ನಗರದ ಉಪವಿಭಾಗಾಧಿಕಾರಿಗಳ ಕಚೇರಿ ಮುಂದೆ ಕೊಬ್ಬರಿ ಬೆಳೆಗಾರರ ಹೋರಾಟ ಸಮಿತಿ, ಹಸಿರು ಸೇನೆ, ರೈತ ಸಂಘದ ವತಿಯಿಂದ ಕ್ವಿಂಟಲ್‌ ಕೊಬ್ಬರಿಗೆ 20 ಸಾವಿರ ರು. ಬೆಂಬಲ ಬೆಲೆ ನಿಗದಿಪಡಿಸುವಂತೆ ಆಗ್ರಹಿಸಿ ಹಮ್ಮಿಕೊಂಡಿರುವ ಅನಿರ್ದಿಷ್ಟಾವಧಿ ಧರಣಿ 20ನೇ ದಿನಕ್ಕೆ ಕಾಲಿಟ್ಟಿದ್ದು, ಇಂದಿನ ಧರಣಿಗೆ ಭಾರತೀಯ ವೈದ್ಯಕೀಯ ಸಂಘದ ತಾಲೂಕು ಶಾಖೆಯು ಬೆಂಬಲ ವ್ಯಕ್ತಪಡಿಸಿ ತೆಂಗುಬೆಳೆಗಾರರ ಬಗ್ಗೆ ಸರ್ಕಾರ ಹಾಗೂ ಜನಪ್ರತಿನಿಧಿಗಳ ನಿರ್ಲಕ್ಷ್ಯವನ್ನು ತೀವ್ರವಾಗಿ ಖಂಡಿಸಲಾಯಿತು.

 ತಿಪಟೂರು : ನಗರದ ಉಪವಿಭಾಗಾಧಿಕಾರಿಗಳ ಕಚೇರಿ ಮುಂದೆ ಕೊಬ್ಬರಿ ಬೆಳೆಗಾರರ ಹೋರಾಟ ಸಮಿತಿ, ಹಸಿರು ಸೇನೆ, ರೈತ ಸಂಘದ ವತಿಯಿಂದ ಕ್ವಿಂಟಲ್‌ ಕೊಬ್ಬರಿಗೆ 20 ಸಾವಿರ ರು. ಬೆಂಬಲ ಬೆಲೆ ನಿಗದಿಪಡಿಸುವಂತೆ ಆಗ್ರಹಿಸಿ ಹಮ್ಮಿಕೊಂಡಿರುವ ಅನಿರ್ದಿಷ್ಟಾವಧಿ ಧರಣಿ 20ನೇ ದಿನಕ್ಕೆ ಕಾಲಿಟ್ಟಿದ್ದು, ಇಂದಿನ ಧರಣಿಗೆ ಭಾರತೀಯ ವೈದ್ಯಕೀಯ ಸಂಘದ ತಾಲೂಕು ಶಾಖೆಯು ಬೆಂಬಲ ವ್ಯಕ್ತಪಡಿಸಿ ತೆಂಗುಬೆಳೆಗಾರರ ಬಗ್ಗೆ ಸರ್ಕಾರ ಹಾಗೂ ಜನಪ್ರತಿನಿಧಿಗಳ ನಿರ್ಲಕ್ಷ್ಯವನ್ನು ತೀವ್ರವಾಗಿ ಖಂಡಿಸಲಾಯಿತು.

ಈ ವೇಳೆ ಭಾರತೀಯ ವೈದ್ಯಕೀಯ ಸಂಘದ ಅಧ್ಯಕ್ಷ ಡಾ. ನಾಗರಾಜು ಮಾತನಾಡಿ, ಕೊಬ್ಬರಿ ಬೆಲೆ ಕುಸಿತದಿಂದ ತೆಂಗುಬೆಳೆಗಾರರು ಕಂಗಾಲಾಗಿದ್ದು ದಿಕ್ಕು ತೋಚದೆ ಹತಾಶರಾಗಿದ್ದಾರೆ. ಈ ಭಾಗದ ರೈತರ ಜೀವನೋಪಾಯಕ್ಕಿರುವ ಕೊಬ್ಬರಿಗೆ ಸರಿಯಾದ ಬೆಲೆ ಇಲ್ಲದಿರುವುದರಿಂದ ಜೀವನ ನಿರ್ವಹಣೆ ಕಷ್ಟಕರವಾಗಿದೆ. ತೆಂಗುಬೆಳೆಗಾರರು ಹಾಗೂ ಸಂಘಟನೆಗಳು ಕಳೆದ 20 ದಿನಗಳಿಂದಲೂ ಕೊಬ್ಬರಿಗೆ ಬೆಂಬಲ ಬೆಲೆ ನೀಡಬೇಕೆಂದು ಒತ್ತಾಯಿಸಿ ಅನಿರ್ದಿಷ್ಟಾವಧಿ ಧರಣಿ ನಡೆಸುತ್ತಿದ್ದು ಸರ್ಕಾರವು ಇವರ ಬೇಡಿಕೆಯ ಬಗ್ಗೆ ಸೂಕ್ತ ತೀರ್ಮಾನ ತೆಗೆದುಕೊಳ್ಳಬೇಕೆಂದು ಮನವಿ ಮಾಡಿದರು.

ಡಾ. ಅನಿಲ್‌ ಮಾತನಾಡಿ, ಕೊಬ್ಬರಿ ಬೆಂಬಲ ಬೆಲೆಗಾಗಿ ರೈತರು ಹಮ್ಮಿಕೊಂಡಿರುವ ಧರಣಿಗೆ ಭಾರತೀಯ ವೈದ್ಯಕೀಯ ಸಂಘದ ತಾಲೂಕು ಶಾಖೆಯು ಬೆಂಬಲ ವ್ಯಕ್ತಪಡಿಸುತ್ತಿದ್ದು ನಾವುಗಳು ಜಾತ್ಯತೀತ ಹಾಗೂ ಪಕ್ಷಾತೀತವಾಗಿ, ಯಾವ ಒತ್ತಡವೂ ಇಲ್ಲದೆ ಸ್ವಇಚ್ಚೆಯಿಂದ ಸಂಪೂರ್ಣವಾಗಿ ಬೆಂಬಲ ನೀಡುತ್ತಿದ್ದೇವೆ. ನಮ್ಮ ಬೆಂಬಲ ಸದಾ ರೈತಪರವಾಗಿದ್ದು ಸರ್ಕಾರ ಕೂಡಲೆ ರೈತರ ಬೇಡಿಕೆಯನ್ನು ಆಲಿಸಿ ಈಡೇರಿಸಬೇಕೆಂದು ಒತ್ತಾಯಿಸಿದರು.

ಧರಣಿಯಲ್ಲಿ ಭಾರತೀಯ ವೈದ್ಯಕೀಯ ಸಂಘ ತಾಲೂಕು ಶಾಖೆಯ ಕಾರ್ಯದರ್ಶಿ ಡಾ. ಮಧುಸೂಧನ್‌, ಖಜಾಂಚಿ ಡಾ. ಅಮರ್‌ನಾಥ್‌, ಡಾ. ಸುದರ್ಶನ್‌, ಡಾ. ನಟರಾಜು, ಡಾ. ಜಗದೀಶ್‌, ಡಾ. ಹೇಮಂತ್‌, ಡಾ. ಸುರೇಶ್‌, ಡಾ. ಮಹೇಶ್ವರಿ, ಡಾ. ಗಂಗಾಮಣಿ, ಡಾ. ಉಮೇಶ್‌, ಡಾ. ಕವಿತಾ, ಡಾ. ಸತೀಶ್‌, ನಗರಸಭೆ ಮಾಜಿ ಸದಸ್ಯೆ ರೇಖಾ ಅನೂಪ್‌, ಕಲ್ಪತರು ಮಹಿಳಾ ಸಂಸ್ಥೆ ಅಧ್ಯಕ್ಷೆ ಭಾಗ್ಯಮೂರ್ತಿ, ಕದಳಿ ಬಳಗದ ಪ್ರಭಾವಿಶ್ವನಾಥ್‌, ಹೋರಾಟ ಸಮಿತಿ ಗೌರವಾಧ್ಯಕ್ಷ ಬಿ.ಬಿ.ಸಿದ್ದಲಿಂಗಮೂರ್ತಿ, ಸಹ ಕಾರ್ಯದರ್ಶಿ ಜಯಚಂದ್ರ ಶರ್ಮ, ರೈತ ಮುಖಂಡ ಮನೋಹರ ಪಟೇಲ್‌ ಮತ್ತಿತರರ ರೈತರಿದ್ದರು.

ಕೋಟ್‌....

ನಮ್ಮ ಪ್ರತಿಭಟನೆಗೆ ಭಾನುವಾರಕ್ಕೆ 21 ದಿನ ತುಂಬಲಿದ್ದು, ಹೋರಾಟದ ದಿಕ್ಕನ್ನು ಬದಲಾಯಿಸಲು ಸಾಂಕೇತಿಕವಾಗಿ ಮಾ.12ರ ಭಾನುವಾರ ಸರ್ಕಾರದ ವಿರುದ್ಧ ಕಪ್ಪು ಪಟ್ಟಿಧರಿಸಿ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳಲಾಗುತ್ತಿದೆ. ಇದಕ್ಕೂ ಸರ್ಕಾರ ತನ್ನ ನಿಲುವನ್ನು ತಿಳಿಸದಿದ್ದರೆ ರಸ್ತೆಗಿಳಿದು ಹೋರಾಟ ಮಾಡುವ ಬಗ್ಗೆ ಚಿಂತನೆ ನಡೆಸಿದ್ದು ರೈತರ ಶಕ್ತಿ ಎಷ್ಟಿದೆ ಎಂದು ಪ್ರದರ್ಶಿಸುತ್ತೇವೆ.

ಬಿ.ಯೋಗೀಶ್ವರಸ್ವಾಮಿ ಅಧ್ಯಕ್ಷ, ಕೊಬ್ಬರಿ ಬೆಳೆಗಾರರ ಹೋರಾಟ ಸಮಿತಿ

ಫೋಟೋ 11-ಟಿಪಿಟಿ4ರಲ್ಲಿ ಕಳುಹಿಸಲಾಗಿದೆ. ಶೀರ್ಷಿಕೆ :

ತಿಪಟೂರು ಉಪವಿಭಾಗಾಧಿಕಾರಿಗಳ ಕಚೇರಿ ಮುಂದೆ ಕೊಬ್ಬರಿಗೆ ಬೆಂಬಲ ಬೆಲೆ ನಿಗದಿ ಪಡಿಸುವಂತೆ ಆಗ್ರಹಿಸಿ ರೈತ ಸಂಘಟನೆಗಳು ಹಮ್ಮಿಕೊಂಡಿರುವ ಅನಿರ್ದಿಷ್ಟಾವಧಿ ಧರಣಿಗೆ ಬೆಂಬಲ ವ್ಯಕ್ತಪಡಿಸಿದ ಭಾರತೀಯ ವೈದ್ಯಕೀಯ ಸಂಘ ತಾಲೂಕು ಶಾಖೆಯ ಪದಾಧಿಕಾರಿಗಳು.