ಚಾಮರಾಜನಗರ: 14 ವರ್ಷ ಬಳಿಕ ಆದಿವಾಸಿಗಳ ಮನೆ ಬಾಗಿಲಿಗೆ ಆಧಾರ್ ಕಾರ್ಡ್..!
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೆಚ್ಚಿನ ಖಾತ್ರಿ ಯೋಜನೆಗಳನ್ನು ಪಡೆಯಲು ಮತ್ತು ಆರೋಗ್ಯ ರಕ್ಷಣೆ ಪಡೆಯಲು ಆಧಾರ್ ಕಾರ್ಡ್‌ಗಳನ್ನು ನೀಡಲು ಜಿಲ್ಲಾಡಳಿತವು ಅವರ ಮನೆಬಾಗಿಲು ತಲುಪಿರುವುದರಿಂದ ಹಲವಾರು ವರ್ಷಗಳಿಂದ ಆಧಾರ್ ಇಲ್ಲದೆ ಸೌಲಭ್ಯಗಳಿಂದ ವಂಚಿತರಾಗಿದ್ದವರಿಗೆ ಇದೀಗ ಹಲವು ಸೌಲಭ್ಯ ಪಡೆಯಲು ಸಹಕಾರಿಯಾಗಿದೆ.
ದೇವರಾಜು ಕಪ್ಪಸೋಗೆ
ಚಾಮರಾಜನಗರ(ಜ.02): ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (ಯುಐಡಿಎಐ) ಆರಂಭಗೊಂಡ 14 ವರ್ಷಗಳ ನಂತರ ಹಿಂದುಳಿದ ಚಾಮರಾಜನಗರ ಜಿಲ್ಲೆಯ ದೂರದ ಪ್ರದೇಶಗಳಲ್ಲಿ ವಾಸಿಸುವ ಆದಿವಾಸಿಗಳು ತಮ್ಮ ಆಧಾರ್ ಕಾರ್ಡ್‌ಗಳನ್ನು ಪಡೆದುಕೊಂಡಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೆಚ್ಚಿನ ಖಾತ್ರಿ ಯೋಜನೆಗಳನ್ನು ಪಡೆಯಲು ಮತ್ತು ಆರೋಗ್ಯ ರಕ್ಷಣೆ ಪಡೆಯಲು ಆಧಾರ್ ಕಾರ್ಡ್‌ಗಳನ್ನು ನೀಡಲು ಜಿಲ್ಲಾಡಳಿತವು ಅವರ ಮನೆಬಾಗಿಲು ತಲುಪಿರುವುದರಿಂದ ಹಲವಾರು ವರ್ಷಗಳಿಂದ ಆಧಾರ್ ಇಲ್ಲದೆ ಸೌಲಭ್ಯಗಳಿಂದ ವಂಚಿತರಾಗಿದ್ದವರಿಗೆ ಇದೀಗ ಹಲವು ಸೌಲಭ್ಯ ಪಡೆಯಲು ಸಹಕಾರಿಯಾಗಿದೆ.
ಚಾಮರಾಜನಗರ ಜಿಲ್ಲೆಯ ಚಾಮರಾಜನಗರ, ಹನೂರು, ಕೊಳ್ಳೇಗಾಲ, ಯಳಂದೂರು ಮತ್ತು ಗುಂಡ್ಲುಪೇಟೆ ತಾಲೂಕಿನ 158 ಹಾಡಿಗಳಲ್ಲಿ 32 ಸಾವಿರಕ್ಕೂ ಹೆಚ್ಚು ಮಂದಿ ಆದಿವಾಸಿಗಳಿದ್ದು, ದೂರದ ಹಾಡಿಗಳಿಂದ ಆಧಾರ್ ಕಾರ್ಡ್ ಮಾಡಿಸಲು ಬರಲು ಸಾಧ್ಯವಾಗದೆ ಸಾವಿರಾರು ಮಂದಿಗೆ ಆಧಾರ್ ಕಾರ್ಡ್ ಇಲ್ಲದೆ ಸೌಲಭ್ಯಗಳಿಂದ ವಂಚಿತರಾಗಿದ್ದರು, ವೃದ್ಧರು ಆಧಾರ್ ಕಾರ್ಡ್ ಪಡೆಯಲು ಜಿಲ್ಲಾಧಿಕಾರಿ ಕಚೇರಿಗೆ ಬರಬೇಕಿತ್ತು, ಒಮ್ಮೆ ವೃದ್ಧರೊಬ್ಬರು ಆಧಾರ್ ಕಾರ್ಡ್ ಪಡೆಯಲು ಜಿಲ್ಲಾಧಿಕಾರಿ ಕಚೇರಿಗೆ ಬರುತ್ತಿರುವುದನ್ನು ಗಮನಿಸಿದ ಜಿಲ್ಲಾಧಿಕಾರಿ ಶಿಲ್ಪಾನಾಗ್ ಅವರು ವೃದ್ಧರ ಸಮಸ್ಯೆ ಆಲಿಸಿ, ಸರ್ಕಾರದ ಗಮನ ಸೆಳೆದು ವಿಶೇಷ ಅಭಿಯಾನ ಆರಂಭಿಸುವ ಮೂಲಕ 2974 ಮಂದಿ ಆದಿವಾಸಿಗಳ ಮನೆ ಬಾಗಿಲಿಗೆ ತೆರಳಿ 14 ವರ್ಷಗಳ ನಂತರ ಆಧಾರ್ ಕಾರ್ಡ್ ಮಾಡಿಸಿಕೊಡುವಲ್ಲಿ ಯಶಸ್ವಿಯಾಗಿದ್ದಾರೆ.
ಭಿಕ್ಷೆ ಬೇಡುವ ಬಾಲಕಿಯನ್ನೂ ಬಿಡದೇ ಕಾರಿನಲ್ಲಿ ಕೈಕಾಲು ಕಟ್ಟಿ ಎತ್ತಾಕೊಂಡೋದ ಕೇರಳದ ಕಾಮಿಷ್ಟರು!
2023ರ ಆಗಸ್ಟ್ 30 ರಿಂದ ಪ್ರಾರಂಭವಾದ ಅಭಿಯಾನದಿಂದ 152 ಹಾಡಿಯಲ್ಲಿ 520 ಹೊಸ ಕಾರ್ಡ್‌ಗಳನ್ನು ಒಳಗೊಂಡಂತೆ 2,974 ಆಧಾರ್ ಕಾರ್ಡ್‌ಗಳನ್ನು ನೀಡಲಾಗಿದೆ. ಇಂದು ಪ್ರತಿ ಮಗು ಅಥವಾ ವ್ಯಕ್ತಿ ಯಾವುದೇ ಸೌಲಭ್ಯ ಪಡೆಯಲು ಆಧಾರ್ ಕಾರ್ಡ್ ಅವಶ್ಯಕವಾಗಿದ್ದು, ಆಧಾರ್ ಕಾರ್ಡ್ ಇಲ್ಲದ ಪರಿಣಾಮ ಪಡಿತರ, ಸಂದ್ಯಾಸುರಕ್ಷಾ, ಆಯುಷ್ಮಾನ್, ಬ್ಯಾಂಕ್ ಖಾತೆ ತೆರೆಯಲು ಸಾಧ್ಯವಾಗಿರಲಿಲ್ಲ. ಕೆಲವರಿಗೆ ಜಾತಿ ಪ್ರಮಾಣ ಪತ್ರವೂ ಸಿಕ್ಕಿರಲಿಲ್ಲ. ಅನಾರೋಗ್ಯಕ್ಕೆ ಒಳಗಾದ ಆದಿವಾಸಿಗಳು ಆಸ್ಪತ್ರೆಗೆ ದಾಖಲಾಗಲು ಸಾಧ್ಯವಾಗದೆ, ತೀವ್ರ ಅನಾರೋಗ್ಯಕ್ಕೆ ತುತ್ತಾಗಿ ಸಾವನಪ್ಪುತ್ತಿದ್ದರು. ಇಂತಹ ಸಮಸ್ಯೆಗಳಿಗೆ ಮುಕ್ತಿ ನೀಡಬೇಕು ಎಂದು ಜಿಲ್ಲಾಧಿಕಾರಿ ಮುಂದಾದ ಪರಿಣಾಮ ಆಧಾರ್ ಕಾರ್ಡ್ ಜೊತೆಗೆ ಅನೇಕ ಸೌಲಭ್ಯಗಳು ಆದಿವಾಸಿಗಳ ಮನೆ ಬಾಗಿಲಿಗೆ ತಲುಪುತ್ತಿವೆ.
ಬುಡಕಟ್ಟು ಸಮುದಾಯವು ಪೌಷ್ಟಿಕ ಆಹಾರವನ್ನು ಪಡೆಯುತ್ತಿದ್ದರೂ, ರಾಜ್ಯ ಸರ್ಕಾರದ ವಿವಿಧ ಕಾರ್ಯಕ್ರಮಗಳ ಅಡಿಯಲ್ಲಿ ಪ್ರಯೋಜನಗಳನ್ನು ಪಡೆಯಲು ಆಧಾರ್ ಕಾರ್ಡ್ ಇರಲಿಲ್ಲ. ಸೌಲಭ್ಯಗಳನ್ನು ಪಡೆಯಲು ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಅನ್ನು ಲಿಂಕ್ ಮಾಡಬೇಕಾಗಿತ್ತು. ಇದೀಗ ಎಲ್ಲಾರಿಗೂ ಆಧಾರ್ ಕಾರ್ಡ್ ಸಿಕ್ಕುತ್ತಿರುವುದರಿಂದ ಸೌಲಭ್ಯಗಳು ಸಿಗುವಂತಾಗಿದೆ ಎಂದು ಬುಡಕಟ್ಟು ಜನಾಂಗದ ಮುಖಂಡ ಬೊಮ್ಮಯ್ಯ ಹೇಳಿದರು.
ಆರ್ಥಿಕ ಸಬಲೀಕರಣ ಮತ್ತು ಕಲ್ಯಾಣ ಯೋಜನೆಗಳನ್ನು ಬಳಸಿಕೊಳ್ಳಲು ನಾನು ಸರ್ಕಾರಿ ಇಲಾಖೆಗಳನ್ನು ಸಂಪರ್ಕಿಸಿದೆ. ಆದರೆ, ಅವರು ಆಧಾರ್ ಮತ್ತು ಪಡಿತರ ಚೀಟಿಗಳನ್ನು ಪುರಾವೆಯಾಗಿ ನೀಡಲು ತಿಳಿಸಿದರು. ನಮ್ಮ ಬಳಿ ಯಾವುದೇ ಗುರುತಿನ ಚೀಟಿ ಇಲ್ಲದ ಪರಿಣಾಮ ಸೌಲಭ್ಯಗಳಿಂದ ವಂಚಿತಳಾಗಿದ್ದೆ. ಜಿಲ್ಲಾಡಳಿತ ಆಧಾರ್ ಕಾರ್ಡ್ ನೀಡಿದ್ದರಿಂದ ಶಕ್ತಿ ಕಾರ್ಯಕ್ರಮದ ಅಡಿಯಲ್ಲಿ ಉಚಿತ ಬಸ್ ಸೌಲಭ್ಯವನ್ನು,ಇತ್ತೀಚೆಗೆ ತನ್ನ ಆಧಾರ್ ಕಾರ್ಡ್ ತೋರಿಸಿ ಉಚಿತ ಸೇವೆಯನ್ನು ಬಳಸಿಕೊಳ್ಳುವ ಮೂಲಕ ಈಗ ಅತ್ಯಂತ ಸಂತೋಷವಾಗಿದೆ. ಮುಂದೆ ಎಲ್ಲ ಸೌಲಭ್ಯಗಳು ಸಿಗಲಿವೆ ಎಂದು ಆದಿವಾಸಿ ಮಹಿಳೆ ರತ್ನಮ್ಮ ತಿಳಿಸಿದರು.
ಸುಳ್ಳುಗಾರ, ವಚನಭ್ರಷ್ಠ ಸಿಎಂ ಸಿದ್ದರಾಮಯ್ಯ: ಮಾಜಿ ಶಾಸಕ ಎನ್.ಮಹೇಶ್
ಮನೆ ಮನೆಗೆ ತೆರಳಿ ಮಾಹಿತಿ ಸಂಗ್ರಹ
ಆರೋಗ್ಯ ಅಧಿಕಾರಿಗಳು, ಗಿರಿಜನ ಕಲ್ಯಾಣ, ಆಹಾರ ಮತ್ತು ನಾಗರಿಕ ಸರಬರಾಜು ಮತ್ತು ಆರೋಗ್ಯ ಸಿಬ್ಬಂದಿ ಸೇರಿದಂತೆ ಅಧಿಕಾರಿಗಳ ತಂಡ ಮನೆ ಮನೆಗೆ ತೆರಳಿ ಪಡಿತರ ಚೀಟಿ, ಆರೋಗ್ಯ ಹೊಂದಿದೆಯೇ ಎಂದು ಪರಿಶೀಲಿಸುತ್ತಿದ್ದಾರೆ. ಪ್ರತಿಯೊಂದು ಕುಟುಂಬದ ಮಾಹಿತಿಯನ್ನು ಸಂಗ್ರಹಿಸಿ ಪಟ್ಟಿ ಮಾಡಲಾಗುತ್ತಿದೆ ಎಂದು ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಗಿರಿಜನ ಅಧಿಕಾರಿ ಮಂಜುಳಾ ಹೇಳಿದರು.
ಯಾವುದೇ ಸೌಲಭ್ಯಗಳನ್ನು ನೀಡಬೇಕಾದರೆ ಆಧಾರ್ ಕಾರ್ಡ್ ಅವಶ್ಯಕ. ಕೆಲವು ಆದಿವಾಸಿಗಳು ಆಧಾರ್ ಕಾರ್ಡ್ ಹೊಂದಿಲ್ಲದ ವಿಚಾರ ತಿಳಿದು. ಜಿಲ್ಲಾಡಳಿತವೇ ಅವರ ಬಳಿಗೆ ತೆರಳಿ ಆಧಾರ್ ಕಾರ್ಡ್ ಮಾಡಿಕೊಟ್ಟು, ಸರ್ಕಾರದ ಸೌಲಭ್ಯಗಳ ಬಗ್ಗೆಯೂ ಮನವರಿಕೆ ಮಾಡಿಕೊಡುವ ಕೆಲಸ ಮಾಡಲಾಗುತ್ತಿದೆ. ಜನವರಿ ಅಂತ್ಯದೊಳಗೆ ಪ್ರತಿಯೊಬ್ಬ ಆದಿವಾಸಿಗೂ ಆಧಾರ್ ಕಾರ್ಡ್ ಸಿಗುವಂತೆ ಮಾಡಲಾಗುವುದು ಎಂದು ಚಾಮರಾಜನಗರ ಜಿಲ್ಲಾಧಿಕಾರಿ ಶಿಲ್ಪಾನಾಗ್ ತಿಳಿಸಿದ್ದಾರೆ.