರಹಂತಕ ಚಿರತೆ ಹೆಜ್ಜೆ

ತುಮಕೂರು ಜಿಲ್ಲೆಯಲ್ಲಿ 9 ವರ್ಷಗಳ ಹಿಂದೆಯೇ ನರಹಂತಕ ಚಿರತೆಯ ಹೆಜ್ಜೆ ಗುರುತುಗಳು ಪತ್ತೆಯಾಗಿತ್ತು. ತಿಪಟೂರು ತಾಲೂಕಿನ ಅಮೃತ ಕಾವಲ್‌ವೊಂದರ ಬಳಿ ಪುಟಾಣಿ ಮಗುವನ್ನು ನರಹಂತಕ ಚಿರತೆ ಹೊತ್ತೊಯ್ದಿತ್ತು. ಮತ್ತೆ ಮನುಷ್ಯರನ್ನು ಬಲಿ ತೆಗೆದುಕೊಂಡ ಪ್ರಕರಣಗಳು ಬೆಳಕಿಗೆ ಬರಲಿಲ್ಲ. ಈಗ ಎರಡು ತಿಂಗಳ ಅವಧಿಯಲ್ಲಿ ಮೂರು ವ್ಯಕ್ತಿಗಳನ್ನು ಬಲಿ ತೆಗೆದುಕೊಂಡಿರುವುದು ಜನರನ್ನು ಭಯದ ಕೂಪಕ್ಕೆ ತಳ್ಳಿದೆ.

ಸೆರೆ ಹಿಡಿಯುವುದು ಹೇಗೆ ಎಂಬ ಜಿಜ್ಞಾಸೆ

ಎರಡು ತಿಂಗಳಿನಿಂದ ಚಿರತೆ ಬೇಟೆಗೆ ಇಟ್ಟಿದ್ದ ಬೋನಿಗೆ ಚಿರತೆಗಳು ಬಾರದೇ ಇರುವುದರಿಂದ ಅರಣ್ಯ ಇಲಾಖೆಗೆ ಅಕ್ಷರಶಃ ತಲೆ ನೋವಾಗಿದೆ. ಈ ಚಿರತೆಗಳನ್ನು ಹೇಗೆ ಹಿಡಿಯುವುದು ಎಂಬ ಜಿಜ್ಞಾಸೆಯಲ್ಲಿ ತೊಡಗಿದೆ. ಒಂದು ವೇಳೆ ಚಿರತೆ ಪ್ರತ್ಯಕ್ಷವಾದರೆ ಅವನ್ನು ಕೊಲ್ಲುವಂತಿಲ್ಲ. ಬೋನಿಗೆ ಬೀಳುತ್ತಿಲ್ಲ. ಹೀಗಾಗಿ ಚಿರತೆ ಸೆರೆ ಕಷ್ಟಸಾಧ್ಯ ಎಂಬ ನಿರ್ಣಯಕ್ಕೆ ಇಲಾಖೆ ಬಂದಿದೆ ಎನ್ನಲಾಗಿದೆ.

ಹೆಬ್ಬೂರು, ಕುಣಿಗಲ್‌ ಹಾಗೂ ಗುಬ್ಬಿ ತಾಲೂಕಿನ ಕೆಲ ಭಾಗಗಳಲ್ಲಿ ಮಾತ್ರ ಜನರು ಚಿರತೆ ಇವತ್ತೋ, ನಾಳೆಯೋ ಬೋನಿಗೆ ಬೀಳಬಹುದು ಎಂಬ ನಿರೀಕ್ಷೆಯಲ್ಲೇ ಭಯದ ವಾತಾವರಣದಲ್ಲೇ ಬದುಕುವಂತಾಗಿದೆ.

-ಉಗಮ ಶ್ರೀನಿವಾಸ್‌